ಸಪ್ತಸಾಗರ ವಾರ್ತೆ, ವಿಜಯಪುರ, ಜ. 9 : ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಿಸಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬರುವ ಬಜೆಟ್‌ನಲ್ಲಿ ಕಾಲೇಜು ಆರಂಭಕ್ಕೆ ಪೂರ್ಣ ಪ್ರಮಾಣದ ಅನುದಾನ ಬಿಡುಗಡೆ ಮಾಡುವಂತೆ ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಮನವಿ ಮಾಡಿದರು.
ಶುಕ್ರವಾರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಹೆಸರು ನಾಮಕರಣ ಹಾಗೂ ಪುತ್ಥಳಿ ಅನಾವರಣ ಕಾರ್ಯಕ್ರಮ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ನಡೆದ ಚಾಲನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿಗಳು ಈಗಾಗಲೇ ಹಾವೇರಿಯಲ್ಲಿ ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಘೋಷಿಸಿದ್ದಾರೆ. ಹೀಗಾಗಿ ಬರುವ ಬಜೆಟ್‌ನಲ್ಲಿ ಯೋಜನೆ ಅನುಷ್ಠಾನಕ್ಕೆ ಅಗತ್ಯದ ಪೂರ್ಣ ಅನುದಾನ ಘೋಷಿಸಿ, ಬಿಡುಗಡೆ ಮಾಡಬೇಕು ಎಂದು ವೇದಿಕೆ ಮೇಲಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಮಾಡಿದರು.
ಇದಲ್ಲದೇ ಅಖಂಡ ವಿಜಯಪುರ ಜಿಲ್ಲೆಯ ಜನರು ಕೃಷ್ಣಾ ಮೇಲ್ದಂಡೆ ಯೋಜನೆ ಮೂಲಕ ನಮ್ಮ ಜಿಲ್ಲೆ ಸಮಗ್ರ ನೀರಾವರಿ ಹೊಂದಬೇಕು ಆಶಯ ಹೊಂದಿದ್ದ ನಮ್ಮ ಹಿರಿಯರಾದ ಸುಗಂದಿ ಮುರಿಗೆಪ್ಪ, ಹುಜರೆ, ಶಿವಸಂಗಪ್ಪ ಕಡಪಟ್ಟಿ ಅವರ ಕನಸು ನನಸಾಗಬೇಕು. ಯೋಜನೆಗೆ ಲಕ್ಷಾಂತರ ಕುಟುಂಬಗಳು ತ್ಯಾಗ ಮಾಡಿದ್ದು, ಅವರ ತ್ಯಾಗದ ಬದುಕಿಗೆ ಅರ್ಥ ಸಿಗುವಂತೆ ಜಲಸಂಪನ್ಮೂಲ ಖಾತೆ ಹೊಂದಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಹೋರಾಟದಲ್ಲಿ ಪಾಲ್ಗೊಂಡು ಮುಂಚೂಣಿಯಲ್ಲಿ ನಿಂತಿದ್ದ ವೀರರಾಣಿ ಕಿತ್ತೂರು ಚನ್ನಮ್ಮಳಿಗೂ ವಿಜಯಪುರ ಜಿಲ್ಲೆಗೂ ಅವಿನಾಭಾವ ಸಂಬಂಧವಿದೆ. ಈ ಬಾಂಧವ್ಯದ ಪ್ರತೀಕವಾಗಿ ನಗರದಲ್ಲಿ ಕಿತ್ತೂರು ಚೆನ್ನಮ್ಮ ರಾಣಿಯ ಪುತ್ಥಳಿ ಸ್ಥಾಪನೆ ಮೂಲಕ ಗೌರವ ಸಲ್ಲಿಸಲಾಗುತ್ತಿದೆ ಎಂದರು.
ಜಾತ್ಯಾತೀತ ಮನೋಭಾವದಿಂದ ಹೋರಾಟ ನಡೆಸಿದ ಕಿತ್ತೂರು ರಾಣಿ ಚನ್ನಮ್ಮ ಅವರೊಂದಿಗೆ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಕೆಚ್ಚೆದೆಯ ಹೋರಾಟವೂ ಸ್ಮರಣೀಯ ಎಂದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಸಚಿವರು, ಜಿಲ್ಲೆಯ ಶಾಸಕರು ವೇದಿಕೆ ಮೇಲಿದ್ದರು.
ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಪೂರ್ಣ ಅನುದಾನ ಕೊಡಿ- ಸಚಿವ ಶಿವಾನಂದ ಪಾಟೀಲ


