ಸಪ್ತಸಾಗರ ವಾರ್ತೆ, ವಿಜಯಪುರ,ಮಾ.5:
ವಿಜಯಪುರ-ಬಾಗಲಕೋಟೆ ಉಭಯ ಜಿಲ್ಲೆಗಳಲ್ಲಿ 2023 ರ ವಿಧಾನಸಭಾ ಚುನಾವಣಾ ಪ್ರಚಾರ ಭಾಷಣ ಮಾಡುವ ಸಂದರ್ಭದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಮುಂದುವರೆಸುವುದಾಗಿ ಹಾಗೂ ಸಂತ್ರಸ್ತರ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿಯೂ ಕಾಂಗ್ರೆಸ್ ನಾಯಕರು ನೀರಾವರಿ ಯೋಜನೆಗೆ ಪ್ರತಿ ವರ್ಷ ರೂ 40,000 ಕೋಟಿಯಂತೆ ಮುಂದಿನ 5 ವರ್ಷಗಳ ಅವಧಿಯಲ್ಲಿ ಎರಡು ಲಕ್ಷ ಕೋಟಿ ಹಣ ಖರ್ಚು ಮಾಡಿ ನೀರಾವರಿ ಯೋಜನೆಯನ್ನು ಪೂರ್ತಿಮಾಡುವುದಾಗಿಯೂ ವಾಗ್ದಾನ ಮಾಡಿದ್ದರು. ಆದರೆ ಕಳೆದ 3 ವರ್ಷದಲ್ಲಿ ಯು.ಕೆ.ಪಿಗೆ ಯಾವುದೇ ಪ್ರಾಧಾನ್ಯತೆ ನೀಡದೆ ಇರುವುದು ಈ ಭಾಗದ ಸಂತ್ರಸ್ತರಿಗೆ ಹಾಗೂ ಜನ ಸಾಮಾನ್ಯರಿಗೆ ನೋವಿನ ಸಂಗತಿಯಾಗಿದೆ ಎಂದು ವಿಧಾನ ಪರಿಷತ್ ಶಾಸಕ ಹನಮಂತ ನಿರಾಣಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಅವಳಿ ಜಿಲ್ಲೆಯ ಜನಪ್ರತಿನಿಧಿಗಳ ಮತ್ತು ಸಂತ್ರಸ್ತರ ಹಾಗೂ ಹಿರಿಯ ನಾಯಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕೃ.ಮೇ. ಯೋಜನೆಯ ಮೂರನೆ ಹಂತದಲ್ಲಿ ಮುಳುಗಡೆಯಾಗುವ ಪ್ರತಿ ಎಕರೆ ನೀರಾವರಿ ಜಮೀನಿಗೆ 40 ಲಕ್ಷ ಹಾಗೂ ಪ್ರತಿ ಎಕರೆ ಒಣಬೇಸಾಯ ಜಮೀನಿಗೆ 30 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿ 5-6 ತಿಂಗಳು ಕಳೆದರೂ ಸಹಿತ ಸರಕಾರ ಯಾವುದೇ ಪರಿಹಾರ ಇನ್ನು ವಿತರಣೆ ಮಾಡಿರುವುದಿಲ್ಲ. ಕಾರಣ ವಿಜಯಪುರ -ಬಾಗಲಕೋಟೆ ಉಭಯ ಜಿಲ್ಲೆಗಳ ಸಂತ್ರಸ್ತರು ನಾಳೆ ಮುಖ್ಯಮಂತ್ರಿಗಳು ಮಂಡಸಲಿರುವ ಬಜೆಟ್ ನಲ್ಲಿ ಈ ಯೋಜನೆಗೆ ಹಣ ಇಡುವುದೇ ಎಂದು ಜಾತಕ ಪಕ್ಷಿಯಂತೆ ಅವಳಿ ಜಿಲ್ಲೆಯ ಸಂತ್ರಸ್ತರು