ಒಂದು ಕಲಾಕೃತಿ ಒಂದು ಕಾದಂಬರಿಗೆ ಸಮ- ಅಶೋಕ ಯಡಳ್ಳಿ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 16:
ಕ್ಯಾನವಾಸ್ ಆರ್ಟ್ ಫೌಂಡೇಶನ್ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದೊಂದಿಗೆ ವಿಶ್ವ ದೃಶ್ಯಕಲಾ ದಿನಾಚರಣೆಯ ಅಂಗವಾಗಿ ಕ್ಯಾನವಾಸ್ ಆರ್ಟ್ ಫೌಂಡೇಶನ್ ನಾಡಿನ ಶ್ರೇಷ್ಠ ಕಲಾವಿದರ ಕಲಾಕೃತಿಗಳ ಪ್ರದರ್ಶನ ವಿಜಯಪುರದಲ್ಲಿ ಆಯೋಜಿಸಿರುವುದು ಅತ್ಯಂತ ಸಂತಸದ ಸಂಗತಿ. ದೃಶ್ಯಕಲಾ ಕ್ಷೇತ್ರದ ಪ್ರತಿಷ್ಠಿತ ಪ್ರಶಸ್ತಿ ವರ್ಣಶಿಲ್ಪಿ ವೆಂಕಟಪ್ಪ ಪುರಸ್ಕೃತ ಕಲಾವಿದರ ಕಲಾಕೃತಿಗಳು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕಲಾವಿದ ವಾಸುದೇವ ಕಾಮಾತ್ ಅವರ ಕಲಾ ಕೃತಿ ಜೊತೆಗೆ ನಾಡಿನ ಹಿರಿಯ ಮತ್ತು ಯುವ ಕಲಾವಿದರ ಕಲಾಕೃತಿಗಳು ಒಂದೆಡೆ ನೋಡಲು ಸಿಗುವುದು ಅಪರೂಪದ ಸಂಗತಿ. ಇಂಥ ಕಲಾಕೃತಿಗಳ ಪ್ರದರ್ಶನವನ್ನು ವಿಜಯಪುರದ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಉದ್ಘಾಟಿಸಲು ಸಂತೋಷವೆನಿಸುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಬೋವಿ ಕಲಾಕೃತಿಗಳನ್ನು ನೋಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇಲಾಖೆಯಿಂದ ನೀಡುವ ಅನುದಾನವನ್ನು ಕಲಾವಿದರು ಸಂಘ ಸಂಸ್ಥೆಗಳು ಸರಿಯಾಗಿ ಉಪಯೋಗ ಮಾಡಿ ಸಮಾಜಕ್ಕೆ ಮಾದರಿಯಾಗುವ ಕೆಲಸ ಕಲಾವಿದರಿಂದ ಆಗಲಿ ಎಂದರು.
ಅತಿಥಿಗಳಾಗಿ ಆಗಮಿಸಿದ ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಅಶೋಕ್ ಯಡಳ್ಳಿ ಅವರು ಮಾತನಾಡಿ, ಇವತ್ತಿನ ಆಧುನಿಕ ಯುಗದಲ್ಲಿ ಎಐ ಜಗತ್ತಿನಲ್ಲಿ ಎಲ್ಲರೂ ಕ್ಷಣಿಕ ಸಂತಸಕ್ಕಾಗಿ ಆಧುನಿಕ ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ. ಆದರೆ ಕಲಾವಿದರು ಸಮಾಜದ ಅಂಕುಡೊಂಕುಗಳನ್ನು ತಮ್ಮ ಕಲಾಕೃತಿಗಳ ಮೂಲಕ ಚಿತ್ರಿಸಿ ಸಮಾಜಕ್ಕೆ ಸಂದೇಶ ನಿಡುತ್ತ ಮಾದರಿಯಾಗುತ್ತಿದ್ದಾರೆ. ಕಲಾವಿದರಿಂದ ಸಮಾಜದ ಬೆಳವಣಿಗೆ ಸಾಧ್ಯವಾಗಿದೆ. ಒಂದು ಕಲಾಕೃತಿ ಒಂದು ವಿಶೇಷ ಅನುಭವವನ್ನೇ ನೀಡುತ್ತದೆ. ಒಂದು ಕಲಾಕೃತಿ ಒಂದು ಕಾದಂಬರಿಗೆ ಸಮ. ಸಾವಿರ ಪದಗಳಿಗೂ ಮೀರುವ ಶಕ್ತಿ ಒಂದು ಚಿತ್ರಕ್ಕೆ ಇದೆ. ಅಂತ ಶ್ರೇಷ್ಠ ಕಲಾವಿದರ ಕಲಾಕೃತಿಗಳು ವಿಜಯಪುರದಲ್ಲಿ ನಡೆಯುತ್ತಿರುವುದು ಅದನ್ನು ವೀಕ್ಷಿಸುವುದು ನಮ್ಮ ಸೌಭಾಗ್ಯ ಎಂದರು.
ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಅರವಿಂದ ಹೂಗಾರ ಮಾತನಾಡಿ, ನಮ್ಮ ಇಲಾಖೆಯಲ್ಲಿಯ ಈ ಗ್ಯಾಲರಿಯು ಕಲಾವಿದರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ನಿರ್ಮಿಸಿದ್ದು, ಕಲಾವಿದರು ಇದರ ಸದುಪಯೋಗ ಪಡೆಯುತ್ತಿದ್ದಾರೆ. ನಿರಂತರವಾಗಿ ಇಲ್ಲಿ ಪ್ರದರ್ಶನಗಳನ್ನು ಕಲಾವಿದರು ನಡೆಸಬೇಕು. ಅದಕ್ಕೆ ಎಲ್ಲ ರೀತಿಯ ಸಹಕಾರ ಮಾಡಲು ಇಲಾಖೆ ಸಿದ್ದವಿದೆ ಎಂದರು.
ಇನ್ನೊರ್ವ ಅತಿಥಿಗಳಾಗಿ ಆಗಮಿಸಿದ ಹಿರಿಯ ಕಲಾವಿದ ಪಿ. ಎಸ್ ಕಡೇಮನಿ ಅವರು ಮಾತನಾಡಿ, ಈ ಕಲಾಪ್ರದರ್ಶನದಲ್ಲಿ ಇರುವ ಕಲಾಕೃತಿಗಳು ಬೇರೆ ಎಲ್ಲೂ ಪ್ರದರ್ಶನವಾಗಿಲ್ಲ. ಅತ್ಯಂತ ಶ್ರೇಷ್ಠ ಹಿರಿಯ ಕಲಾವಿದರ ಕಲಾಕೃತಿಗಳು ಇಲ್ಲಿ ಪ್ರದರ್ಶನವಾಗುತ್ತಿರುವುದು. ಇದನ್ನು ಏರ್ಪಡಿಸಿರುವ ಕ್ಯಾನ್ವಾಸ್ ಆರ್ಟ್ ಫೌಂಡೇಶನ್‌ಗೆ ಅಭಿನಂದನೆಗಳು. ಇಂಥ ಕಲಾಕೃತಿಗಳು ನೋಡಲು ಸಿಗುವುದು ಅಪರೂಪ ಅದರಲ್ಲೂ ಸಂಸ್ಥೆ ಈ ರೀತಿಯ ಕಲಾಕೃತಿಗಳನ್ನು ಸಂಗ್ರಹಿಸಿಟ್ಟಿರೋದು ಅತ್ಯಂತ ಶ್ರೇಷ್ಠ ಕೆಲಸ. ವಿಜಯಪುರದ ಕಲಾವಿದರು ಕಲಾಸಕ್ತರು ಈ ಪ್ರದರ್ಶನವನ್ನು ಮರೆಯದೆ ವೀಕ್ಷಿಸಿ ಆಸ್ವಾದಿಸಬೇಕೆಂದು ವಿನಂತಿಸಿಕೊಂಡರು. ವಿದ್ಯಾಧರ ಸಾಲಿ ಸ್ವಾಗತಿಸಿದರು. ಕ್ಯಾನ್ವಾಸ್ ಆರ್ಟ್ ಫೌಂಡೇಶನ್ ಕಾರ್ಯದರ್ಶಿ ರಮೇಶ ಚವ್ಹಾಣ ಪ್ರಾಸ್ಥಾವಿಕವಾಗಿ ಮಾತನಾಡಿದರು.
