ನಾರಿಶಕ್ತಿ ಅಭಿವಂದನ್ ಮಸೂದೆ ಅಂಗೀಕಾರಕ್ಕೆ ಪ್ರತಿಪಕ್ಷಗಳ ವಿರೋಧ: ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 25 : ನಾರಿಶಕ್ತಿ ಅಭಿವಂದನ್ ಮಸೂದೆ ಅಂಗೀಕಾರವಾಗದಂತೆ ಕುತಂತ್ರ ಮಾಡಿದ ಕಾಂಗ್ರೆಸ್ ಹಾಗೂ ಇನ್ನಿತರ ಪ್ರತಿಪಕ್ಷಗಳ ವಿರುದ್ಧ ವಿಜಯಪುರದಲ್ಲಿ ನಾರಿಶಕ್ತಿ ಅಭಿವಂದನ್ ಫೋರಂ ಪದಾಧಿಕಾರಿಗಳು ಪ್ರತಿಭಟನಾ ರ‍್ಯಾಲಿ ನಡೆಸಿದರು.
ವಿಜಯಪುರದ ಶ್ರೀ ಸಿದ್ದೇಶ್ವರ ದೇವಾಲಯದಿಂದ ಆರಂಭಗೊಂಡ ರ‍್ಯಾಲಿ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು.
ನಾರಿಶಕ್ತಿ – ದೇಶದ ಶಕ್ತಿ, ಮಹಿಳಾ ಸಬಲೀಕರಣ ವಿಷಯದಲ್ಲಿ ಬೇಡ ರಾಜಕಾರಣ ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಾ ನಾರಿಶಕ್ತಿ ಮಸೂದೆ ಅಂಗೀಕಾರವಾಗದಂತೆ ಕುತಂತ್ರ ಮಾಡಿದ ಪ್ರತಿಪಕ್ಷಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಅಸಮಾಧಾನ ಹೊರಹಾಕಿದರು.
ಫೋರಂನ ಪ್ರಮುಖರಾದ ಡಾ. ವಿಜಯಲಕ್ಷ್ಮಿ ತುಂಗಳ ಮಾತನಾಡಿ, ಪ್ರತಿಪಕ್ಷಗಳು ನಾರಿಶಕ್ತಿ ಅಭಿವಂದನ್ ಮಸೂದೆ ಜಾರಿಯಾಗದಂತೆ ನೋಡಿಕೊಂಡು ಸಮಸ್ತ ಸ್ತ್ರೀ ಕುಲಕ್ಕೆ ಅವಮಾನ ಮಾಡಿವೆ. ಮಹಿಳಾ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆಶಯ ಪೂರ್ಣವಾಗಿ ಜಾರಿಗೆ ತರಲು ಉದ್ದೇಶಿಸಿದ ಈ ಕಾಯ್ದೆಗೆ ಬೆಂಬಲ ನೀಡದೇ ಪ್ರತಿಪಕ್ಷಗಳು ಮಹಿಳಾ ವಿರೋಧಿ ನೀತಿ ಅನುಸರಿಸಿವೆ. ಶಾಸನ ಸಭೆಗಳಲ್ಲಿ ಶೇ.33 ರಷ್ಟು ಮೀಸಲಾತಿ ನೀಡುವ ಈ ಮಸೂದೆ ಮಹಿಳಾ ಆಡಳಿತ ಸಹಭಾಗಿತ್ವಕ್ಕೆ ಹೊಸ ಭಾಷ್ಯ ಬರೆಯುತ್ತಿತ್ತು. ಇದನ್ನು ಸಹಿಸದ ಪ್ರತಿಪಕ್ಷಗಳು ಈ ಕಾಯ್ದೆ ವಿರೋಧಿಸಿವೆ ಎಂದು ಅಸಮಾಧಾನ ಹೊರಹಾಕಿದರು.
