ಸಿಂದಗಿಯಲ್ಲಿ ಧರಣಿ: ವಿಜಯಪುರ ಜಿಲ್ಲೆಗೆ 371(ಜೆ) ಮೀಸಲಾತಿ ಕಲ್ಪಿಸಲು ಧರಣಿ ನಿರತರ ಆಗ್ರಹ

ಸಪ್ತಸಾಗರ ವಾರ್ತೆ,ಸಿಂದಗಿ, ಅ. 10: ವಿಜಯಪುರ ಜಿಲ್ಲೆಯನ್ನು ಸಂವಿಧಾನದ 371(ಜೆ) ಕಲಂ ವ್ಯಾಪ್ತಿಗೆ ಒಳಪಡಿಸಿ, ಜಿಲ್ಲೆಯ ಯುವಜನರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ವಿಶೇಷ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ನಗರದ ಬಸವೇಶ್ವರ ವೃತ್ತದ ಬಳಿ ಕಳೆದ ಎಂಟು ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದವು.
ಗೋಕಾಕ ಚಳವಳಿಯ ರೂವಾರಿ ಶ್ರೀ ರೇ.ಚ. ರೇವಡಿಗಾರ ಪ್ರತಿಷ್ಠಾನ ಹಾಗೂ 371(ಜೆ) ಹೋರಾಟ ಸಮಿತಿ ನೇತೃತ್ವದಲ್ಲಿ ಧರಣಿ ನಡೆಯುತ್ತಿದ್ದು, ಕರ್ನಾಟಕ ಸರ್ಕಾರಿ ಹಾಗೂ ಅರೆ ಸರ್ಕಾರಿ ನಿವೃತ್ತ ನೌಕರರ ಸಂಘ, ಶ್ರೀ ನೀಲಗಂಗಾದೇವಿ ಚೌಕ ಯುವಕ ಮಂಡಳಿ ಹಾಗೂ ಬಿಜೆಪಿ ಮಹಿಳಾ ಮೋರ್ಚಾ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ವಿಜಯಪುರ ಜಿಲ್ಲೆಯ ಸಿಂದಗಿ, ಇಂಡಿ, ಬಾಗೇವಾಡಿ ಹಾಗೂ ಮುದ್ದೇಬಿಹಾಳ ತಾಲೂಕುಗಳು ಡಾ. ಡಿ.ಎಂ. ನಂಜುಂಡಪ್ಪ ವರದಿಯಲ್ಲಿ ಹಿಂದುಳಿದ ಪ್ರದೇಶಗಳೆಂದು ಗುರುತಿಸಲ್ಪಟ್ಟಿದ್ದರೂ, ಜಿಲ್ಲೆಯನ್ನು 371(ಜೆ) ಅಡಿಯಲ್ಲಿ ಪರಿಗಣಿಸದಿರುವುದು ಅನ್ಯಾಯವಾಗಿದೆ ಎಂದು ಹೋರಾಟಗಾರರು ಆರೋಪಿಸಿದರು.
ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಜಾರಿಗೆ ಬಂದಿರುವ 371(ಜೆ) ಕಲಂನ ಸೌಲಭ್ಯಗಳು ವಿಜಯಪುರ ಜಿಲ್ಲೆಯ ಜನರಿಗೂ ದೊರೆಯಬೇಕು. ವಿಶೇಷವಾಗಿ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಜಿಲ್ಲೆಯ ಯುವಜನರಿಗೆ ನ್ಯಾಯಯುತ ಮೀಸಲಾತಿ ದೊರೆಯುವಂತೆ 371(ಜೆ) ಅನ್ನು ವಿಜಯಪುರ ಜಿಲ್ಲೆಗೆ ಅನ್ವಯಿಸಬೇಕು ಎಂದು ಒತ್ತಾಯಿಸಿದರು.
ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ವಿಜಯಪುರ ಜಿಲ್ಲೆ ಅಭಿವೃದ್ಧಿ ಹಾಗೂ ಅವಕಾಶಗಳಲ್ಲಿ ಹಿಂದುಳಿದಿದೆ. ಜಿಲ್ಲೆಯ ಜನರ ಬಹುಕಾಲದ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, 371(ಜೆ) ಸೌಲಭ್ಯ ವಿಸ್ತರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮುಖಂಡರು ಆಗ್ರಹಿಸಿದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ವಿ.ಬಿ. ಕುರುಡಿ, ಉಪಾಧ್ಯಕ್ಷ ಎಸ್.ಎಲ್. ಪಾಟೀಲ, ನಿವೃತ್ತ ಶಿಕ್ಷಕ ಎಸ್.ಬಿ. ಮುರುಗಾನೂರ, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ನೀಲಮ್ಮ ಯಡ್ರಾಮಿ, ಯುವಕ ಮಂಡಳಿ ಸದಸ್ಯ ಮುತ್ತು ಪಟ್ಟಣಶೆಟ್ಟಿ, ರಂಗನಾಥ ತೋಫ್ರೆ, ಗುರುಸಿದ್ದ ಪಟ್ಟಣಶೆಟ್ಟಿ ಸೇರಿದಂತೆ ಹಲವರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Share this