ಸಪ್ತಸಾಗರ ವಾರ್ತೆ ವಿಜಯಪುರ, ಆ. 14:
ಹೈದ್ರಾಬಾದ್ ವಿಮೋಚನಾ ಚಳವಳಿಯ ಪಿತಾಮಹ ಶ್ರೀ ಸ್ವಾಮಿ ರಮಾನಂದ ತೀರ್ಥರ ತವರು ವಿಜಯಪುರ ಜಿಲ್ಲೆಯನ್ನು ೩೭೧ ಜೆ ಮೀಸಲಾತಿಗೆ ಸೇರ್ಪಡೆ ಮಾಡುವಂತೆ ಒತ್ತಾಯಿಸಿ ರೈತ ಭಾರತ ಪಕ್ಷದಿಂದ ಇಂಡಿ ಉಪ ವಿಭಾಗಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿ, ಕೇಂದ್ರ ಗೃಹಮಂತ್ರಿ, ರಾಜ್ಯಪಾಲರು, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ, ಸ್ವಾತಂತ್ರ್ಯ ಯೋಧ
ಅಖಂಡ ಹೈದ್ರಾಬಾದ್ ಪ್ರಾಂತಕ್ಕೆ ಅಂದಿನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ವಿಜಯಪುರ ಜಿಲ್ಲೆಯ ಸಿಂದಗಿಯ ಸ್ವಾತಂತ್ರ್ಯಯೋಧ ಶ್ರೀ ಸ್ವಾಮಿ ರಮಾನಂದ ತೀರ್ಥರು ಹೈದ್ರಾಬಾದ್ ಪ್ರಾಂತವನ್ನು ಭಾರತದ ಒಕ್ಕೂಟದಲ್ಲಿ ಸೇರಿಸಲು ನೇತೃತ್ವ ವಹಿಸಿದ್ದರು. ಇಂತಹ ರಮಾನಂದ ತೀರ್ಥರ ತವರು ಜಿಲ್ಲೆ ವಿಜಯಪುರವನ್ನು ೩೭೧ ಜೆ ಮೀಸಲಾತಿಯಿಂದ ಕೈ ಬಿಟ್ಟು ಜಿಲ್ಲೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ದೊಡ್ಡ ಅನ್ಯಾಯ ಎಸಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರು ಜಿಲ್ಲೆಗೆ ೩೭೧ ಜೆ ಮೀಸಲಾತಿ ಒದಗಿಸುವುದಾಗಿ ಭರವಸೆ ನೀಡಿ ಜನರ ಮತ ಭಿಕ್ಷೆ ಪಡೆದು ಅಧಿಕಾರ ಹಿಡಿದ ಮೇಲೆ ಕೊಟ್ಟ ಭರವಸೆ ಈಡೇರಿಸಲು ವಿಫಲರಾಗಿದ್ದಾರೆ. ಜೊತೆಗೆ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪ್ರಣಾಳಿಕೆಯಲ್ಲಿ ವಿಜಯಪುರ ಜಿಲ್ಲೆಗೆ ೩೭೧ ಜೆ ಮೀಸಲಾತಿ ಒದಗಿಸುವುದಾಗಿ ಭರವಸೆ ನೀಡಿದ್ದರು. ಅವರ ಪ್ರಣಾಳಿಕೆ ಕೇವಲ ಪ್ರಣಾಳ ಶಿಶು ಆಗಿದೆ ಎಂದು ಆರೋಪಿಸಿದ ಅವರು, ಕೂಡಲೇ ಈಗ ನಡೆಯುತ್ತಿರುವ ಅಧಿವೇಶನದಲ್ಲಿ ವಿಜಯಪುರ ಜಿಲ್ಲೆಗೆ ೩೭೧ ಜೆ ಕುರಿತು ಧ್ವನಿ ಎತ್ತಿ ಮೀಸಲಾತಿ ಒದಗಿಸಿ ಜಿಲ್ಲೆಯ ಜನರ ಋಣ ತೀರಿಸಬೇಕು. ಇಲ್ಲವಾದಲ್ಲಿ ರಾಜಕೀಯ ಸನ್ಯಾಸತ್ವ ಸ್ವೀಕರಿಸಿ ಎಂದು ಸವಾಲು ಹಾಕಿದರು.
ವಿಜಯಪುರ ಜಿಲ್ಲೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆ ನಡೆಸುವ ಬಗ್ಗೆ ತಿಳಿದು ಬಂದಿದೆ. ೩೭೧ ಜೆ ಮೀಸಲಾತಿ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಾಗಿದ್ದರೆ ಮಾತ್ರ ವಿಜಯಪುರ ಜಿಲ್ಲೆಯಲ್ಲಿ ಸಚಿವ ಸಂಪುಟ ಸಭೆ ನಡೆಸಬೇಕು. ಇಲ್ಲವಾದಲ್ಲಿ ಜಿಲ್ಲೆಯಲ್ಲಿ ಸಚಿವ ಸಂಪುಟದ ಸಭೆಯ ಅವಶ್ಯಕತೆ ಇರುವುದಿಲ್ಲ ಎಂದು ಹೇಳಿದರು.
ಇನ್ನೋರ್ವ ಮುಖಂಡ ಅಂಬಾಜಿ ನಾರಾಯಣಕರ ಮಾತನಾಡಿ, ನಂಜುಂಡಪ್ಪ ವರದಿಯ ಪ್ರಕಾರ ವಿಜಯಪುರ ಜಿಲ್ಲೆಯ ಎಲ್ಲ ತಾಲೂಕುಗಳ ಅತ್ಯಂತ ಹಿಂದುಳಿದ ತಾಲೂಕುಗಳಾಗಿವೆ. ಜೊತೆಗೆ ಹೈದ್ರಾಬಾದ್ ಪ್ರಾಂತದ ಭಾಗವಾಗಿದ್ದರೂ ಕೂಡಾ ೩೭೧ಜೆ ಮೀಸಲಾತಿ ಜಾರಿ ಮಾಡುವಾಗ ವಿಜಯಪುರ ಜಿಲ್ಲೆಯನ್ನು ಕೈಬಿಟ್ಟಿದ್ದರಿಂದ ಕಳೆದ ೧೧ ವರ್ಷಗಳಿಂದ ಜಿಲ್ಲೆಗೆ ಶೈಕ್ಷಣಿಕ, ಆರ್ಥಿಕವಾಗಿ ಸಾಕಷ್ಟು ಅನ್ಯಾಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕೂಡಲೇ ಈ ಭಾಗದ ಜನರಿಗೆ ಮೀಸಲಾತಿ ಕಲ್ಪಿಸಿ ನ್ಯಾಯ ಒದಗಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ೩೭೧ ಜೆ ಮೀಸಲಾತಿ ಹೋರಾಟಗಾರರು, ರೈತ ಭಾರತ ಪಕ್ಷದ ಇಂಡಿ ಉಪ ವಿಭಾಗದ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿಜಯಪುರ ಜಿಲ್ಲೆಯನ್ನು 371 ಜೆ ಅಡಿ ಮೀಸಲಾತಿಗೆ ಸೇರಿಸಲು ಇಂಡಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಕೆ
