ಪತ್ರಿಕಾ ದಿನಾಚರಣೆ: ಪತ್ರಿಕೋದ್ಯಮ ಸತ್ಯ, ನ್ಯಾಯದ ಪರವಾಗಿರಲಿ – ಯತ್ನಾಳ

ಸಂಘಕ್ಕೆ ₹5 ಲಕ್ಷ ದೇಣಿಗೆ ಘೋಷಿಸಿದ ಶಾಸಕ ಕಟಕದೊಂಡ

ಸಪ್ತಸಾಗರ ವಾರ್ತೆ,ವಿಜಯಪುರ, ಜು.19:
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕಾನಿಪ) ವಿಜಯಪುರ ಜಿಲ್ಲಾ ಘಟಕದ ವತಿಯಿಂದ ಭಾನುವಾರ ನಗರದ ಕಂದಗಲ್ಲ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಪತ್ರಿಕಾ ದಿನಾಚರಣೆ-2026 ಅಂಗವಾಗಿ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ, ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನಾ ಸಮಾರಂಭ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಪತ್ರಿಕೋದ್ಯಮವು ಸಮಾಜದ ಸತ್ಯವನ್ನು ಅನಾವರಣಗೊಳಿಸುವ ಶಕ್ತಿಯಾಗಿದ್ದು, ಪತ್ರಕರ್ತರು ಸದಾ ಸತ್ಯ, ನ್ಯಾಯ ಮತ್ತು ಅಭಿವೃದ್ಧಿಯ ಪರವಾಗಿ ತಮ್ಮ ಪೆನ್ನು ಓಡಿಸಬೇಕು ಎಂದು ಹೇಳಿದರು.
ಪತ್ರಕರ್ತರು ನಿರಂತರ ಒತ್ತಡದಲ್ಲಿ ಕೆಲಸ ಮಾಡುತ್ತಿರುವುದರಿಂದ ವರ್ಷಕ್ಕೊಮ್ಮೆ ಎಲ್ಲರೂ ಒಂದೆಡೆ ಸೇರಿ ಅನುಭವಗಳನ್ನು ಹಂಚಿಕೊಳ್ಳುವುದು ಅಗತ್ಯವಾಗಿದೆ. ಬಡವರು, ಶೋಷಿತರು ಹಾಗೂ ಅನ್ಯಾಯಕ್ಕೊಳಗಾದವರ ಪರವಾಗಿ ಮಾಧ್ಯಮಗಳು ಧ್ವನಿಯಾಗಬೇಕು. ಹಲವು ದೊಡ್ಡ ಹಗರಣಗಳು ಮತ್ತು ರಾಜಕಾರಣಿಗಳ ತಪ್ಪುಗಳು ಬೆಳಕಿಗೆ ಬಂದಿರುವುದು ಮಾಧ್ಯಮಗಳ ಕಾರಣದಿಂದಲೇ. ಜನರು ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಯನ್ನು ನಂಬುವುದರಿಂದ ವರದಿಗಳು ಪಾರದರ್ಶಕ ಹಾಗೂ ವಾಸ್ತವಾಧಾರಿತವಾಗಿರಬೇಕು ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಅನಧಿಕೃತ ಪತ್ರಕರ್ತರು ಹಾಗೂ ಕೆಲವು ಯೂಟ್ಯೂಬ್ ವಾಹಿನಿಗಳು ಪತ್ರಿಕೋದ್ಯಮದ ನೈತಿಕತೆಯನ್ನು ಉಲ್ಲಂಘಿಸಿ ವರದಿಗಳನ್ನು ಪ್ರಸಾರ ಮಾಡುತ್ತಿರುವುದು ಆತಂಕಕಾರಿ. ಈ ಕುರಿತು ಕೇಂದ್ರ ವಾರ್ತಾ ಸಚಿವರಿಗೆ ಪತ್ರ ಬರೆದಿರುವುದಾಗಿ ಯತ್ನಾಳ ಹೇಳಿದರು.
ಪ್ರತಿಭಾ ಪುರಸ್ಕಾರ ವಿತರಿಸಿದ ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಪ್ರಜಾಪ್ರಭುತ್ವದಲ್ಲಿ ಪತ್ರಿಕಾರಂಗವು ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಜೊತೆಗೆ ನಾಲ್ಕನೇ ಅಂಗವಾಗಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.
ವಿಜಯಪುರದ ಡಾ. ಎಫ್.ಜಿ. ಹಳಕಟ್ಟಿಯವರು ತಮ್ಮ ಮನೆಯನ್ನು ಮಾರಾಟ ಮಾಡಿ ಪತ್ರಿಕೆ ಆರಂಭಿಸುವ ಮೂಲಕ ಸಮಾಜಸೇವೆಗೆ ಮಾದರಿಯಾಗಿದ್ದರು. ಪತ್ರಕರ್ತರು ಯಾವುದೇ ಘಟನೆಯನ್ನು ಏಕಪಕ್ಷೀಯವಾಗಿ ನೋಡುವ ಬದಲು ಎರಡೂ ಬದಿಯ ಮಾಹಿತಿಯನ್ನು ಪರಿಶೀಲಿಸಿ ವಾಸ್ತವ ವರದಿ ಪ್ರಕಟಿಸಬೇಕು. ವಿಜಯಪುರದ ಗೋಳಗುಮ್ಮಟದಂತೆ ಪತ್ರಿಕಾರಂಗವೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದ ಅವರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಭಿವೃದ್ಧಿಗೆ ₹5 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದರು.
ಕಾನಿಪ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಯಡಳ್ಳಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆ ಮೇಯರ್ ಎಂ.ಎಸ್. ಕರಡಿ, ವಿಡಿಎ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ ಭಾಗವಹಿಸಿದ್ದರು.
ವಿಶೇಷ ಆಹ್ವಾನಿತರಾಗಿ ಕಾನಿಪ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ರಾಜ್ಯ ಕಾರ್ಯದರ್ಶಿ ಪುಂಡಲೀಕ ಬಾಳೋಜಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಮಲ್ಲಿಕಾರ್ಜುನರೆಡ್ಡಿ ಗೊಂಡಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ವಾರ್ಷಿಕ ವರದಿ ಮಂಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪದಾಧಿಕಾರಿಗಳು, ಕಾರ್ಯಕಾರಿಣಿ ಹಾಗೂ ಸಲಹಾ ಸಮಿತಿ ಸದಸ್ಯರು, ಹಿರಿಯ ಪತ್ರಕರ್ತರು, ಸಂಘದ ಸದಸ್ಯರು ಮತ್ತು ಅವರ ಕುಟುಂಬಸ್ಥರು ಭಾಗವಹಿಸಿದ್ದರು. ಪ್ರಕಾಶ ಬೆಣ್ಣೂರ ಸ್ವಾಗತಿಸಿದರು. ಮಂಜುಳಾ ಹಿಪ್ಪರಗಿ ಪ್ರಾರ್ಥಿಸಿದರು. ಸಂಗೀತಾ ಮಠಪತಿ ಕಾರ್ಯಕ್ರಮ ನಿರೂಪಿಸಿದರು. ಶಶಿಕಾಂತ ಮೆಂಡೆಗಾರ ವಂದಿಸಿದರು.

Share this