ನಾರಿ ಶಕ್ತಿ ವಂದನಾ ಕಾಯ್ದೆಗೆ ಸೋಲುಂಟಾಗಿರುವುದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಉದ್ದೇಶವನ್ನು ಕರಾಳ ದಿನವಾಗಿಸಿದೆ. ಅಣ್ಣ ಬಸವಣ್ಣ, ಡಾ.ಬಿ.ಆರ್. ಅಂಬೇಡ್ಕರ್ ಅವರ ಮಹದಾಶಯಗಳಿಗೆ ಕಾಂಗ್ರೆಸ್ ದ್ರೋಹ ಮಾಡಿದಂತಾಗಿದೆ. ಬಿಜೆಪಿ ಅನೇಕ ಮಹಿಳಾ ಮುಖ್ಯಮಂತ್ರಿಗಳನ್ನು ಮಾಡಿದೆ. ಕಾಂಗ್ರೆಸ್ ಪಕ್ಷ ತನ್ನ ಮಹಿಳಾ ವಿರೋಧಿ ನೀತಿ ಮುಂದುವರೆಸುತ್ತಲೇ ಇದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಿದಾಗಲೂ ವಿರೋಧ,ಸಿಎಎ ಅನುಷ್ಠಾನಕ್ಕೂ ವಿರೋಧವಿತ್ತು. ತ್ರಿವಳಿ ತಲಾಖ್ ರದ್ದನ್ನೂ ವಿರೋಧಿಸಿದ್ದರು. ಜಿಎಸ್‌ಟಿ ಜಾರಿಗೂ ವಿರೋಧ ಮಾಡಿದರು ಎಂದರು.
ಆಯುಷ್ಮಾನ್ ಭಾರತ್ ಅನುಷ್ಠಾನಕ್ಕೆ ವಿರೋಧ, ಹೊಸ ಸಂಸತ್ತಿನ ಭವನ ನಿರ್ಮಾಣಕ್ಕೂ ವಿರೋಧ, ನಕ್ಸಲ್‌ವಾದ ಅಂತ್ಯ ಹಾಕಿದ್ದಕ್ಕೂ ವಿರೋಧ ಇವರದಾಗಿತ್ತು. ದೇಶ ರಕ್ಷಣೆಗಾಗಿ ಸರ್ಜಿಕಲ್ ಸ್ಟ್ರೈಕ್ , ಏರ್ ಸ್ಟ್ರೈಕ್, ಆಪರೇಷನ್ ಸಿಂಧೂರ ಮಾಡಿದರೆ ಅದಕ್ಕೂ ವಿರೋಧ ಎಂದರೆ ಹೇಗೆ ಎಂದು ಖಾರವಾಗಿ ಪ್ರಶ್ನಿಸಿದರು.
ಕಾಂಗ್ರೆಸ್‌ನ ಸ್ತ್ರೀ ಕುಲದ ಬಗೆಗಿನ ಕಳಕಳಿ ಕೇವಲ ಮೊಸಳೆ ಕಣ್ಣೀರು ಎಂಬುದು ಸಾಬೀತಾಗಿದೆ. ಜನಸಂಖ್ಯೆ ಆಧಾರದಲ್ಲಿ ಜನಪ್ರತಿನಿಧಿಗಳ ಹೆಚ್ಚಳದಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಆಗುವುದಿಲ್ಲ. ಇದು ಕೇವಲ ಸುಳ್ಳು ಸುದ್ದಿ ಅಷ್ಟೇ. ಕಾಂಗ್ರೆಸ್ ಪಕ್ಷ ಇನ್ನಾದರೂ ಕುಟೀಲ ನೀತಿ ಬಿಟ್ಟು ಸಮಸ್ತ ಮಹಿಳಾ ಕುಲದ ಕ್ಷಮೆಯಾಚಿಸಿ ಕಾಯ್ದೆಗೆ ಬೆಂಬಲಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಉಪ ಮಹಾಪೌರರಾದ ಸುಮಿತ್ರ ಜಾದವ್ ಮಲ್ಲಮ್ಮ, ಜೋಗೂರ, ಭಾರತಿ ಬಯಾರ್, ಪ್ರಭಾವತಿ ಪಾಟೀಲ, ಗೀತಾ, ಸುನೀತಾ ಒಡೆಯರ, ಡಾ.ಮಹಾನಂದಾ, ಅನ್ನಪೂರ್ಣ ರಾಠೋಡ, ವಿಜಯಲಕ್ಷ್ಮಿ, ಸುಮಿತ್ರಾ, ಶೀಲಾ ಕಾಕಡೆ, ಲಾಲು ಬಾಯಿ, ಮನಕಾಬಾಯಿ, ಬಕುಬಾಯಿ, ಶಾಂತಾ, ಭಾರತಿ ಶಿವಣಗಿ, ನಂದಾ, ಪ್ರಿಯಾಂಕಾ ಪಾಲ್ಗೊಂಡಿದ್ದರು.

Share this