ಶಸ್ತ್ರ ಚಿಕಿತ್ಸೆ ಗಾಯ ಗುಣಪಡಿಸಲು ಪ್ಲಾಸ್ಟಿಕ್ ಸರ್ಜರಿ ವರದಾನ: ಡಾ. ಹೊನ್ನುಟಗಿ

ಸಪ್ತಸಾಗರ ವಾರ್ತೆ, ವಿಜಯಪುರ, ಜು. 15:
ಗಾಯಗಳು, ದೋಷಗಳು, ಶಸ್ತ್ರಚಿಕಿತ್ಸೆಯಿಂದಾಗುವ ಕಲೆಗಳನ್ನು ಸರಿಪಡಿಸಲು ಮತ್ತು ವ್ಯಕ್ತಿಯ ಸೌಂದರ್ಯವನ್ನು ಹೆಚ್ಚಿಸಲು ಪ್ಲಾಸ್ಟಿಕ್ ಸರ್ಜರಿ ವರದಾನವಾಗಿದೆ ಎಂದು ಬಿ.ಎಲ್.ಡಿ.ಇ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ ಹೇಳಿದ್ದಾರೆ.
ಮಂಗಳವಾರ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ.ಎಂ.ಪಾಟೀಲ ಸೂಪರ್ ಸ್ಪೇಷಾಲಿಟಿ ಆಶ್ಪತ್ರೆಯಲ್ಲಿ ನಡೆದ ವಿಶ್ವ ಪ್ಲಾಸ್ಟಿಕ್ ಸರ್ಜರಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ಮನುಷ್ಯನ‌ ಮುಖಚರ್ಯೆ, ಅಂಗವೀಕಲತೆ ಸೇರಿದಂತೆ ನಾನಾ ವಿಕಲತೆಗಳನ್ನು ಸರಿಪಡಿಸುವುದು ಕಷ್ಟಸಾಧ್ಯವಾಗಿತ್ತು. ಆದರೆ ಇಂದು ವೈದ್ಯಕೀಯ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ದಿಯಿಂದಾಗಿ ಪ್ಲಾಸ್ಟಿಕ್ ಸರ್ಜರಿ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಯಾಗಿದೆ. ಅಪಘಾತ, ಸುಟ್ಟಗಾಯ, ಶೀಳುತುಟಿ, ಜನ್ಮದೋಷ, ಅಂಗವೈಕಲ್ಯ, ಹೆಚ್ಚವರಿ ಬೆರಳುಗಳನ್ನು ಸರಿಪಡಿಸುವುದು. ದೇಹ ಮತ್ತು ಮುಖದ ಆಕಾರವನ್ನು ಬದಲಿಸುವುದು, ಸುಕ್ಕುಗಳನ್ನು ಕಡಿಮೆ ಮಾಡಿ ಚರ್ಮದ ಕಾಂತಿ ಹೆಚ್ಚಿಸುವುದು ಈಗ ಸರಳವಾಗಿದೆ. ವಿಕಾರ ರೂಪವನ್ನು ಸುಂದರವಾಗಿ ಮಾರ್ಪಡಿಸಬಹುದಾಗಿದೆ. ಅಲ್ಲದೆ ಪ್ಲಾಸ್ಟಿಕ್ ಸರ್ಜರಿ ಈಗ ಅತೀ ವೇಗವಾಗಿ ಮುನ್ನುಗ್ಗುತ್ತಿದೆ ಎಂದು ಅವರು ಹೇಳಿದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ ಮಾತನಾಡಿ ಶ್ರೀ ಬಿ.ಎಂ.ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಬಡವರ ಪಾಲಿಗೆ ಸಂಜೀವಿನಿಯಾಗಿದೆ. ಕೈಗೆಟಕುವ ದರದಲ್ಲಿ ಚಿಕಿತ್ಸೆ ನೀಡುವ ಮೂಲಕ ಸಾರ್ವಜನಿಕರಿಗೆ ನೇರವಾಗುತ್ತಿದೆ. ಇಲ್ಲಿನ ತಜ್ಞವೈದ್ಯ ಡಾ. ವಿಜಯಕುಮಾರ ಹುಡೇದ ಕಳೆದ ಮೂರು ವರ್ಷಗಳಲ್ಲಿ 1555 ಕ್ಕೂ ಹೆಚ್ಚು ಪ್ಲಾಸ್ಟಿಕ್ ಸರ್ಜರಿಗಳನ್ನು ಮಾಡುವ ಮೂಲಕ ರೋಗಿಗಳ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ ಎಂದು ಹೇಳಿದರು.
ಪ್ಲಾಸ್ಟಿಕ್ ಸರ್ಜನ ಡಾ. ವಿಜಯಕುಮಾರ ಹುಡೇದ ಮಾತನಾಡಿ, ಪ್ಲಾಸ್ಟಿಕ್ ಸರ್ಜರಿ ದುಬಾರಿ ಎಂಬ ತಪ್ಪು ಗ್ರಹಿಕೆಯಿಂದ ಎಲ್ಲರೂ ಹೊರ ಬರಬೇಕಿದೆ. ಮಹಾನಗರಗಳಿಗೆ ಹೋಲಿಸಿದರೆ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ವೆಚ್ಚ ಕಡಿಮೆ ಇದೆ. ನಮ್ಮಲ್ಲಿ ಸರಾಸರಿ ಪ್ರತಿದಿನ ಎರಡರಂತೆ ಪ್ಲಾಸ್ಟಿಕ್ ಸರ್ಜರಿಗಳು ನಡೆಯುತ್ತಿವೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ವಿಭಾಗದ ಪ್ರಾಧ್ಯಾಪಕ ಡಾ. ಮಂಜುನಾಥ ಕೋಟೆಣ್ಣವರ, ಪ್ಲಾಸ್ಟಿಕ್ ಸರ್ಜನ ಡಾ. ಅನಿಕೇತ ವಲ್ಲಭ, ಹೃದ್ರೋಗ ತಜ್ಞ ಡಾ. ಸಂಜೀವ ಸಜ್ಜನರ, ಮೂತ್ರಪಿಂಡ ವಿಭಾಗದ ಡಾ. ಸಂದೀಪ ಪಾಟೀಲ, ಆಸ್ಪತ್ರೆಯ ಸಹಆಡಳಿತಾಧಿಕಾರಿ ಶಾಂತೇಶ ಸಲಗರ ಮುಂತಾದವರು ಉಪಸ್ಥಿತರಿದ್ದರು.

Share this