ಸೊರಬವನ್ನು ತಾಳಗುಪ್ಪ–ಸಿರಸಿ ರೈಲು ಮಾರ್ಗಕ್ಕೆ ಸೇರಿಸಲು ರಾಘವೇಂದ್ರ ಮನವಿ
ಸಪ್ತಸಾಗರ ವಾರ್ತೆ,ಶಿವಮೊಗ್ಗ, ಅ. 12: ಮಲೆನಾಡು ಭಾಗದ ರೈಲ್ವೆ ಸಂಪರ್ಕ ಬಲಪಡಿಸುವ ನಿಟ್ಟಿನಲ್ಲಿ ಪ್ರಗತಿಯಲ್ಲಿರುವ ಹಾಗೂ ಪ್ರಸ್ತಾವಿತ ಯೋಜನೆಗಳನ್ನು ತ್ವರಿತಗೊಳಿಸುವ ಕುರಿತು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಅಧಿಕಾರಿಗಳೊಂದಿಗೆ ಸೋಮವಾರ ಶಿವಮೊಗ್ಗದಲ್ಲಿ ಪ್ರಗತಿ ಪರಿಶೀಲನೆ ನಡೆಸಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ರೈಲ್ವೆ ಯೋಜನೆಗಳ ಕುರಿತು ನಡೆದ ಸಭೆಯಲ್ಲಿ ತಾಳಗುಪ್ಪ–ಸಿದ್ದಾಪುರ–ಸಿರಸಿ–ಹುಬ್ಬಳ್ಳಿ ಶಿವಮೊಗ್ಗ–ತೀರ್ಥಹಳ್ಳಿ–ಶೃಂಗೇರಿ–ಮಂಗಳೂರು, ಭದ್ರಾವತಿ–ಚಿಕ್ಕಜಾಜೂರು, ತಾಳಗುಪ್ಪ–ಹೊನ್ನಾವರ ಹಾಗೂ ಶಿವಮೊಗ್ಗ–ಬೀರೂರು ಜೋಡಿ ರೈಲು ಮಾರ್ಗಗಳ ಪ್ರಗತಿ ಕುರಿತು ಚರ್ಚಿಸಲಾಯಿತು.
ಕೋಟೆಗಂಗೂರಿನಲ್ಲಿ ಪ್ರಸ್ತಾವಿತ ಕೋಚಿಂಗ್ ಡಿಪೋ, ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರು ಹೊಸ ರೈಲು ಮಾರ್ಗದ ಮೊದಲ ಹಂತ, ಶಿಕಾರಿಪುರ–ರಾಣೆಬೆನ್ನೂರು ಎರಡನೇ ಹಂತ, ಅಮೃತ ಭಾರತ ನಿಲ್ದಾಣ ಯೋಜನೆಯಡಿ ನಿಲ್ದಾಣಗಳ ಅಭಿವೃದ್ಧಿ, ರಸ್ತೆ ಮೇಲ್ಸೇತುವೆ (ROB), ರಸ್ತೆ ಕೆಳಸೇತುವೆ (RUB) ಹಾಗೂ ಲೆವೆಲ್ ಕ್ರಾಸಿಂಗ್ಗಳ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು.
ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ತಾಳಗುಪ್ಪ–ಸಿದ್ದಾಪುರ–ಸಿರಸಿ ಹೊಸ ರೈಲು ಮಾರ್ಗದ ಸಮೀಕ್ಷೆಯಲ್ಲಿ ಸೊರಬವನ್ನು ಸೇರಿಸುವಂತೆ ಮನವಿ ಮಾಡಿದರು. ಭದ್ರಾವತಿ ರೈಲು ನಿಲ್ದಾಣವನ್ನು ಅಮೃತ ಭಾರತ ನಿಲ್ದಾಣ ಯೋಜನೆಗೆ ಸೇರಿಸಿ, ಪ್ರಯಾಣಿಕರ ಸೌಲಭ್ಯ ಹಾಗೂ ಮೂಲಸೌಕರ್ಯ ಅಭಿವೃದ್ಧಿಪಡಿಸುವಂತೆಯೂ ಒತ್ತಾಯಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶಾಸಕ ಆರಗ ಜ್ಞಾನೇಂದ್ರ, ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ, ಡಿ.ಎಸ್. ಅರುಣ್, ರೈಲ್ವೆ ಮುಖ್ಯ ಆಡಳಿತಾಧಿಕಾರಿ (ನಿರ್ಮಾಣ) ಅಭಯ್ ಕುಮಾರ್ ಗುಪ್ತಾ, ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ನೈಋತ್ಯ ರೈಲ್ವೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ನಿಲ್ದಾಣಗಳಿಗೆ ಭೇಟಿ
ಸಭೆಗೂ ಮುನ್ನ ಸೋಮಣ್ಣ ಅವರು ಶಿವಮೊಗ್ಗ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಪ್ರಯಾಣಿಕರ ಸೌಲಭ್ಯಗಳು ಹಾಗೂ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಬಳಿಕ ತರೀಕೆರೆ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು. ಈ ವೇಳೆ ರೈಲ್ವೆ ಸಂಪರ್ಕ, ನಿಲ್ದಾಣದ ಸೌಲಭ್ಯಗಳು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಸಾರ್ವಜನಿಕರಿಂದ ಆಲಿಸಿದರು.