ಈ ಪ್ರದರ್ಶನದಲ್ಲಿ ನಮ್ಮ ನಾಡಿನ ಹೆಸರಾಂತ ಹಿರಿಯ ಕಲಾವಿದರುಗಳಾದ ಸೋಮಶೇಖರ ಸಾಲಿ, ಎಸ್.ಎಸ್.ಮುನ್ನೊಳ್ಳಿ, ಎಂ. ಬಿ. ಪಾಟೀಲ್, ಆರ್. ಎಂ. ಹಡಪದ, ವಿಜಯ ಸಿಂಧೂರ, ಪ್ರೊ. ಎಂ. ಜೆ. ಕಮಲಾಕ್ಷಿ, ವಿ. ಬಿ.ಹಿರೇಗೌಡರ್, ಎಂ. ಎಸ್. ಚಂದ್ರಶೇಖರ, ವೈ. ಎಚ್. ಸೂಗೂರ, ಪಿ. ಎನ್. ಚೋಯಾಲ್, ಕೆ. ಬಾಲ್‌ಗೋಪಾಲನ್, ವಾಸುದೇವ ಕಾಮತ್, ಡಾ. ವಿ. ಜಿ. ಅಂದಾನಿ, ಎಂ. ಆರ್. ಬಾಳಿಕಾಯಿ, ಪಿ. ಎಸ್. ಪುಂಚಿತ್ತಾಯ, ಆರ್. ಎಂ. ಪಳನಿಯಪ್ಪನ್, ಪಿ. ಎಸ್. ಕಡೇಮನಿ, ಕೆ. ಕೆ. ಮಕಾಳಿ, ಎ.ಎಂ. ಪ್ರಕಾಶ, ಬಿ. ಕೆ. ಬಡಿಗೇರ, ವಿದ್ಯಾಧರ ಸಾಲಿ, ಎಂ. ಮೋಹನ್, ದಯಾನಂದ ತಪಶೆಟ್ಟಿ, ಪ್ರಭಾಕರ್ ಎಲ್. ಬಿ.,ಬಿ. ಎಸ್. ಪಾಟೀಲ, ವಿಜಯರಾಜ ಬೋಧನಕರ್, ಅಂಬಾರಾಯ್ ಚಿನಮಳ್ಳಿ, ಬಾಬು ಜತ್ತಕರ್, ಕಮಲ್ ಅಹಮ್ಮದ, ಎಂ. ನಂದಬಸಪ್ಪ ವಾಡೆ, ಎಂ. ಜಿ. ಮಕಾನದಾರ್, ಕಂದನ್ ಜಿ, ಕೂಡಲ ಹಿರೇಮಠ, ರಾಘವೇಂದ್ರ ಪಾಟೀಲ, ಮಂಜುನಾಥ ವಾಲಿ, ಶ್ರೀಕಾಂತ ರಜಪೂತ, ರಮೇಶ ಚವ್ಹಾಣ, ಲಿಂಗರಾಜ ಕಾಚಾಪುರ ಮುಂತಾದ ಕಲಾವಿದರ ಕಲಾಕೃತಿಗಳು ನೋಡುಗರನ್ನು ಮಂತ್ರಮುಗ್ಧರಾಗಿಸುತ್ತಿವೆ.
ಈ ಪ್ರದರ್ಶನವು ಏ.15 ರಿಂದ 19ರ ವರೆಗೆ ಮುಂಜಾನೆ 10 ರಿಂದ ಸಂಜೆ 5 ರ ವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ. ಉಚಿತ ಪ್ರವೇಶವಿದೆ. ಎಲ್ಲ ಕಲಾಸಕ್ತರು ಆಗಮಿಸಿ ಈ ಅಪರೂಪದ ಕಲಾ ಪ್ರದರ್ಶನ ವೀಕ್ಷಿಸಲು ಕೋರಿದರು.

Share this