ಸಪ್ತಸಾಗರ ವಾರ್ತೆ, ವಿಜಯಪುರ, ಆ. 10: ನಗರದ ಬಿಎಲ್ಡಿಇ ಸಂಸ್ಥೆಯ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ “ಸಾವಯವ ತ್ಯಾಜ್ಯವನ್ನು ಕೊಳೆಯುವ ಉಪಕರಣ” ಎಂಬ ಶೀರ್ಷಿಕೆಯ ವಿನ್ಯಾಸಕ್ಕಾಗಿ ಭಾರತ ಸರ್ಕಾರದ ಪೇಟೆಂಟ್ ಕಚೇರಿಯು ಪೇಟೆಂಟ್ ನೀಡಿದೆ.
2025ರ ಜು. 30ರಂದು ಸಂಖ್ಯೆ 454549-001 ಹೊಂದಿರುವ ವಿನ್ಯಾಸದ ನೋಂದಣಿ ಪ್ರಮಾಣಪತ್ರದ ಅಡಿಯಲ್ಲಿ ಪೇಟೆಂಟ್ ನೋಂದಾಯಿಸಲಾಗಿದೆ. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಾದ ಉತ್ಪನ್ನವನ್ನು ವಿನ್ಯಾಸಗೊಳಿಸುವಲ್ಲಿ ಪ್ರೊ. ಸಂದೀಪ ಶಂಕರ ಚವ್ಹಾಣ, ಪ್ರೊ. ಪ್ರಭು ಮಲ್ಲಿಕಾರ್ಜುನ ಕಿಣಗಿ, ಅಬ್ದುಲ್ ಫಹೀಮ್ ಕಾಜಿ, ಅಜೀಂ ಅಲ್ಲಾಬಕ್ಷ ತಾಳಿಕೋಟಿ, ಅಬುಸುಫಿಯಾನ್ ಕ್ವಾಜಿ, ಆದಿತ್ಯ ಪಂಡಿತ್ ಪವಾರ ಅವರು
ಈ ಉಪಕರಣವನ್ನು ಉತ್ಪಾದಿಸಲು ಶ್ರಮ ವಹಿಸಿದ್ದಾರೆ.
ಇದು ಮನೆ, ಶಾಲೆ, ಹಾಸ್ಟೆಲ್, ಆಸ್ಪತ್ರೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬಳಸಲು ಸೂಕ್ತವಾಗಿದೆ. ಇದು ಆಹಾರ ಮತ್ತು ಕೃಷಿ ತ್ಯಾಜ್ಯವನ್ನು ಗೊಬ್ಬರವಾಗಿ ಪರಿಣಾಮಕಾರಿಯಾಗಿ ಪರಿವರ್ತಿಸುತ್ತದೆ. ಯಾವುದೇ ದುರ್ವಾಸನೆಯನ್ನು ಉತ್ಪಾದಿಸುವುದಿಲ್ಲ ಮತ್ತು ಕನಿಷ್ಠ ವಿದ್ಯುತ್ ಬಳಸುತ್ತದೆ. ಸ್ಮಾರ್ಟ್ ಸಿಟಿ ಯೋಜನೆಗಳು, ಸ್ವಚ್ಛ ಭಾರತ ಅಭಿಯಾನ ಮತ್ತು ಸುಸ್ಥಿರ ಸಮುದಾಯಗಳ ಅಭಿವೃದ್ಧಿಯಂತಹ ಪರಿಸರ ಸ್ನೇಹಿ ತ್ಯಾಜ್ಯ ನಿರ್ವಹಣಾ ಉಪಕ್ರಮಗಳಿಗೆ ಈ ವಿನ್ಯಾಸ ಸೂಕ್ತವಾಗಿದೆ.
ಪ್ರಾಂಶುಪಾಲ ಡಾ. ಮಂಜುನಾಥ ಪಿ., ಉಪಪ್ರಾಂಶುಪಾಲರು ಡಾ.ಲೀನಾ ರಾಘಾ ಡಾ.ಪಿ.ವಿ.ಮಾಳಜಿ, ಡಾ. ನವೀನ ದೇಸಾಯಿ, ವಿಭಾಗದ ಮುಖ್ಯಸ್ಥ ಡಾ. ಎಸ್.ಜಿ. ಪಾಟೀಲ್ ಹಾಗೂ ವಿಭಾಗದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ನವೀನ ವಿನ್ಯಾಸಕ್ಕಾಗಿ ಪೇಟೆಂಟ್ ಪಡೆಯುವಲ್ಲಿ ಈ ಮಹತ್ವದ ಸಾಧನೆಗಾಗಿ ಅಭಿನಂದಿಸಿದ್ದಾರೆ.
ಸಾವಯವ ತ್ಯಾಜ್ಯ ಕೊಳೆಯುವ ಉಪಕರಣ: ಭಾರತ ಸರ್ಕಾರದ ಪೇಟೆಂಟ್ ಮಂಜೂರು
