ಹಿರಿಯ ಪತ್ರಕರ್ತ ದೀಪಕ್ ಶಿಂತ್ರೆ ಅವರಿಗೆ “ಪತ್ರಕರ್ತ ಭೂಷಣ” ಪ್ರಶಸ್ತಿ ಘೋಷಣೆ

ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 4:
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಪ್ರಾಮಾಣಿಕ, ನಿಷ್ಪಕ್ಷಪಾತ ಹಾಗೂ ಸಮಾಜಮುಖಿ ಸೇವೆ ಸಲ್ಲಿಸುತ್ತಿರುವ ವಿಜಯಪುರದ ಹಿರಿಯ ಪತ್ರಕರ್ತ ದೀಪಕ್ ಶಿಂತ್ರೆ ಅವರಿಗೆ ಸೊಲ್ಲಾಪುರದ ಸ್ಟಾರ್ ನ್ಯೂಸ್ ಚಾನೆಲ್ ವತಿಯಿಂದ ನೀಡಲಾಗುವ “ಪತ್ರಕರ್ತ ಭೂಷಣ” ಪ್ರಶಸ್ತಿ ಘೋಷಿಸಲಾಗಿದೆ.
ದೀಪಕ್ ಶಿಂತ್ರೆ ಅವರು ಹಲವು ವರ್ಷಗಳಿಂದ ಕರ್ನಾಟಕ ರಾಜ್ಯದಲ್ಲಿ ವಾಸವಿದ್ದು, ಮರಾಠಿ ಪತ್ರಿಕೋದ್ಯಮಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಕರ್ನಾಟಕದ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಜಿಲ್ಲೆಯ ವಿವಿಧ ವಿಷಯಗಳ ಕುರಿತು ಅವರು ನಿರಂತರವಾಗಿ ವರದಿಗಾರಿಕೆ ನಡೆಸಿದ್ದಾರೆ. ಮರಾಠಿ ದಿನಪತ್ರಿಕೆಗಳಿಗೆ ಸುದ್ದಿಗಳನ್ನು ಪೂರೈಸುವ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಕರ್ನಾಟಕದ ಸ್ವಾಭಿಮಾನಕ್ಕೆ ಸದಾ ಗೌರವ ನೀಡುತ್ತಾ ಕಾರ್ಯ ನಿರ್ವಹಿಸಿದ್ದಾರೆ.
ವಿಶೇಷವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿ ಭಾಗದ ಸೂಕ್ಷ್ಮ ವಿಚಾರಗಳು, ಭಾಷಾ ಸಂಬಂಧಿತ ವಿಷಯಗಳು ಹಾಗೂ ಜನರ ಸಮಸ್ಯೆಗಳ ಕುರಿತು ವರದಿಗಾರಿಕೆ ಮಾಡುವಾಗ ಅತ್ಯಂತ ಸಂಯಮ, ಸಮತೋಲನ ಮತ್ತು ಜವಾಬ್ದಾರಿಯುತ ನಿಲುವು ತಾಳಿದ್ದಾರೆ.
ಅವರ ದೀರ್ಘಕಾಲೀನ ಪತ್ರಿಕೋದ್ಯಮ ಸೇವೆ, ಸಾಮಾಜಿಕ ಕಳಕಳಿ ಹಾಗೂ ಜನಹಿತದ ವರದಿಗಾರಿಕೆಯನ್ನು ಗೌರವಿಸಿ ಸ್ಟಾರ್ ನ್ಯೂಸ್ ಚಾನೆಲ್, ಸೊಲ್ಲಾಪುರ ವತಿಯಿಂದ “ಪತ್ರಕರ್ತ ಭೂಷಣ” ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಜೂನ್ 7ರಂದು ಭಾನುವಾರ ಆಯೋಜಿಸಲಾಗಿರುವ ವಿಶೇಷ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸ್ಟಾರ್ ನ್ಯೂಸ್ ಚಾನೆಲ್‌ನ ಮುಖ್ಯ ಸಂಪಾದಕ ನಂದಕುಮಾರ್ ವಾರೆ ತಿಳಿಸಿದ್ದಾರೆ.
ಈ ಸಮಾರಂಭದಲ್ಲಿ ಸೊಲ್ಲಾಪುರದ ನಿವೃತ್ತ ಸಹಾಯಕ ಪೊಲೀಸ್ ಆಯುಕ್ತ ರಾಜನ್ ಮಾನೆ, ಸೊಲ್ಲಾಪುರ ನಗರ ಅಪರಾಧ ಶಾಖೆಯ ಹಿರಿಯ ಪೊಲೀಸ್ ನಿರೀಕ್ಷಕ ಅರವಿಂದ ಮಾನೆ, ಸೊಲ್ಲಾಪುರ ಶ್ರಮಿಕ ಪತ್ರಕರ್ತರ ಸಂಘದ ಅಧ್ಯಕ್ಷ ವಿಕ್ರಂ ಖೇಲಬುಡೆ ಅವರ ಪ್ರಮುಖ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ನಂದಕುಮಾರ್ ವಾರೆ ಮಾಹಿತಿ ನೀಡಿದ್ದಾರೆ.

Share this