ಸಪ್ತಸಾಗರ ವಾರ್ತೆ ವಿಜಯಪುರ, ಸೆ. 18:
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಅವರು ಕೊಪ್ಪಳದಲ್ಲಿ ದಲಿತ ಮಹಿಳೆಗೆ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಖಂಡಿಸಿ ವಿಜಯಪುರ ನಗರ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕ ಹಾಗೂ ಜಲನಗರ ಬ್ಲಾಕ್ ಕಾಂಗ್ರೆಸ್ ಘಟಕದ ವತಿಯಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಇತ್ತೀಚೆಗೆ ಕೊಪ್ಪಳದಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಅವರು ಸಾಮಾನ್ಯ ದಲಿತ ಮಹಿಳೆ ಕೂಡ ಚಾಮುಂಡಿಯ ಮುಡಿಗೆ ಹೂವನ್ನು ಮುಡಿಸಲು ಯೋಗ್ಯರಲ್ಲ. ಸನಾತನ ಧರ್ಮದವರು ಮಾತ್ರ ಹೂ ಮುಡಿಸಬೇಕೆಂದು ಹೇಳಿಕೆ ನೀಡಿರುವುದು ದಲಿತ ಮಹಿಳೆಯರಿಗೆ ಅವಹೇಳನ ಮಾಡಲಾಗಿದೆ. ಅವರ ವಿರುದ್ದ ಕ್ರಮ ಜರುಗಿಸಲು ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ.ಜಾ. ಘಟಕದ ಅಧ್ಯಕ್ಷ ರಮೇಶ ಗುಬ್ಬೇವಾಡ ಅವರು, ಮುಸ್ಲಿಂ ಹೆಣ್ಣುಮಕ್ಕಳು ಅಷ್ಟೇ ಅಲ್ಲ. ದಲಿತ ಹೆಣ್ಣುಮಕ್ಕಳು ಕೂಡ ಚಾಮುಂಡೇಶ್ವರಿಗೆ ಹೂವನ್ನು ಮುಡಿಸಲು ಯೋಗ್ಯರಲ್ಲ ಎನ್ನುವುದರ ಮೂಲಕ ಯತ್ನಾಳ ದಲಿತ ಮಹಿಳೆಯರನ್ನು ಅವಮಾನಿಸಿದ್ದಾರೆ. ಅಲ್ಲದೆ ಹಲವಾರು ಕಾರ್ಯಕ್ರಮಗಳಲ್ಲಿ ಅವರು ಮಾತನಾಡುವಾಗ ಹಿಂದುಗಳು ನಾವೆಲ್ಲರೂ ಒಂದು, ದಲಿತರು ಮತ್ತು ಹಿಂದುಳಿದವರು ಎಲ್ಲ ಜಾತಿ ಸಮುದಾಯದವರನ್ನು ಒಂದು ಎಂದು ಹೇಳುವ ತಾವು ದಲಿತರನ್ನು ಅವಮಾನಿಸಿ ಮಾತನಾಡಿರುವದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ದಲಿತರು ಕೂಡ ಹಿಂದುಗಳೇ ಎನ್ನುವದು ತಮ್ಮ ನೆನಪಿನಲ್ಲಿರಲಿ. ಇವತ್ತು ಸಿದ್ದರಾಮಯ್ಯನವರು ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉದ್ಘಾಟಿಸಲು ಮುಸ್ಲಿಂ ಮಹಿಳೆ ಸಾಹಿತಿ ಬಾನು ಮುಸ್ತಾಕ ಅವರಿಗೆ ಅವಕಾಶ ನೀಡಿದ್ದನ್ನು ಸ್ವಾಗತಿಸುತ್ತೇವೆ. ಮುಂದಿನ ದಿನಮಾನಗಳಲ್ಲಿ ದಲಿತರಿಗೂ ಕೂಡ ನಾಡಹಬ್ಬ ಮೈಸೂರು ದಸರಾ ಉತ್ಸವ ಉದ್ಘಾಟಿಸಲು ಅವಕಾಶ ದೊರೆಯುತ್ತದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಸದಸ್ಯೆ ಆರತಿ ಶಹಾಪೂರ ಮಾತನಾಡಿ, ಎಲ್ಲ ಹೆಣ್ಣುಮಕ್ಕಳಿಗೆ ಸಮಾನವಾದ ಹಕ್ಕನ್ನು ನೀಡಿರುವ ಬಾಬಾಸಾಹೇಬ ಅಂಬೇಡ್ಕರ ಅವರ ಸಂವಿಧಾನವನ್ನು ಧಿಕ್ಕರಿಸಿ ಯತ್ನಾಳರು ಮಾತನಾಡಿದ್ದಾರೆ. ಅವರ ಮಾತುಗಳು ಹೆಣ್ಣು ಕುಲಕ್ಕೆ ಮಾಡಿರುವ ಅವಮಾನ ಎಂದು ಹೇಳಿದರು.