ಕಾಯುತ್ತಿದ್ದಾರೆ.? ಕಾರಣ ಸಂತ್ರಸ್ತರ ನಿರೀಕ್ಷೆಯಂತೆ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಮುಳುಗಡೆಯಾಗಲಿರುವ ಜಮೀನುಗಳಿಗೆ ಪರಿಹಾರ ಧನ ವಿತರಿಸಲು ಪ್ರತ್ಯೇಕವಾಗಿ ಈ ಯೋಜನೆಯ ಹಣವನ್ನು ಮೀಸಲಿಡಬೇಕು. ಈ ಹಿಂದೆ ಜಮೀನು ಕಳೆದುಕೊಂಡು ನ್ಯಾಯಾಲಯದ ಆದೇಶವಾಗಿ ಪರಿಹಾರಕ್ಕಾಗಿ ಕಾಯುತ್ತಿರುವ ಸಂತ್ರಸ್ತರಿಗೆ ಹಾಗೂ ಮೂರನೇ ಹಂತದಲ್ಲಿ ಮುಳುಗಡೆಯಾಗುವ 20 ಗ್ರಾಮಗಳ ಹಾಗೂ ಬಾಗಲಕೋಟೆ ನಗರವನ್ನು ಒಳಗೊಂಡಂತೆ ಸುಮಾರು 25 ಸಾವಿರ ಕಟ್ಟಡಗಳ ಮೌಲ್ಯ ಮಾಪನ ಮಾಡಿ ಪರಿಹಾರ ಧನವನ್ನು ವಿತರಿಸಲು ಸಂತ್ರಸ್ತರಿಗೆ ಸರಕಾರ ಮಾತು ಕೊಟ್ಟಂತೆ ನಡೆದುಕೊಳ್ಳಬೇಕು ಹಾಗೂ ಜಮೀನುಗಳಿಗೆ ಪರಿಹಾರ ನೀಡುವ ದೃಷ್ಟಿಯಿಂದ ಸರಕಾರ ಬಜೆಟ್‌ನಲ್ಲಿ ಹೆಚ್ಚಿನ ಹಣವನ್ನು ಮೀಸಲಿಟ್ಟು ತಮ್ಮ ಸರಕಾರದ ಉಳಿದ ಎರಡು ವರ್ಷದ ಅವಧಿಯಲ್ಲಿ ಮುಳುಗಡೆಯಾಗಲಿರುವ 73 ಸಾವಿರ ಎಕರೆ ಜಮೀನುಗಳಿಗೆ ಹಾಗೂ ಪುನರ್ ವಸತಿ ಮತ್ತು ಪುನರ್ ನಿರ್ಮಾಣಕ್ಕೆ ಸ್ವಾಧೀನವಾದ ಸುಮಾರು 6500 ಎಕರೆ ಜಮೀನುಗಳಿಗೆ ಭೂ ಪರಿಹಾರವನ್ನು ವಿತರಿಸಬೇಕು. ಈ ಭಾಗದಿಂದ 2018ರ ಚುನಾವಣೆಯಲ್ಲಿ ಆಯ್ಕೆಯಾಗಿ ಈಗ ಮುಖ್ಯಮಂತ್ರಿಗಳಾದ ತಾವುಗಳು ಈ ಭಾಗದ ಆಶೋತ್ತರ ಈಡೇರಿಸಲು ಯಾವುದೇ ಮಹತ್ವರವಾದ ಯೋಜನೆಗಳು ಇಲ್ಲಿಯವರೆಗೆ ಬಂದಿರುವುದಿಲ್ಲ. ಕನಿಷ್ಠ ಪಕ್ಷ ಯುಕೆಪಿ ಸಂತ್ರಸ್ತರ ಅಳಲನ್ನು ಈಡೇರಿಸುವವರು ಎಂದು ಜನರು ಜಾತಕ ಪಕ್ಷಿಯಂತೆ ಬಜೆಟ್ ಕಡೆಗೆ ಕಾಯುತ್ತಿದ್ದಾರೆ. ನಮ್ಮೆಲ್ಲರ ನಿರೀಕ್ಷೆಯಂತೆ ಏನಾಗುವುದೆಂದು ನಾಳೆ ಬಜೆಟ್ ನಲ್ಲಿ ನೋಡಬೇಕಾಗಿದೆ ಎಂದು ನಿರಾಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃ.ಮೇ.ಯೋಜನೆಯ ಸಂತ್ರಸ್ತರಿಗೆ ನ್ಯಾಯ ಕಲ್ಪಿಸಿ: ನಿರಾಣಿ


