ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು: ಕುಶಾಲ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 10 :
ಪುಸ್ತಕಗಳಿಂದ ಮನೆ ಶೃಂಗಾರಗೊಂಡರೆˌ ಮಕ್ಕಳ ಮನಸ್ಸು ಜ್ಞಾನದಿಂದ ಶೃಂಗಾರವಾಗುತ್ತದೆ ಎಂದು ಕನ್ನಡ ಪುಸ್ತಕ
ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಸದಸ್ಯ ಡಾ. ಕುಶಾಲ ಬರಗೂರ ಹೇಳಿದರು.
ನಗರದ ಸ್ವಾತಂತ್ರ‍್ಯಯೋಧರ ಕಾಲನಿಯ ಸಾಹಿತಿ ಸಂಗಮೇಶ ಬದಾಮಿ ಅವರ
ನಿವಾಸದಲ್ಲಿ ಹಮ್ಮಿಕೊಂಡ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ
ಉದ್ಘಾಟಿಸಿ ಅವರು ಮಾತನಾಡಿದರು.
ದೇವರ ಮನೆಯಲ್ಲಿ ದೇವರು ಕಾಣುವ ಹಾಗೆ ಮನೆ ಪ್ರವೇಶಿಸಿದೊಡನೆ ಗ್ರಂಥಗಳು ಕಾಣಬೇಕು. ಅಂದಾಗ ಓದುವ ಸಂಸ್ಕೃತಿ ಬೆಳೆಯುತ್ತದೆ. ಮೊಬೈಲ್ ಗೀಳು
ಕಡಿಮೆಯಾಗಿˌ ಓದುವ ಆಸಕ್ತಿ ಹೆಚ್ಚುತ್ತದೆ ಎಂದರು.
ಅತಿಥಿ ಶಂಕರ ಬೈಚಬಾಳ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ವಚನಕ್ರಾಂತಿಗೆ
ನಾಂದಿ ಹಾಡಿದ ಬಾಗೇವಾಡಿಯ ಬಸವಣ್ಣನವರ ವಚನಗಳು ನಮಗೆ ದಾರಿದೀಪ. ಅಂಥ
ವಚನˌ ಗ್ರಂಥಗಳನ್ನು ಓದಿದರೆ ವ್ಯಕ್ತಿತ್ವ ವಿಕಸನವಾಗಬಲ್ಲದು ಎಂದರು.
ಸಾಹಿತಿ ಸಂಗಮೇಶ ಬದಾಮಿ ಮಾತನಾಡಿ, ಮನೆಯಲ್ಲಿ ಪುಸ್ತಕಗಳಿದ್ದರೆ ಸಾಲದು. ಇಷ್ಟಪಟ್ಟು ಓದಬೇಕು. ಆಗ ಪುಸ್ತಕ ಸಂಸ್ಕೃತಿ ಉಳಿಯುತ್ತದೆ. ಅಂತರ್ಜಾಲದ
ಹಾವಳಿಯಲ್ಲಿ ಓದನ್ನು ನಿರ್ಲಕ್ಷಿಸದೆˌ ಓದು ನಮ್ಮ ಗುರಿಯಾಗಬೇಕು ಎಂದರು.
ಮಲ್ಲಿಕಾರ್ಜುನ ಅಮರಣ್ಣವರ ಅಧ್ಯಕ್ಷತೆ ವಹಿಸಿದ್ದರು.
ಬಸವರಾಜ ಸಾಲವಾಡಗಿ
ಸ್ವಾಗತಿಸಿದರು. ಪ್ರಾಧಿಕಾರದ ಸದಸ್ಯ ಮುರುಗೇಶ ಸಂಗಮ ನಿರೂಪಿಸಿದರು. ಎಸ್.ಡಿ.ಜೋಶಿ ವಂದಿಸಿದರು.
ಕಾರ್ಯಕ್ರಮದಲ್ಲಿ ಸಿದ್ದು ಯರನಾಳ, ಸಾಕ್ಷಿ ಚವ್ಹಾಣˌ ಬಸವರಾಜ ಒಂಟಗೋಡಿ, ಹರ್ಷ ಮಲಘಾಣˌ ಅಂಬಾದಾಸ ಚವ್ಹಾಣˌ ವಿದ್ಯಾಲಕ್ಷ್ಮಿ ಬದಾಮಿ ಮತ್ತಿತರರು ಉಪಸ್ಥಿತರಿದ್ದರು.

Share this