ದೇವಾಲಯದ ಗಂಟೆಗಳಿಗಿಂತ ಶಾಲೆಯ ಗಂಟೆಗಳ ಸಂಖ್ಯೆ ಹೆಚ್ಚಾದಾಗಲೇ ಬಡ ಮಕ್ಕಳಿಗೆ ಅವಕಾಶಗಳು ಸಿಗುತ್ತವೆ – ಶ್ರೀನಾಥ ಪೂಜಾರಿ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 28:
ವಿಜಯಪುರ ನಗರದಲ್ಲಿರುವ ಖಾಸಗಿ ಸಂಸ್ಥೆಯಾದ ಶ್ರೀ ಸಾಯಿರಾಮ್ ಗ್ರಂಥಾಲಯದಲ್ಲಿ ಓದಿ ವಿವಿಧ ಸರ್ಕಾರಿ ಉದ್ಯೋಗಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.
ಶ್ರೀ ಸಾಯಿರಾಮ್ ಗ್ರಂಥಾಲಯದಲ್ಲಿ ಅಭ್ಯಾಸ ಮಾಡಿಕೊಂಡು ರಾಜ್ಯ ಹಾಗೂ ಕೇಂದ್ರ ಸರ್ಕಾರದ CISF, BSF ಸೇರಿದಂತೆ ವಿವಿಧ ಇಲಾಖೆಗಳ ಸರ್ಕಾರಿ ಉದ್ಯೋಗಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಗ್ರಂಥಾಲಯದ ಮುಖ್ಯಸ್ಥರಾದ ಹುಚ್ಚಪ್ಪ ಅವರು ಮಾಡುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ.
ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಸಾಯಿರಾಮ್ ಗ್ರಂಥಾಲಯದಲ್ಲಿ ಓದಿದ ವಿದ್ಯಾರ್ಥಿಗಳು ದೇಶ ಸೇವೆಗೆ ಸೇರ್ಪಡೆಯಾಗಿರುವುದು ಸಣ್ಣ ಸಾಧನೆಯಲ್ಲ. ಇಂತಹ ಅವಕಾಶಗಳು ಎಲ್ಲ ವಿದ್ಯಾರ್ಥಿಗಳಿಗೆ ಸರ್ವಸಾಮಾನ್ಯವಾಗಿ ಸಿಗುವುದಿಲ್ಲ.
ಗ್ರಂಥಾಲಯದಲ್ಲಿ ಇರುವ ಶಿಸ್ತುಬದ್ಧ ಓದು ವ್ಯವಸ್ಥೆ ಮತ್ತು ನಿರಂತರ ಮಾರ್ಗದರ್ಶನವೇ ಈ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ. ಓದಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಸರಿಯಾದ ದಾರಿ ತೋರಿಸುವ ಇಂತಹ ಗ್ರಂಥಾಲಯಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆರಂಭವಾಗಬೇಕೆಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ದಲಿತ ವಿದ್ಯಾರ್ಥಿ ಪರಿಷತ್ ಅಧ್ಯಕ್ಷರಾದ ಶ್ರೀನಾಥ ಪೂಜಾರಿ, “ಬಾಬಾಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ, ದೇವಾಲಯದ ಗಂಟೆಗಳಿಗಿಂತ ಶಾಲೆಯ ಗಂಟೆಗಳ ಸಂಖ್ಯೆ ಹೆಚ್ಚಾದಾಗಲೇ ಬಡ ಹಾಗೂ ಶೋಷಿತ ಸಮುದಾಯದ ಮಕ್ಕಳಿಗೆ ನಿಜವಾದ ಅವಕಾಶಗಳು ಸಿಗಲು ಸಾಧ್ಯ” ಎಂದು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪುಂಡಲೀಕ್ ಮಾನ್ನವರ ಮಾತನಾಡಿ, “ನಾನು ವಿದ್ಯಾರ್ಥಿಯಾಗಿದ್ದಾಗ ಅನೇಕ ಕಷ್ಟಗಳು ನಮ್ಮ ಜೊತೆಯಲ್ಲಿದ್ದವು. ಆದರೆ ಅವೆಲ್ಲವನ್ನೂ ಲೆಕ್ಕಿಸದೆ ನಮ್ಮ ಗುರಿಯ ಮೇಲೆ ಮಾತ್ರ ಗಮನಹರಿಸಿ ಓದಿದ್ದೇವೆ. ವಿದ್ಯಾರ್ಥಿಗಳಾದ ನೀವು ಕೂಡ ನಿಮ್ಮ ಗುರಿಯನ್ನು ಸ್ಪಷ್ಟವಾಗಿ ಮನಸ್ಸಿನಲ್ಲಿ ಇಟ್ಟುಕೊಂಡು ಅಧ್ಯಯನ ಮಾಡಬೇಕು” ಎಂದು ಸಲಹೆ ನೀಡಿದರು.
ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕರಾದ ಅಕ್ಷಯ್ ಕುಮಾರ್ ಅಜಮನಿ ಮಾತನಾಡಿ, “ಪ್ರತಿವರ್ಷ ವಿಜಯಪುರ ನಗರಕ್ಕೆ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ. ಆದರೆ ಅವರಲ್ಲಿ ಸಾಧನೆ ಮಾಡುವವರು ಕೇವಲ ಎರಡು ಶೇಕಡಾ ಮಾತ್ರ. ಓದಲು ಬಯಸುವ ವಿದ್ಯಾರ್ಥಿಗಳಿಗೆ ದಲಿತ ವಿದ್ಯಾರ್ಥಿ ಪರಿಷತ್ ಯಾವಾಗಲೂ ಸಹಕಾರ ನೀಡುತ್ತದೆ. ಯಾರೂ ಭಯಪಡುವ ಅವಶ್ಯಕತೆ ಇಲ್ಲ; ಯಾವುದೇ ಸಂದರ್ಭದಲ್ಲಾದರೂ ವಿದ್ಯಾರ್ಥಿ ಪರಿಷತ್ ನಿಮ್ಮೊಂದಿಗೆ ನಿಲ್ಲುತ್ತದೆ” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಸಾಯಿರಾಮ್ ಗ್ರಂಥಾಲಯದ ಮುಖ್ಯಸ್ಥರಾದ ಹುಚ್ಚಪ್ಪ, ಗ್ರಂಥಾಲಯದ ವಿದ್ಯಾರ್ಥಿಗಳು, ಫಿಸಿಕಲ್ ಟ್ರೈನಿಂಗ್ ಗುರುಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share this