ಸಪ್ತಸಾಗರ ವಾರ್ತೆ,ವಿಜಯಪುರ, ಆ. 21:
ಅಂತರ್ಜಾಲವು ಮಕ್ಕಳ ಕಲಿಕೆಗೆ ಅಪಾರ ನೆರವು ನೀಡುತ್ತಿದ್ದರೂ, ಅದರ ನಿಯಂತ್ರಣವಿಲ್ಲದ ಬಳಕೆ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಹೀಗಾಗಿ ಪೋಷಕರು ಎಚ್ಚರ ವಹಿಸಿ ಮಕ್ಕಳಲ್ಲಿ ಸುರಕ್ಷಿತ ಅಂತರ್ಜಾಲ ಬಳಕೆಯ ಕುರಿತು ಅರಿವು ಮೂಡಿಸಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಶುಕ್ರವಾರ ಸಂಭ್ರಮ ಶುಕ್ರವಾರ ಹಾಗೂ ಬ್ಯಾಗ್‌ಲೆಸ್ ಡೇ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾಧ್ಯಮ ಮತ್ತು ಅಂತರ್ಜಾಲ ಬಳಕೆ ಕುರಿತು ಅವರು ಮಾತನಾಡಿದರು.
‘ಇಂಟರ್‌ನೆಟ್ ಅಡಿಕ್ಷನ್ ಡಿಸಾರ್ಡರ್’ ಸಮಸ್ಯೆಗೆ ಶೇ.25ರಷ್ಟು ಕಿಶೋರಾವಸ್ಥೆಯ ಮಕ್ಕಳು ತುತ್ತಾಗಿರುವುದು ಹಾಗೂ ಐದು ವರ್ಷದೊಳಗಿನ ಮಕ್ಕಳು ದಿನಕ್ಕೆ ಸರಾಸರಿ 2.2 ಗಂಟೆಗಳನ್ನು ಸ್ಕ್ರೀನ್ ಮುಂದೆ ಕಳೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮಕ್ಕಳನ್ನು ಕ್ರೀಡೆ, ಸಂಗೀತ, ಚಿತ್ರಕಲೆ ಸೇರಿದಂತೆ ವಿವಿಧ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪೋಷಕರು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಮಾಧ್ಯಮ ಮತ್ತು ಅಂತರ್ಜಾಲ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅವುಗಳಿಂದ ಹಲವು ಅನುಕೂಲಗಳಿದ್ದು, ವಿದ್ಯಾರ್ಥಿಗಳು ಸಕಾರಾತ್ಮಕ ಹಾಗೂ ಜ್ಞಾನವರ್ಧಕ ವಿಷಯಗಳಿಗೆ ಮಾತ್ರ ಅಂತರ್ಜಾಲ ಬಳಸುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಕ್ಷಕ ಎಸ್.ಎಸ್. ಅರಬ ಮಾತನಾಡಿ, ಆಧುನಿಕ ಸಂವಹನ ಮಾಧ್ಯಮಗಳಾದ ಕಂಪ್ಯೂಟರ್ ಮತ್ತು ಅಂತರ್ಜಾಲದ ಮೂಲಕ ಜ್ಞಾನ ಸಂಪಾದಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಜ್ಞಾನ ಹೆಚ್ಚಿಸುವ ಹಾಗೂ ಅರಿವು ವಿಸ್ತರಿಸುವ ವಿಶ್ವಾಸಾರ್ಹ ವೆಬ್‌ಸೈಟ್‌ಗಳ ಮೂಲಕ ಮಾಹಿತಿ ಪಡೆಯುವಂತೆ ಮಕ್ಕಳಿಗೆ ಸಲಹೆ ನೀಡಿದರು.
ಮುಖ್ಯ ಶಿಕ್ಷಕ ಕೆ.ಐ. ಮಕಾನದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಗತ್ತಿನ ಪ್ರತಿಯೊಂದು ಮೂಲೆಯ ಮಾಹಿತಿಯನ್ನು ಕ್ಷಣಮಾತ್ರದಲ್ಲಿ ನಮ್ಮ ಬಳಿಗೆ ತರುವ ಶಕ್ತಿ ಅಂತರ್ಜಾಲಕ್ಕಿದೆ. ಆದರೆ ಮಕ್ಕಳು ಅಂತರ್ಜಾಲ ಬಳಸುವಾಗ ಅತ್ಯಂತ ಜಾಗರೂಕರಾಗಿರಬೇಕು ಎಂದು ಕಿವಿಮಾತು ಹೇಳಿದರು.
ಶಿಕ್ಷಕರಾದ ಎನ್.ಬಿ. ಚೌಧರಿ, ಅತಿಥಿ ಶಿಕ್ಷಕ ಅಫ್ತಾಬ್ ಮುಲ್ಲಾ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುರಕ್ಷಿತ ಅಂತರ್ಜಾಲ ಬಳಕೆಗೆ ಹೆಚ್ಚು ಗಮನ ನೀಡಿ: ಸಂತೋಷ ಬಂಡೆ


