ಗಣೇಶ ವಿಸರ್ಜನೆಗೆ ಶಾಶ್ವತ ಹೊಂಡ:ವಿಸ್ತೀರ್ಣ ಹೆಚ್ಚಳಕ್ಕೆ ನಿರ್ಧಾರ: ಶಾಸಕ ಯತ್ನಾಳ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ.1: ನಗರದ ಐತಿಹಾಸಿಕ ತಾಸಬಾವಡಿ ಆವರಣದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ 30×80 ಅಡಿ ಅಳತೆಯ ಶಾಶ್ವತ ಹೊಂಡ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.
ಮಂಗಳವಾರ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಅವರನ್ನು ಕರೆಸಿ ಈ ಕುರಿತು ಚರ್ಚಿಸಿದ ಶಾಸಕ ಯತ್ನಾಳ, ತಾಸಬಾವಡಿ ಬಳಿ ಹಲವು ವರ್ಷಗಳಿಂದ ಕುಂಭಪೂಜೆ, ಮರಗಮ್ಮ ದೇವಿ ಜಾತ್ರೆಗೆ ಮಡಿ ನೀರು ತರುವುದು ಸೇರಿದಂತೆ ಗಣೇಶ ವಿಸರ್ಜನೆ ನಡೆಯುತ್ತಿದೆ. ಹೀಗಿರುವಾಗ ಗಣೇಶೋತ್ಸವದ ಸಂದರ್ಭದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ನೀಡಬಾರದು ಎಂದು ಸೂಚಿಸಿದರು.
ಗಣೇಶ ಮಂಡಳಿಗಳು ಹಾಗೂ ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ 30×80 ಅಡಿ ಅಳತೆಯ ಹೊಂಡವನ್ನು ನಿರ್ಮಿಸಬೇಕು ಎಂದು ಆಯುಕ್ತರಿಗೆ ಖಡಕ್ ಸೂಚನೆ ನೀಡಿದರು.
ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೂ ದೂರವಾಣಿ ಮೂಲಕ ಮಾತನಾಡಿ, ತಾಸಬಾವಡಿ ವೀಕ್ಷಣೆಗೆ ಬರುವ ಪ್ರವಾಸಿಗರ ಪಾದಚಾರಿ ಮಾರ್ಗದ ಅಗಲವನ್ನು ಅಗತ್ಯಕ್ಕೆ ತಕ್ಕಂತೆ ಕಡಿಮೆ ಮಾಡಿ, ಹೊಂಡದ ಉದ್ದಗಲವನ್ನು ಹೆಚ್ಚಿಸುವಂತೆ ತಿಳಿಸಿದರು. ಇದಕ್ಕೆ ಪಾಲಿಕೆ ಆಯುಕ್ತರು ಒಪ್ಪಿಗೆ ಸೂಚಿಸಿದ್ದು, ಹೊಂಡವನ್ನು ದೊಡ್ಡದಾಗಿ ನಿರ್ಮಿಸುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ಈ ಹಿಂದೆ ಪ್ರಸಕ್ತ ವರ್ಷ ಕೇವಲ 30×30 ಅಡಿ ಅಳತೆಯ ಕೃತಕ ಹೊಂಡ ನಿರ್ಮಿಸಲು ನಿರ್ಧರಿಸಲಾಗಿತ್ತು. ಇದರಿಂದ ಸಣ್ಣ ಹಾಗೂ ದೊಡ್ಡ ಗಣೇಶ ಮೂರ್ತಿಗಳ ವಿಸರ್ಜನೆಗೆ ತೊಂದರೆಯಾಗುವ ಸಾಧ್ಯತೆ ಇತ್ತು. ತಾಸಬಾವಡಿ ಬಳಿ ದಶಕಗಳಿಂದ ನಡೆದುಕೊಂಡು ಬಂದಿರುವ ಗಣೇಶ ವಿಸರ್ಜನಾ ಪದ್ಧತಿಯನ್ನು ನಿಲ್ಲಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪವೂ ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ಅನೇಕ ಗಜಾನನ ಮಂಡಳಿಗಳ ಪದಾಧಿಕಾರಿಗಳು ಹಾಗೂ ಗಣೇಶ ಭಕ್ತರು ತಮ್ಮನ್ನು ಸಂಪರ್ಕಿಸಿ, ಯಾವುದೇ ಕಾರಣಕ್ಕೂ ತಾಸಬಾವಡಿ ಬಳಿ ಗಣೇಶ ವಿಸರ್ಜನೆಗೆ ಅಡ್ಡಿಪಡಿಸಬಾರದು ಎಂದು ಮನವಿ ಮಾಡಿದ್ದರು. ತಕ್ಷಣ ಪಾಲಿಕೆ ಆಯುಕ್ತರನ್ನು ಕರೆಸಿ, ಜಿಲ್ಲಾಧಿಕಾರಿಗಳ ಗಮನಕ್ಕೂ ವಿಷಯವನ್ನು ತರಲಾಗಿದೆ ಎಂದು ಶಾಸಕ ಯತ್ನಾಳ ವಿವರಿಸಿದರು.
30×30 ಅಡಿ ಬದಲಾಗಿ 30×80 ಅಡಿ ಅಳತೆಯ ಶಾಶ್ವತ ಹೊಂಡ ನಿರ್ಮಾಣವಾಗಲಿದ್ದು, ಸಣ್ಣ ಹಾಗೂ ದೊಡ್ಡ ಗಣೇಶ ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗಲಿದೆ. ಆದ್ದರಿಂದ ಗಣೇಶ ಭಕ್ತರು ಯಾವುದೇ ಆತಂಕಪಡಬೇಕಿಲ್ಲ. ಗೊಂದಲ ಸೃಷ್ಟಿಸುವವರ ಮಾತಿಗೆ ಕಿವಿಗೊಡದೆ ಶಾಂತಿಯುತವಾಗಿ ಗಣೇಶೋತ್ಸವ ಆಚರಿಸಬೇಕು ಎಂದು ಅವರು ಮನವಿ ಮಾಡಿದರು.

Share this