ಪ್ರಾರ್ಥನೆ, ಧ್ಯಾನ, ಯೋಗ ದೈವತ್ವದ ಸಂಕೇತ- ವೀರಸಾಗರ ಮಹಾರಾಜರು

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 28 :
ಧ್ಯಾನ, ಪ್ರಾರ್ಥನೆಯಿಂದ ದೊರೆಯುವ ಅಂತರಂಗದ ಬೆಳಕು ಅಗೋಚರವಾಗಿದ್ದು, ಪ್ರತಿಯೊಬ್ಬ ದಾರ್ಶನಿಕರು ಧ್ಯಾನದ ಪರಂಪರೆ ಗೌರವಿಸಿದ್ದಾರೆ. ಪ್ರಾರ್ಥನೆ, ಧ್ಯಾನ, ಯೋಗ ಇವೆಲ್ಲವೂ ದೈವತ್ವದ ಸಂಕೇತವಾಗಿವೆ ಎಂದು ವೀರಸಾಗರ ಮಹಾರಾಜರು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಹೊರವಲಯದ ಕೇಂದ್ರ ಕಾರಾಗೃಹದಲ್ಲಿ ಬುಧವಾರ ಕೈದಿಗಳಿಗೆ ಧ್ಯಾನ ಮತ್ತು ಯೋಗದ ಮಹತ್ವ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಧ್ಯಾನ ಯೋಗವು ಅಷ್ಟಾಂಗ ಯೋಗದ ಪ್ರಮುಖ ಹಂತವಾಗಿದೆ. ಇದು ಆಳವಾದ ಏಕಾಗ್ರತೆ ಮತ್ತು ಮನಸ್ಸಿನ ಶಾಂತಿಗೆ ದಾರಿಯಾಗಿದೆ. ಇದು ದೈನಂದಿನ ಒತ್ತಡವನ್ನು ನಿವಾರಿಸಲು, ಏಕಾಗ್ರತೆಯನ್ನು ಹೆಚ್ಚಿಸಲು ಮತ್ತು ಆಂತರಿಕ ಜಾಗೃತಿಯನ್ನು ವಿಸ್ತರಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ನಾವು ಪ್ರಸ್ತುತ ಬದುಕಿನಲ್ಲಿ ನಮ್ಮಲ್ಲಿ ಕಾಡುತ್ತಿರುವ ಒತ್ತಡ, ಉದ್ವೇಗ ಮತ್ತು ಆತಂಕ ನಿವಾರಣೆಗೆ ಧ್ಯಾನ ಹಾಗೂ ಯೋಗಾಭ್ಯಾಸ ಅತ್ಯಂತ ಸಹಕಾರಿಯಾಗಿದೆ . ನಮ್ಮ ಅಂತರಂಗ ಹಾಗೂ ಬಹಿರಂಗ ಶುದ್ಧಿಗೆ ಜ್ಞಾನದ ಬೆಳಕೆ ದಿವ್ಯ ಔಷಧವಾಗಿದೆ. ವಯಸ್ಸಿಗೆ ಹಿರಿಯರು ಕಿರಿಯರು ಎಂಬ ಅಂತರವುಂಟು. ಆದರೆ ಜ್ಞಾನಕ್ಕೆ ವಯಸ್ಸಿನ ಮಿತಿಯಿಲ್ಲ. ಇಂದಿಗೂ ಪ್ರಸ್ತುತ. ಅದರಂತೆ ಯಾವ ಕಾಯಕವೂ ಸಣ್ಣದಲ್ಲ ಮತ್ತು ಯಾವ ಕಾಯಕವೂ ದೊಡ್ಡದಲ್ಲ. ಎಲ್ಲರ ಕಾಯಕಗಳಿಗೆ ಸಮಾನ ಗೌರವವಿದೆ ಎಂದು ತಿಳಿದು ಕೊಂಡು ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಬೇಕು ಎಂದರು. ಕಾರ‍್ಯಕ್ರಮದಲ್ಲಿ ಕಾರಾಗೃಹ ಅಧೀಕ್ಷಕರಾದ ಮಲ್ಲಿಕಾರ್ಜುನ,
ಅಭಿಜೀತ ಜಯಕನವರ, ಜೈನ ಸಮಾಜದ ಮುಖಂಡ ಶೀತಲ ಓಗಿ , ಸರಕಾರಿ ಪ್ರೌಢ ಶಾಲಾ ಶಿಕ್ಷಕ ರಾಜಕುಮಾರ ಅರಗೆ, ಬಸಂತ ಜೈನ್ ಹಾಗೂ ಕಾರಾಗೃಹದ ಸಿಬ್ಬಂದಿ ಉಪಸ್ಥಿತರಿದ್ದರು.

Share this