ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 27: ಈಗಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಸ್ವಾಮಿ ವಿವೇಕಾನಂದರಂತಹ ಚಾರಿತ್ರ್ಯದ ಶಿಕ್ಷಣಕ್ಕೆ ಪಾಲಕರು ಮೊದಲಾದ್ಯತೆ ನೀಡಬೇಕು. ಪಠ್ಯ ಪುಸ್ತಕಗಳು ಮಕ್ಕಳನ್ನು ಶಿಕ್ಷಣವಂತರಾಗಿ ಮಾತ್ರ ಮಾಡುತ್ತವೆ. ಪಾಲಕರು ತಮ್ಮ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರವನ್ನು ಧಾರೆ ಎರೆಯಬೇಕು ಎಂದು ಬೆಂಗಳೂರಿನ ಯುವ ವಾಗ್ಮಿ ಕುಮಾರಿ ಹಾರಿಕ ಮಂಜುನಾಥ ಹೇಳಿದರು.
ಶುಕ್ರವಾರ ಸಂಜೆ ತಾಲೂಕಿನ ನಾಗಠಾಣ ಗ್ರಾಮದಲ್ಲಿ ಶ್ರೀ ಮಲ್ಲಿಕಾರ್ಜುನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ದಶಮಾನೋತ್ಸವ ಹಾಗೂ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸ ನೀಡಿ ಅವರು ಮಾತನಾಡಿದರು.
ತಾಯಂದಿರು ಮಕ್ಕಳಿಗೆ ಮಹಾನ್ ಗ್ರಂಥಗಳಾದ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆ ಸೇರಿದಂತೆ ನಮ್ಮ ಬಸವಾದಿ ಶರಣರ ವಚನಗಳನ್ನು ತಿಳಿಸಬೇಕು. ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಮಾನವ ಸಮಾಜಕ್ಕೆ ಉತ್ತಮ ಪ್ರಜೆಯನ್ನು ನೀಡಬೇಕು ಎಂದರು.
ಜ್ಞಾನ ಯೋಗಾಶ್ರಮದ ಅದ್ವೈತಾನಂದ ಸ್ವಾಮೀಜಿ ಮಾತನಾಡಿ, ನಮ್ಮ ದೇಶದ ಆತ್ಮವೇ ಆಧ್ಯಾತ್ಮಿಕ ಸಂಸ್ಕೃತಿ. ಈ ದಿವ್ಯ ಪರಂಪರೆಯನ್ನು ಪ್ರತಿಯೊಬ್ಬರೂ ಅರಿತು ಮಕ್ಕಳನ್ನು ಬೆಳೆಸಬೇಕು ಎಂದು ಹೇಳಿದರು. ಉದಯೇಶ್ವರ ಮಠದ ಮ ಘ ಚ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ, ಮಲ್ಲಿಕಾರ್ಜುನ ಶಾಲೆಯ ಈ ಯಶಸ್ಸು ನಾಗಠಾಣದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ಸಂದರ್ಭವಾಗಿದೆ. ಈ ಶಾಲೆಯ ಮಕ್ಕಳು
ಸಂಸ್ಕಾರಯುತರಾಗಿ ದೇಶಕ್ಕೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಉದ್ಘಾಟಿಸಿದರು. ವಿವಿಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಜಿ ಪಂ ಮಾಜಿ ಸದಸ್ಯ ನವೀನ ಅರಕೇರಿ ಪ್ರಶಸ್ತಿ ಪತ್ರ ವಿತರಿಸಿ,ಮಾತನಾಡಿದರು. ಶರಣ ಚಿಂತಕ,ನ್ಯಾಯವಾದಿ ಮಹ್ಮದಗೌಸ ಹವಾಲ್ದಾರ, ಜಿಲ್ಲಾ ಯುವ ಪರಿಷತ್ತಿನ ಅಧ್ಯಕ್ಷ ಶರಣು ಸಬರದ ಮಕ್ಕಳ ಕೈ ಬರಹ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಅಧ್ಯಕ್ಷತೆ ವಹಿಸಿದ್ದರು.
ಪೂಜಣ್ಣ ಪೂಜೇರಿ, ಬಸವರಾಜ ಮಸಳಿ, ತಾಪಂ ಮಾಜಿ ಸದಸ್ಯ ಪ್ರಕಾಶ ಲೋಣಿ, ಮಾಜಿ ಸೈನಿಕ ಅಪ್ಪಾಸಾಹೇಬ ಹೊಸಟ್ಟಿ, ಖಾಸಗಿ ಅನುದಾನಿತ ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ ಹಿರೇಕುರುಬರ, ಪಿಕೆಪಿಎಸ್ ಅಧ್ಯಕ್ಷ ಶ್ರೀಶೈಲ ಕತ್ನಳ್ಳಿ, ಸಿ ಆರ್ ಪಿ ಎಚ್ ಆರ್ ಹೊನ್ನುಟಗಿ, ಉಪಾಧ್ಯಕ್ಷೆ ಸುರೇಖಾ ಬಂಡೆ, ಕಾರ್ಯದರ್ಶಿ ಸುನಂದಾ ಹುಣಶ್ಯಾಳ, ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ, ಶಿಕ್ಷಕ ಸಾಹಿತಿ ಸಂತೋಷ ಬಂಡೆ, ದೈಹಿಕ ಶಿಕ್ಷಕ ಎಂ ಎಸ್ ಪಾಪನಾಳಮಠ ಸೇರಿದಂತೆ ಶಿಕ್ಷಕ ಸಿಬ್ಬಂದಿ, ಪಾಲಕರು, ಮಕ್ಕಳು ಉಪಸ್ಥಿತರಿದ್ದರು.
ಪಾಲಕರು ಚಾರಿತ್ರ್ಯದ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು-ಹಾರಿಕ ಮಂಜುನಾಥ


