ಸಪ್ತಸಾಗರ ವಾರ್ತೆ, ವಿಜಯಪುರ, ಮಾ. 12:
ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ, ಉಪನ್ಯಾಸಕರ ಸಂಘ ಹಾಗೂ ಬೋಧಕೇತರ ಸಂಘಗಳ ಪ್ರತಿನಿಧಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾ.12 ರಂದು ಜಿಲ್ಲಾಧಿಕಾರಿಗಳ ಮೂಲಕ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಸಂಘಗಳ ಪ್ರಮುಖ ಬೇಡಿಕೆಗಳಲ್ಲಿ ಜಿಲ್ಲಾ ಉಪ ನಿರ್ದೇಶಕರ ಕಚೇರಿಗಳ ಮೇಲಿನ ಆಡಳಿತಾತ್ಮಕ ನಿಯಂತ್ರಣವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ವಹಿಸುವ ಕುರಿತು ಪ್ರಸ್ತಾಪಿತ ಸರ್ಕಾರದ ಕಡತ ಸಂಖ್ಯೆ EP 10 DGD 2026 ಅನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಲಾಗಿದೆ.
ಹಾಗೆಯೇ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪರೀಕ್ಷಾ ವಿಭಾಗವನ್ನು ಹಿಂದಿನಂತೆ ನಿರ್ದೇಶನಾಲಯಕ್ಕೆ ಮರಳಿ ವರ್ಗಾಯಿಸುವಂತೆ ಮನವಿ ಮಾಡಲಾಗಿದೆ.
ಇದರ ಜೊತೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಪ್ರಸ್ತುತ ಇರುವ 320:1 ವಿದ್ಯಾರ್ಥಿ–ಉಪನ್ಯಾಸಕರ ಅನುಪಾತವನ್ನು NCERT ಮಾರ್ಗಸೂಚಿಗಳ ಪ್ರಕಾರ ಮರು ನಿಗದಿಪಡಿಸಬೇಕು. ಕಳೆದ ಮೂರು ವರ್ಷಗಳಿಂದ ಪರಿಷ್ಕರಿಸದಿರುವ ದ್ವಿತೀಯ ಪಿಯುಸಿ ಉತ್ತರಪತ್ರಿಕೆ ಮೌಲ್ಯಮಾಪನ ಭತ್ಯೆ ಹಾಗೂ ಪರೀಕ್ಷಾ ಸಂಭಾವನೆಯನ್ನು ತಕ್ಷಣ ಪರಿಷ್ಕರಿಸಿ, ಹಿಂದಿನ ವರ್ಷಗಳ ಬಾಕಿ ಸಂಭಾವನೆಯನ್ನು ಕೂಡಲೇ ಪಾವತಿಸುವಂತೆ ಆಗ್ರಹಿಸಲಾಗಿದೆ. ಈ ಸಂಭಾವನೆಯನ್ನು ಮೊದಲ ಆದ್ಯತೆಯಾಗಿ ಖಾಸಗಿ ಪದವಿ ಪೂರ್ವ ಕಾಲೇಜುಗಳ ಹಾಗೂ ಅತಿಥಿ ಉಪನ್ಯಾಸಕರಿಗೆ ವಿತರಿಸಬೇಕು ಎಂದು ಸಂಘಗಳು ತಿಳಿಸಿವೆ.
ಕಾರ್ಯಭಾರ ಕೊರತೆ ಇರುವ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ಸೇವೆಯಿಂದ ವಿಮುಕ್ತಿಗೊಳಿಸುವ ಆದೇಶವನ್ನು ಹಿಂಪಡೆದು, ಅವರಿಗೆ ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯಭಾರ ನೀಡುವ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಬೇಕು ಎಂಬ ಬೇಡಿಕೆಯನ್ನು ಕೂಡ ಸಂಘಗಳು ಮುಂದಿಟ್ಟಿವೆ. ಜೊತೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಹಾಗೂ ಪದೋನ್ನತಿ ಪಡೆದ ಪ್ರಾಂಶುಪಾಲರ ಸ್ಥಳನಿಯುಕ್ತಿಯ ವೇಳೆ ಎಲ್ಲಾ ಖಾಲಿ ಹುದ್ದೆಗಳನ್ನು ಯಾವುದೇ ನಿರ್ಬಂಧವಿಲ್ಲದೆ ಆಯ್ಕೆ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಮೊದಲ ಹಂತದ ಈ ಹೋರಾಟಕ್ಕೆ ಸರ್ಕಾರ ಸ್ಪಂದಿಸದಿದ್ದರೆ ಎರಡನೇ ಹಂತದಲ್ಲಿ ರಾಜ್ಯದ ಎಲ್ಲಾ ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಸೇರಿ ದ್ವಿತೀಯ ಪಿಯುಸಿ ಉತ್ತರಪತ್ರಿಕೆ ಮೌಲ್ಯಮಾಪನ ಕಾರ್ಯವನ್ನು ಅನಿರ್ದಿಷ್ಟಾವಧಿಗೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪ್ರಾಂಶುಪಾಲರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಕೆ. ಉಪ್ಪಾರ್, ಉಪನ್ಯಾಸಕರ ಸಂಘದ ಜಿಲ್ಲಾ ಅಧ್ಯಕ್ಷ ಹೆಬ್ಬಿ, ಪ್ರಾಂಶುಪಾಲರ ಸಂಘದ ರಾಜ್ಯ ಉಪಾಧ್ಯಕ್ಷ ಎಲ್.ಐ. ಹುಣಸಿಕಟ್ಟಿ, ಎಸ್.ಎಸ್. ಗೌರಿ, ಎಂ.ಬಿ. ರೆಬಿನಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಿಯು ಕಾಲೇಜುಗಳ ಸಂಘಗಳಿಂದ ಮನವಿ ಸಲ್ಲಿಕೆ


