ಮಾನವ ಕಳ್ಳಸಾಗಾಣಿಕೆ ತಡೆಗೆ ಜನಜಾಗೃತಿ ಅತ್ಯಗತ್ಯ: ನ್ಯಾಯಾಧೀಶ ಅರವಿಂದ ಹಾಗರಗಿ

ಸಪ್ತಸಾಗರ ವಾರ್ತೆ,ವಿಜಯಪುರ, ಜುಲೈ 31:
ಮಾನವ ಕಳ್ಳಸಾಗಾಣಿಕೆ ಎಂಬುದು ಸಮಾಜದ ಭದ್ರತೆ ಹಾಗೂ ಮಾನವ ಹಕ್ಕುಗಳಿಗೆ ಗಂಭೀರ ಸವಾಲಾಗಿದ್ದು, ಕೇವಲ ಒಂದು ದಿನ ಆಚರಿಸುವುದಕ್ಕಿಂತ ಸಾರ್ವಜನಿಕರಲ್ಲಿ ನಿರಂತರ ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅರವಿಂದ ಎಸ್. ಹಾಗರಗಿ ಹೇಳಿದರು.
ನಗರದ ರಾಘವೇಂದ್ರ ಕಾಲೋನಿಯ ರುಡ್‌ಸೆಟ್ ಸಂಸ್ಥೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾನವ ಕಳ್ಳಸಾಗಾಣಿಕೆ ತಡೆ ದಿನಾಚರಣೆ, ಜಾಗೃತಿ ಮತ್ತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ಕಳ್ಳಸಾಗಾಣಿಕೆ ಪ್ರಕರಣಗಳನ್ನು ತಡೆಗಟ್ಟಲು ಕಾನೂನುಗಳ ಬಗ್ಗೆ ಸಾರ್ವಜನಿಕರಿಗೆ ಸಮರ್ಪಕ ಅರಿವು ಮೂಡಿಸಬೇಕು. ಮಹಿಳೆಯರು, ಮಕ್ಕಳು ಹಾಗೂ ದುರ್ಬಲ ವರ್ಗಗಳ ಸುರಕ್ಷತೆಗೆ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದು ಅವರು ಕರೆ ನೀಡಿದರು.
ಸ್ಪಂದನಾ ಸ್ವಯಂಸೇವಾ ಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ ದೇಶಪಾಂಡೆ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳ ಕಳ್ಳಸಾಗಾಣಿಕೆ ಸಮಾಜಕ್ಕೆ ಅಂಟಿರುವ ಗಂಭೀರ ಪಿಡುಗಾಗಿದೆ. ಬಾಲ್ಯವಿವಾಹ ನಿರ್ಮೂಲನೆ, ಪೋಕ್ಸೋ ಹಾಗೂ ಬಾಲ ನ್ಯಾಯ (ಜೆ.ಜೆ.) ಕಾಯ್ದೆಗಳ ಬಗ್ಗೆ ಪರಿಣಾಮಕಾರಿ ಜಾಗೃತಿ ಮೂಡಿಸಿದರೆ ಇಂತಹ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಡಾ. ಸಂತೋಷಕುಮಾರ ಎಚ್. ಮಾತನಾಡಿ, ಸಾಮಾಜಿಕ ಜಾಲತಾಣಗಳ ದುರ್ಬಳಕೆಯಿಂದ ಮಕ್ಕಳು ಮತ್ತು ಯುವಜನತೆ ಸೈಬರ್ ಅಪರಾಧ ಹಾಗೂ ವಂಚನೆಗಳಿಗೆ ಸುಲಭವಾಗಿ ಬಲಿಯಾಗುತ್ತಿದ್ದಾರೆ. ಪೋಷಕರು ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ವಹಿಸಿ, ಸುರಕ್ಷಿತ ಡಿಜಿಟಲ್ ಬಳಕೆಯ ಕುರಿತು ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಯಶೋದಾ ಜೋಶಿ ಪ್ರಾರ್ಥನೆ ನೆರವೇರಿಸಿದರು. ಜಿಲ್ಲಾ ನಿರೂಪಣಾಧಿಕಾರಿಗಳು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಿತಾ ಬಿರಾದಾರ ಪ್ರತಿಜ್ಞಾವಿಧಿ ಬೋಧಿಸಿದರು. ಮಿಷನ್ ಶಕ್ತಿ ಜಿಲ್ಲಾ ಸಂಯೋಜಕಿ ಭಾರತಿ ಪಾಟೀಲ ಕಾರ್ಯಕ್ರಮ ನಿರೂಪಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ದೀಪಾಕ್ಷಿ ಜಾನಕಿ ವಂದಿಸಿದರು.
ಜಿಲ್ಲೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮಿಷನ್ ಶಕ್ತಿ ಸಿಬ್ಬಂದಿ, ಅಂಗನವಾಡಿ ಹಿರಿಯ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಶಕ್ತಿ ಸದನ, ಸಾಂತ್ವನ ಕೇಂದ್ರ, ಸಖಿ ಒನ್ ಸ್ಟಾಪ್ ಸೆಂಟರ್ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share this