ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಪಾಲಕರ ಸಹಕಾರ ಅವಶ್ಯ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ.9: ಮಕ್ಕಳಿಗೆ ಸಂವಹನ ಕಲೆಯನ್ನು, ಪ್ರಶಸ್ತಿ ಪಡೆದವರ ಸಾಧನೆಯನ್ನು ತಿಳಿಸುವುದು ಮತ್ತು ಅವರಿಗೆ ಶಿಕ್ಷಕರು ಪಾಲಕರು ಪ್ರೇರಣೆಯನ್ನು ನೀಡಿ ಸತ್ಪ್ರಜೆಗಳನ್ನಾಗಿ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರು ಹೇಳಿದರು.
ಎ.ಎಸ್.ಹಿಪ್ಪರಗಿ ಪ್ರತಿಷ್ಠಾನ ಮತ್ತು ಸಮನ್ವಯ ಆಂಗ್ಲ ಮಾಧ್ಯಮಿಕ ಶಾಲೆ ಬ ಇವುಗಳ ಸಹಯೋಗದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೃಷ್ಣಾಜಿ ದಂಪತಿ ಮತ್ತು ಶಂಭು ತುಪ್ಪದ ಕೊಡಮಾಡಿದ ದತ್ತಿ ದಾಸೋಹಿಗಳು ವಿದ್ಯಾರ್ಥಿಗಳಿಗೆ ಬಹುಮಾನ ನೀಡಲು ಇವರು ಪುಣ್ಯದ ಕೆಲಸವನ್ನು ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಮಕ್ಕಳನ್ನು ಹೃದಯ ಶ್ರೀಮಂತರನ್ನಾಗಿ ಬೆಳೆಸುವುದು ಮತ್ತು ಸಂಸ್ಕಾರಗೊಳಿಸುವುದು ಅವಶ್ಯ. ಅಲ್ಲದೇ ಅವರ ಸರ್ವತೋಮುಖ ಅಭಿವೃದ್ಧಿಗೆ ಪಾಲಕರು ಮತ್ತು ಶಿಕ್ಷಕರು ಸಹಕರಿಸಬೇಕು ಎಂದು ಹೇಳಿದರು.
ಪ್ರೊ. ಆಯ್.ಎಸ್.ಕಾಳಪ್ಪನವರ ಮಾತನಾಡಿ, ಶೈಕ್ಷಣಿಕ ಗುಣಮಟ್ಟ ಮತ್ತು ಪ್ರಮಾಣ ಮಟ್ಟ ಎತ್ತರಿಸಲು ಈ ಶಾಲೆಯ ಉಪಪ್ರಾಂಶುಪಾಲರಾದ ಎಸ್.ಸಿ.ಬಿರಾದಾರ ಮತ್ತು ಸಿಬ್ಬಂದಿ ವರ್ಗ ಕಾರಣವೆಂದು ಅದಕ್ಕಾಗಿ ೧೩೦೦ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇಲ್ಲಿದ್ದಾರೆಂದು ಹೇಳಿದರು.
೨೦೨೪-೨೫ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಬಂದ ಪ್ರಜ್ವಲ ಪತ್ತಾರ ಮತ್ತು ದ್ವಿತೀಯ ಸ್ಥಾನ ಗಳಿಸಿದ ಅಕ್ಷತಾ ಆಸಂಗಿ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸುಶ್ಮಿತಾ ರಾಠೋಡ, ಸೋನಾಲಿ ಜಾಧವ, ಪ್ರೀತಿ ರಾಠೋಡ, ದೀಪಕ್ ಪರಮಣ್ಣನವರ ಪ್ರಥಮ ಸ್ಥಾನ, ತೇಜಸ್ವಿನಿ ಹಿಪ್ಪರಗಿ, ರೋಪನಿ ಡೊಮಿನ್, ಪುಷ್ಪಶ್ರೀ ಪಾಟೀಲ, ವೈಶಾಲಿ ರಾಠೋಡ ದ್ವಿತೀಯ ಸ್ಥಾನ ಪಡೆದರು. ಇವರಿಗೆ ಬಹುಮಾನ ನೀಡಲಾಯಿತು.
ಇದೇ ವೇಳೆ ವಿದ್ಯಾರ್ಥಿಗಳು ವಚನಗಾಯನ ಮಾಡಿದರು. ಡಾ. ವಿ.ಡಿ. ಐಹೊಳ್ಳಿ ಸ್ವಾಗತಿಸಿದರು. ಎಸ್.ಎನ್.ಶಿವಣಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗಮೇಶ ಬದಾಮಿ ವಂದಿಸಿದರು.
ಆರ್.ಎಸ್.ಪಟ್ಟಣಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಕಾರ‍್ಯಕ್ರಮದಲ್ಲಿ ವಿ.ಸಿ.ನಾಗಠಾಣ, ಬಿ.ಕೆ.ಗೊಟ್ಯಾಳ, ಡಿ.ಬಿ. ಬಜಂತ್ರಿ, ಪ್ರೊ. ಹೂಗಾರ, ಜಗದೀಶ ಮೋಟಗಿ, ಸಂಗು ಹಿಪ್ಪರಗಿ, ಎಸ್.ಬಿ. ದೊಡಮನಿ ದಂಪತಿ, ಮಕ್ಕಳ ಪಾಲಕರು ಮುಂತಾದವರು ಉಪಸ್ಥಿತರಿದ್ದರು.

Share this