ಬಣಜಿಗ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸಿ: ಸರ್ಕಾರಕ್ಕೆ ಗುರುಲಿಂಗಪ್ಪ ಅಂಗಡಿ ಆಗ್ರಹ

ಸಪ್ತಸಾಗರ ವಾರ್ತೆ,ವಿಜಯಪುರ, ಆ.7: ಬಣಜಿಗ ಸಮಾಜವನ್ನು ಕೂಡಲೇ ಪ್ರವರ್ಗ 2ಎ ಅಡಿಯಲ್ಲಿ ಸೇರ್ಪಡೆಗೊಳಿಸಿ ನ್ಯಾಯಾಲಯದ ಆದೇಶವನ್ನು ಜಾರಿಗೆ ತರಬೇಕು ಎಂದು ಬಿಜೆಪಿ ವಿಜಯಪುರ ಜಿಲ್ಲಾಧ್ಯಕ್ಷ ಹಾಗೂ ಬಣಜಿಗ ಸಮಾಜದ ಮುಖಂಡ ಗುರುಲಿಂಗಪ್ಪ ಅಂಗಡಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ಆದೇಶದಂತೆ ಬಣಜಿಗ ಸಮಾಜಕ್ಕೆ 2ಎ ಮೀಸಲಾತಿ ನೀಡಲು ಸರ್ಕಾರ ವಿಳಂಬ ಮಾಡದೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
1994ರ ಮೊದಲು ಬಣಜಿಗ ಸಮಾಜ ಶಿಕ್ಷಣ ಮತ್ತು ರಾಜಕೀಯ ಮೀಸಲಾತಿಯಲ್ಲಿ ಪ್ರವರ್ಗ 2ಎ ಅಡಿಯಲ್ಲಿತ್ತು. ಆದರೆ ವೀರಪ್ಪ ಮೊಯ್ಲಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಮಾಜವನ್ನು 3ಎ ಪ್ರವರ್ಗಕ್ಕೆ ವರ್ಗಾಯಿಸಿ ಅನ್ಯಾಯ ಮಾಡಿತು. ಬಳಿಕ 18 ವರ್ಷಗಳ ಕಾನೂನು ಹೋರಾಟದ ನಂತರ ನ್ಯಾಯಾಲಯವು ಮೀಸಲಾತಿ ಕುರಿತು ಆದೇಶ ನೀಡಿದೆ. ಆದ್ದರಿಂದ 1994ಕ್ಕೂ ಮುನ್ನ ಇದ್ದಂತೆ ಸಂಪೂರ್ಣ 2ಎ ಮೀಸಲಾತಿಯನ್ನು ಪುನಃ ಜಾರಿಗೊಳಿಸಿ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳಿಂದ ವಿವಿಧ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಪಂಚಮಸಾಲಿ ಮತ್ತು ಬಣಜಿಗ ಸಮಾಜಗಳು ಒಂದೇ ನಾಣ್ಯದ ಎರಡು ಮುಖಗಳಂತಿದ್ದು, ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟಕ್ಕೂ ತಮ್ಮ ಬೆಂಬಲವಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿರುವ ಬಣಜಿಗ ಸಮುದಾಯದ ನಾಯಕರು ಮುಖ್ಯಮಂತ್ರಿಯನ್ನು ಮನವೊಲಿಸಿ ಸಮಾಜಕ್ಕೆ ಪರಿಪೂರ್ಣ 2ಎ ಮೀಸಲಾತಿ ದೊರಕುವಂತೆ ಕ್ರಮ ಕೈಗೊಳ್ಳಬೇಕು. ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಮಾಜದ ಮುಖಂಡ ಬಸವರಾಜ ಮಂಟೂರ ಮಾತನಾಡಿ, ಸರ್ಕಾರದ ಆದೇಶವಿದ್ದರೂ ತಹಶೀಲ್ದಾರರು ಜಾತಿ ಪ್ರಮಾಣಪತ್ರ ನೀಡಲು ವಿಳಂಬ ಮಾಡುತ್ತಿದ್ದಾರೆ. ಈ ಕುರಿತು ಸರ್ಕಾರ ಸ್ಪಷ್ಟ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಗದೀಶ ಪಚ್ಚಾಪೂರ, ಪ್ರಭು ಅಂಗಡಿ, ಪ್ರಕಾಶ ವಾಣಿ, ಬಸವರಾಜ ಬೆಳ್ಳುಬ್ಬಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Share this