ವಿಬಿಜಿ–ರಾಮ್–ಜಿ ಕಾಮಗಾರಿಗಳಿಗೆ ವೇಗ ನೀಡಲು ಪ್ರಕಾಶ ವಡ್ಡರ ಸೂಚನೆ

ದಿನಕ್ಕೆ ಗರಿಷ್ಠ 200 ಕೂಲಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಲು ಕ್ರಮ

ಸಪ್ತಸಾಗರ ವಾರ್ತೆ,ವಿಜಯಪುರ, ಆ. 18:
ವಿಬಿಜಿ–ರಾಮ್–ಜಿ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರನ್ನು ಕಾಮಗಾರಿಗಳಲ್ಲಿ ತೊಡಗಿಸಿಕೊಂಡು, ಪ್ರತಿದಿನ ಗರಿಷ್ಠ 200 ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಅವರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಹಾಗೂ ಇಂಗಳೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯೋಜನೆಯಡಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.
ಕಾಮಗಾರಿಗಳಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಕೂಲಿ ಕಾರ್ಮಿಕರ ಹಾಜರಾತಿಯನ್ನು ಪ್ರತಿದಿನ ಎನ್‌ಎಂಎಂಎಸ್ ಆ್ಯಪ್ ಮೂಲಕ ಕಡ್ಡಾಯವಾಗಿ ದಾಖಲಿಸಬೇಕು. ಹಾಜರಾತಿ ಹಾಗೂ ಮಾನವ ದಿನಗಳ ಸೃಜನೆಗೆ ಸಂಬಂಧಿಸಿದಂತೆ ಯಾವುದೇ ಲೋಪವಾಗದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಎಚ್ಚರಿಕೆ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಈ ವೇಳೆ ಕಾಮಗಾರಿಗಳ ಪ್ರಗತಿ, ಕೂಲಿ ಕಾರ್ಮಿಕರ ಹಾಜರಾತಿ, ಲೇಬರ್ ಎಂಗೇಜ್‌ಮೆಂಟ್, ಎನ್‌ಎಂಎಂಎಸ್ ಹಾಜರಾತಿ ಹಾಗೂ ಕಾರ್ಮಿಕರಿಗೆ ಕಲ್ಪಿಸಿರುವ ಮೂಲಸೌಲಭ್ಯಗಳನ್ನು ಪರಿಶೀಲಿಸಿದರು. ಉಕ್ಕಲಿ ಮತ್ತು ಇಂಗಳೇಶ್ವರ ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿ ಸ್ಥಳದ ಕಾರ್ಮಿಕರ ಹಾಜರಾತಿಯನ್ನು ಎನ್‌ಎಂಎಂಎಸ್ ದಾಖಲಾತಿಯೊಂದಿಗೆ ತಾಳೆ ಮಾಡಿದಾಗ ನಿರೀಕ್ಷಿತ ಪ್ರಮಾಣದಲ್ಲಿ ಕಾರ್ಮಿಕರು ಹಾಜರಿರದಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರನ್ನು ಕಾಮಗಾರಿಗಳಿಗೆ ತೊಡಗಿಸುವಂತೆ ಪಿಡಿಒಗಳಿಗೆ ತಾಕೀತು ಮಾಡಿದರು.
ಉಕ್ಕಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರಮಾನಂದ ಕೆರೆ ಪುನಶ್ಚೇತನ ಕಾಮಗಾರಿಯನ್ನು ಪರಿಶೀಲಿಸಿದ ಅವರು, ಕೂಲಿ ಕಾರ್ಮಿಕರಿಗೆ ಸಮರ್ಪಕ ಅಳತೆಯಲ್ಲಿ ಕೆಲಸ ನೀಡಬೇಕು. ಸುಮಾರು 50×50 ಅಳತೆಯ ವಿಭಾಗಗಳಲ್ಲಿ ಕಾಮಗಾರಿ ಕೈಗೊಂಡು, ಮಧ್ಯಭಾಗದಲ್ಲಿ ಸಾಕ್ಷಿಗುಡ್ಡದ ರೀತಿಯಲ್ಲಿ ಕಾಮಗಾರಿ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಾಮಗಾರಿಗಳಲ್ಲಿ ಗುಣಮಟ್ಟ ಹಾಗೂ ವೈಜ್ಞಾನಿಕ ವಿಧಾನಗಳಿಗೆ ಆದ್ಯತೆ ನೀಡಬೇಕು. ಗ್ರಾಮೀಣ ಕೂಲಿ ಕಾರ್ಮಿಕರಿಗೆ ಹೆಚ್ಚಿನ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿಗಳ ಕ್ರಿಯಾ ಯೋಜನೆಯಲ್ಲಿ ಹೆಚ್ಚಿನ ಸಂಖ್ಯೆಯ ಕೂಲಿ ಆಧಾರಿತ ಕಾಮಗಾರಿಗಳನ್ನು ಸೇರ್ಪಡೆಗೊಳಿಸಬೇಕು. ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಕೆರೆ, ಜಲಸಂರಕ್ಷಣೆ, ಕೃಷಿ ಹೊಂಡ ಸೇರಿದಂತೆ ವೈಯಕ್ತಿಕ ಫಲಾನುಭವಿ ಆಧಾರಿತ ಕಾಮಗಾರಿಗಳನ್ನು ಗುರುತಿಸಿ ಅರ್ಹ ಕುಟುಂಬಗಳನ್ನು ಯೋಜನೆಯಡಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಕಾಮಗಾರಿ ಸ್ಥಳಗಳಲ್ಲಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಹಾಗೂ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರೊಂದಿಗೆ ಸಂವಾದ ನಡೆಸಿದ ಪ್ರಕಾಶ ವಡ್ಡರ ಅವರು, ವಿಬಿಜಿ–ರಾಮ್–ಜಿ ಯೋಜನೆಯ ಉದ್ದೇಶ ಹಾಗೂ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು. ಯೋಜನೆಯಡಿ ಅರ್ಹ ಕುಟುಂಬಗಳಿಗೆ 125 ದಿನಗಳವರೆಗೆ ಉದ್ಯೋಗ ಒದಗಿಸುವ ವ್ಯವಸ್ಥೆಯಿದ್ದು, ಕಾರ್ಮಿಕರು ನಿರಂತರವಾಗಿ ಕೆಲಸಕ್ಕೆ ಹಾಜರಾಗುವಂತೆ ಮನವರಿಕೆ ಮಾಡಿದರು.
ಯೋಜನೆಯು ಆರಂಭಿಕ ಹಂತದಲ್ಲಿರುವುದರಿಂದ ವೇತನ ಜಮೆಯಾಗುವ ಪ್ರಕ್ರಿಯೆಯಲ್ಲಿ ಸ್ವಲ್ಪ ವಿಳಂಬವಾಗುವ ಸಾಧ್ಯತೆಯಿದ್ದರೂ, ಇದರಿಂದಾಗಿ ಕಾರ್ಮಿಕರು ಕೆಲಸಕ್ಕೆ ಬರುವುದನ್ನು ನಿಲ್ಲಿಸಬಾರದು. ಎನ್‌ಎಂಆರ್ ಪೂರ್ಣಗೊಂಡ ನಂತರ ನಿಗದಿತ ಪ್ರಕ್ರಿಯೆಯಂತೆ ಕೂಲಿ ಮೊತ್ತ ಪಾವತಿಯಾಗಲಿದೆ ಎಂದು ಭರವಸೆ ನೀಡಿದರು. ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರ ಭವಿಷ್ಯ ರೂಪಿಸುವಂತೆ ಸಲಹೆ ನೀಡಿದರು.
ಜಾಬ್ ಕಾರ್ಡ್‌ಗೆ ಸಂಬಂಧಿಸಿದ ಸಮಸ್ಯೆ ಹೊಂದಿರುವ ಕಾರ್ಮಿಕರ ಮಾಹಿತಿಯನ್ನು ಸಂಗ್ರಹಿಸಿ ವರದಿ ಸಿದ್ಧಪಡಿಸಿ ಜಿಲ್ಲಾ ಪಂಚಾಯಿತಿಗೆ ಸಲ್ಲಿಸುವಂತೆ ಗಣಕಯಂತ್ರ ನಿರ್ವಾಹಕರಿಗೆ ಸೂಚಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಜಾಬ್ ಕಾರ್ಡ್ ಮೇಳಗಳನ್ನು ಆಯೋಜಿಸಿ, ಅರ್ಹ ಕಾರ್ಮಿಕರಿಗೆ ಜಾಬ್ ಕಾರ್ಡ್ ಒದಗಿಸುವ ಮೂಲಕ ಹೆಚ್ಚಿನ ಗ್ರಾಮೀಣ ಕುಟುಂಬಗಳನ್ನು ಯೋಜನೆಯ ವ್ಯಾಪ್ತಿಗೆ ತರಬೇಕು ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ನಮೂನೆ–6ರಲ್ಲಿ ಕೆಲಸದ ಬೇಡಿಕೆ ಸಲ್ಲಿಸುವ ಪ್ರತಿಯೊಬ್ಬ ಅರ್ಹ ವ್ಯಕ್ತಿಗೂ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಕಾರ್ಮಿಕರಿಗೆ ಭರವಸೆ ನೀಡಿದರು.
ವಿಬಿಜಿ–ರಾಮ್–ಜಿ ಯೋಜನೆಯ ಅನುಷ್ಠಾನದಲ್ಲಿ ಕಾರ್ಮಿಕರ ಭಾಗವಹಿಸುವಿಕೆ ಹೆಚ್ಚಿಸುವುದು, ಮಾನವ ದಿನಗಳ ಸೃಜನೆಗೆ ವೇಗ ನೀಡುವುದು ಹಾಗೂ ಗ್ರಾಮೀಣ ಕುಟುಂಬಗಳಿಗೆ ನಿರಂತರ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು ಎಂದು ಪ್ರಕಾಶ ವಡ್ಡರ ಸೂಚಿಸಿದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ವಂದಾಲ, ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಪ್ರಕಾಶ ದೇಸಾಯಿ, ತಾಂತ್ರಿಕ ಸಂಯೋಜಕ ವಿಶ್ವನಾಥ ಪಟ್ಟಣಶೆಟ್ಟಿ, ಐಇಸಿ ಸಂಯೋಜಕ ಮಡಿವಾಳಪ್ಪ ಬಿರಾದಾರ, ತಾಂತ್ರಿಕ ಸಹಾಯಕ ಚಂದ್ರಶೇಖರ ಆಡಿನ, ಉಕ್ಕಲಿ ಗ್ರಾಮ ಪಂಚಾಯಿತಿ ಪಿಡಿಒ ಮಲ್ಲಿಕಾರ್ಜುನ ಹಿಟ್ಟಿನಳ್ಳಿ, ಇಂಗಳೇಶ್ವರ ಗ್ರಾಮ ಪಂಚಾಯಿತಿ ಪಿಡಿಒ ಜಯಕುಮಾರ ದೇವರನಾವದಗಿ, ಕಾರ್ಯದರ್ಶಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿ, ಕಾಯಕಬಂಧುಗಳು ಹಾಗೂ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.

Share this