ನಗರ ಬ್ಲಾಕ್ ಕಾಂಗ್ರೆಸ್ ಪ.ಜಾ. ಘಟಕದ ಅಧ್ಯಕ್ಷ ಪರಶುರಾಮ ಹೊಸಮನಿ ಮಾತನಾಡಿ, ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಅವರು ಮೈಸೂರು ದಸರಾ ಉತ್ಸವದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ಸನಾತನ ಧರ್ಮದವರು ಮಾತ್ರ ಹೂ ಮುಡಿಸಬೇಕು ಮತ್ತು ಪೂಜೆ ಸಲ್ಲಿಸಬೇಕು ಅಂತಾ ದಲಿತ ವಿರೋಧಿ ಹೇಳಿಕೆ ನೀಡಿ ದಲಿತ ಮಹಿಳೆಯರಿಗೆ ಅವಮಾನಿಸಿದ್ದಾರೆ. ಇವರು ಜಾತಿ ವಿರೋಧಿ ಚಟುವಟಿಕೆ ಮತ್ತು ಜಾತಿ ಜಾತಿಗಳ ನಡುವೆ ಕೋಮು ಗಲಭೆಗೆ ಕುಮ್ಮಕ್ಕು ನೀಡುತ್ತಿದ್ದು, ಇವರ ಮೇಲೆ ಸರಕಾರವು ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಲನಗರ ಬ್ಲಾಕ್ ಪ.ಜಾ. ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ ಛಲವಾದಿ, ಭಾರತಿ ಹೊಸಮನಿ, ತಿಪ್ಪಣ್ಣ (ವಕೀಲರು) ಮುಂತಾದವರು ಮಾತನಾಡಿದರು.
ಪ್ರತಿಭಟನೆಯಲ್ಲಿ ಡಿ.ಸಿ.ಸಿ. ಉಪಾಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಡಿ.ಸಿ.ಸಿ. ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೊಡೆ, ಚನಬಸಪ್ಪ ನಂದರಗಿ, ಹಾಜಿಲಾಲ ದಳವಾಯಿ, ಸತೀಶ ಅಡವಿ, ಸರ್ಫರಾಜ ಮಿರ್ದೆ, ಯುವರಾಜ ಬಜಂತ್ರಿ, ಕೃಷ್ಣಾ ಲಮಾಣಿ, ಫಯಾಜ್ ಕಲಾದಗಿ, ಅಕ್ರಂ ಮಾಶಾಳಕರ, ಅಪ್ಪು ಪೂಜಾರಿ, ವೀರೇಶ ಕಲಾಲ, ಸಂತೋಷ ಶಹಾಪುರ, ಅಶ್ಫಾಕ ಮನಗೂಳಿ, ಮಹಾದೇವ ರಾವಜಿ, ಮಹಾದೇವ ಚಲವಾದಿ, ಶಬ್ಬೀರ ಪಾಟೀಲ, ತಾಜೋದ್ದೀನ ಖಲೀಫಾ, ಬಾಬು ಯಾಳವಾರ, ಅರುಣ ಬಜಂತ್ರಿ, ಕಲ್ಲಪ್ಪ ಕಲಶೆಟ್ಟಿ, ಗೌಸ ಮುಜಾವರ, ಮಹಾದೇವ ಲಿಂಗದಳ್ಳಿ, ಮಲ್ಲಿಕಾರ್ಜುನ ಸಿಂಗೆ, ಲಾಲಸಾಬ ಕೊರಬು, ಹಮೀದಾ ಪಟೇಲ, ಅಮಿನ ಸತ್ತಿಕರ, ದಸ್ತಗೀರ ಶಾನವಾಲೆ, ರಮೇಶ ಮುದಕಣ್ಣವರ, ಇಜಾಜ್ ಮುಕಬಿಲ್, ಸಂಜೀವ ಶಿವಪೂಜಿ, ಶಿವಕುಮಾರ ಪಿ. ವಗ್ಯಾನವರ, ಸಾಗರ ಎಂ. ಹದಗಲ್, ಸತೀಶ ಪಾಟೀಲ, ಸಂಜು ಗುನ್ನಾಪೂರ, ರಾಜು ಭೂತನಾಳ, ರಾಕೇಶ ಗುನ್ನಾಪೂರ ಮುಂತಾದವರು ಭಾಗವಹಿಸಿದ್ದರು.
ದಲಿತ ಮಹಿಳೆಗೆ ಅವಹೇಳನಕಾರಿ ಹೇಳಿಕೆ ನೀಡಿದ ಶಾಸಕ ಯತ್ನಾಳ ವಿರುದ್ಧ ಪ್ರತಿಭಟನೆ
