ಸಪ್ತಸಾಗರ ವಾರ್ತೆ ವಿಜಯಪುರ, ಅ.29: ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆ, ಮಹಾನಗರ ಪಾಲಿಕೆ ಇವರ ಸಹಯೋಗದಲ್ಲಿ 2025-26ನೇ ಸಾಲಿನ ರಾಜ್ಯಸಭಾ ಸಂಸದೆ ಸುಧಾಮೂರ್ತಿ ಇವರ ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಜಿಲ್ಲೆಯ ವಿಜಯಪುರ ತಾಲೂಕಿನ ಬುರಣಾಪೂರ ಗ್ರಾಮದಲ್ಲಿ ಬುಧವಾರ ಸಮಗ್ರ ಶ್ವಾನ ಆರೈಕೆ ಕೇಂದ್ರ ನಿರ್ಮಾಣ ಕಟ್ಟಡಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿದರು.
ಭೂಮಿ ಪೂಜೆ ನೆರವೇರಿಸಿದ ನಂತರ ಮಾತನಾಡಿದ ಅವರು, ಸುಪ್ರಿಂಕೋರ್ಟ್ ನಿರ್ದೇಶಾನುಸಾರ ಸುಸಜ್ಜಿತ ಕೇಂದ್ರ ನಿರ್ಮಾಣ ಮಾಡಲಾಗುತ್ತಿದ್ದು, ಈ ಕೇಂದ್ರಕ್ಕೆ ನೀರಿನ ವ್ಯವಸ್ಥೆ, ಎಬಿಸಿ ಸೆಂಟರ್ ನಿರ್ಮಾಣ ಮಾಡಲಾಗಿದ್ದು, ಈ ಕೇಂದ್ರದಲ್ಲಿ ಅನಾರೋಗ್ಯಕ್ಕೊಳಗಾದ, ಗಾಯಗೊಂಡ ಒಟ್ಟು 500 ನಾಯಿಗಳಿಗೆ ಆಶ್ರಯ ಒದಗಿಸಲಾಗುವುದು. ಸಂಸದರ ಪ್ರದೇಶಾಭಿವೃದ್ದಿ ನಿಧಿಯಿಂದ ಎರಡು ಕೋಟಿ ವೆಚ್ಚದಲ್ಲಿ ಈ ಕೇಂದ್ರ ನಿರ್ಮಾಣ ಮಾಡಲಾಗುತ್ತಿದ್ದು, ಶ್ವಾನಗಳಿಗೆ ಈ ಕೇಂದ್ರ ಅನುಕೂಲ ಕಲ್ಪಿಸಲಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ, ಜಿಲ್ಲಾಧಿಕಾರಿ ಡಾ.ಆನಂದ ಕೆ, ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕರಾದ ಅಶೋಕ ಘೋಣಸಗಿ, ಸುಜಾತ ಪಾಟೀಲ, ಪಾಲಿಕೆ ವೈದ್ಯಾಧಿಕಾರಿ ಎಸ್.ಎಲ್ ಲಕ್ಕಣ್ಣವರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಶ್ವಾನ ಆರೈಕೆ ಕೇಂದ್ರ ಕಟ್ಟಡಕ್ಕೆ ರಾಜ್ಯಸಭಾ ಸದಸ್ಯೆ ಡಾ.ಸುಧಾಮೂರ್ತಿ ಭೂಮಿಪೂಜೆ


