ದಸರಾ ಪುಸ್ತಕ ಮೇಳದಲ್ಲಿ ಹೊಸ ಪುಸ್ತಕಗಳ ಬಿಡುಗಡೆಗೆ ನೋಂದಣಿ : ಅ.5 ಅರ್ಜಿ ಸಲ್ಲಿಕೆಗೆ ಕೊನೆಯ ದಿನ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ.25 :
ಮೈಸೂರು ದಸರಾ ಉತ್ಸವ-2026ರ ಅಂಗವಾಗಿ ಅಕ್ಟೋಬರ್ 11ರಿಂದ 20ರವರೆಗೆ ಮೈಸೂರಿನ ಹಳೆ ಜಿಲ್ಲಾಧಿಕಾರಿ ಕಚೇರಿ ಎದುರಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಯೋಜಿಸಲಾಗಿರುವ ಮೈಸೂರು ದಸರಾ ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳ-2026ರಲ್ಲಿ ಹೊಸ ಪುಸ್ತಕಗಳ ಬಿಡುಗಡೆಗೆ ಅವಕಾಶ ಕಲ್ಪಿಸಲಾಗಿದ್ದು, ಆಸಕ್ತ ಲೇಖಕರು ಹಾಗೂ ಪ್ರಕಾಶಕರು ನೋಂದಾಯಿಸಿಕೊಳ್ಳುವಂತೆ ಕನ್ನಡ ಪುಸ್ತಕ ಪ್ರಾಧಿಕಾರ ತಿಳಿಸಿದೆ.
ಪುಸ್ತಕ ಮೇಳದ ಸಂದರ್ಭದಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರ ಸಂಕಿರಣ ಸೇರಿದಂತೆ ವಿವಿಧ ಸಾಹಿತ್ಯಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದ್ದು, 2026ರಲ್ಲಿ ಪ್ರಕಟಿಸಿರುವ ಹೊಸ ಪುಸ್ತಕಗಳನ್ನು ನಾಡಿನ ಖ್ಯಾತ ಸಾಹಿತಿಗಳಿಂದ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ.
ಪುಸ್ತಕ ಬಿಡುಗಡೆಗೆ ಆಸಕ್ತ ಲೇಖಕರು ಹಾಗೂ ಪ್ರಕಾಶಕರು ಪ್ರಾಧಿಕಾರದ ವೆಬ್‌ಸೈಟ್‌ https://kpp.karnataka.gov.in ಮೂಲಕ ಉಚಿತವಾಗಿ ಅರ್ಜಿ ನಮೂನೆಯನ್ನು ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಬಿಡುಗಡೆ ಮಾಡಲು ಉದ್ದೇಶಿಸಿರುವ ಪುಸ್ತಕದ ಮೂರು ಪ್ರತಿಗಳನ್ನು ಸಲ್ಲಿಸಬೇಕು. ಪುಸ್ತಕದಲ್ಲಿ ಯಾವುದೇ ವಿವಾದಾತ್ಮಕ ಅಂಶಗಳಿರಬಾರದು. ಪುಸ್ತಕಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನು ತೊಡಕು ಉಂಟಾದಲ್ಲಿ ಲೇಖಕರು ಹಾಗೂ ಪ್ರಕಾಶಕರೇ ಜವಾಬ್ದಾರರಾಗಿರುತ್ತಾರೆ.
ಪುಸ್ತಕಗಳನ್ನು ಬಿಡುಗಡೆಗೆ ಆಯ್ಕೆ ಮಾಡುವ ಅಥವಾ ತಿರಸ್ಕರಿಸುವ ಸಂಪೂರ್ಣ ಅಧಿಕಾರ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಇರುತ್ತದೆ. ಅಕ್ಟೋಬರ್ 5ರ ನಂತರ ಯಾವುದೇ ಪುಸ್ತಕಗಳನ್ನು ಬಿಡುಗಡೆಗೆ ಸ್ವೀಕರಿಸಲಾಗುವುದಿಲ್ಲ.
ಬಿಡುಗಡೆಗೆ ಆಯ್ಕೆಯಾಗುವ ಪುಸ್ತಕಗಳನ್ನು ಲಭ್ಯವಿರುವ ಸಂಖ್ಯೆಗೆ ಅನುಗುಣವಾಗಿ ಮೇಳದ ದಿನಗಳಿಗೆ ವಿಂಗಡಿಸಿ, ಯಾವ ದಿನ ಯಾವ ಲೇಖಕರ ಪುಸ್ತಕ ಬಿಡುಗಡೆ ಮಾಡಲಾಗುವುದು ಎಂಬ ಮಾಹಿತಿಯನ್ನು ಸಂಬಂಧಿಸಿದ ಲೇಖಕರು ಹಾಗೂ ಪ್ರಕಾಶಕರಿಗೆ ತಿಳಿಸಲಾಗುವುದು.
ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸುವ ಲೇಖಕರು ಅಥವಾ ಪ್ರಕಾಶಕರಿಗೆ ಯಾವುದೇ ಸಂಭಾವನೆ, ಪ್ರಯಾಣ ವೆಚ್ಚ ಅಥವಾ ಇತರೆ ಸೌಲಭ್ಯಗಳನ್ನು ನೀಡಲಾಗುವುದಿಲ್ಲ. ಆಸಕ್ತ ಲೇಖಕರು ತಮ್ಮ ವಿವರಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರ ದೂರವಾಣಿ ಸಂಖ್ಯೆ 9448056562ಗೆ ಕಳುಹಿಸಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Share this