ರಾಣಿ ಚೆನ್ನಮ್ಮ ವಿವಿ ಇತಿಹಾಸ ವಿಭಾಗದ ಮುಖ್ಯಸ ಪ್ರೊ. ಕೆ. ಎಲ್. ಎನ್ ಮೂರ್ತಿ ಅಮಾನತು

ಸಪ್ತ ಸಾಗರ ವಾರ್ತೆ, ವಿಜಯಪುರ, ಜು. 23:
ವಿದ್ಯಾರ್ಥಿನಿಗೆ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ವಿಜಯಪುರ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರನ್ನು ಸೇವೆಯಿಃದ ಅಮಾನತು ಮಾಡಲಾಗಿದೆ.
ಇತಿಹಾಸ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಪ್ರೊ. ಕೆ. ಎಲ್. ಎನ್. ಮೂರ್ತಿ ಸೇವೆಯಿಂದ ಅಮಾನತುಗೊಂಡವರು.
ಪ್ರಾಧ್ಯಾಪಕ ಮೂರ್ತಿ ಅವರು ಇತಿಹಾಸ ವಿಭಾಗದ ಸಂಶೋಧನಾ ವಿದ್ಯಾರ್ಥಿನಿಗೆ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ವಿದ್ಯಾರ್ಥಿನಿ ಖುದ್ದಾಗಿ ಭೇಟಿಯಾಗಿ ವಿವಿ ಕುಲಪತಿಗಳಿಗೆ ದೂರು ಸಲ್ಲಿಸಿದ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆ ಆಂತರಿಕ ದೂರು ನಿವಾರಣಾ ಸಮಿತಿ ತನಿಖೆ ನಡೆಸಿತ್ತು. ಈ ತನಿಖೆಯಲ್ಲಿ ಪ್ರೊ. ಕೆ. ಎಲ್. ಎನ್. ಮೂರ್ತಿ ಅವರ ಮೇಲಿನ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಈ ವರದಿಯನ್ನು ಆಧರಿಸಿ ಮೂರ್ತಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ವಿವಿ ಕುಲ ಸಚಿವ ಸಂತೋಷ ಕಾಮಗೌಡ ಆದೇಶ ಹೊರಡಿಸಿದ್ದಾರೆ.

ಸೂಕ್ತ ಕಾನೂನು ರೂಪಿಸಿ

ರಾಜ್ಯದ ಅನೇಕ ವಿವಿಗಳಲ್ಲಿ ಪ್ರಾಧ್ಯಾಪಕರಿಂದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳು ಸಾಕಷ್ಟು ನಡೆಯುತ್ತಿದ್ದು, ಅವು ಬೆಳಕಿಗೆ ಬರುವುದು ತೀರಾ ಅಪರೂಪ. ಲೈಂಗಿಕ ಕಿರುಕುಳ ನೀಡುವ ಸಿಬ್ಬಂದಿ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸೂಕ್ತ ಕಾನೂನು ರಚಿಸಬೇಕು. ಲೈಂಗಿಕ ಕಿರುಕುಳ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಿ ವಿದ್ಯಾರ್ಥಿನಿಯರಿಗೆ ನಿರ್ಭೀತಿಯಿಂದ ವ್ಯಾಸಂಗ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ರಾಣಿ ಚೆನ್ನಮ್ಮ ವಿವಿ ಸಿಂಡಿಕೇಟ್ ಸದಸ್ಯ ರಫೀ ಭಂಡಾರಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Share