ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 9:
ರೇಲ್ವೆ ಕೆಳಸೇತುವೆ ನಿರ್ಮಾಣ ವೇಳೆ ಅಗತ್ಯವಾಗಿರುವ ಸೌಕರ್ಯಗಳ ಸ್ಥಳಾಂತರ(Utility Shifting) ಜವಾಬ್ದಾರಿ ರೇಲ್ವೆ ಇಲಾಖೆಗೆ ಸೇರಿದ್ದು, ಇದರಲ್ಲಿ ರಾಜ್ಯ ಸರಕಾರದ ಪಾತ್ರ ಇರುವುದಿಲ್ಲ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ರೇಲ್ವೆ ಇಲಾಖೆ ಕೈಗೊಳ್ಳುವ ಕೆಳಸೇತುವೆ ನಿರ್ಮಾಣ ಸಂದರ್ಭದಲ್ಲಿ ಅಗತ್ಯ ವಿರುವ ವಿದ್ಯುತ್ ಮಾರ್ಗಗಳು, ಒಳಚರಂಡಿ ವ್ಯವಸ್ಥೆ ಹಾಗೂ ಇತರ ಭೂಗತ ಸೌಲಭ್ಯಗಳ ಸ್ಥಳಾಂತರ ಕೆಲಸ ರೇಲ್ವೆ ಇಲಾಖೆ ಕಾಮಗಾರಿಯ ವ್ಯಾಪ್ತಿಯಲ್ಲಿಯೇ ಬರುತ್ತದೆ. ದೇಶಾದ್ಯಂತ ಇದೇ ಪದ್ಧತಿ ಅನುಸರಿಸಲಾಗುತ್ತಿದೆ. ಆದರೆ, ಸಂಸದ ರಮೇಶ ಜಿಗಜಿಣಗಿ ಅವರು ವಿಜಯಪುರ ನಗರದ ವಜ್ರಹನುಮಾನ ರೇಲ್ವೆ ಗೇಟ್ ಬಳಿ ಕೆಳಸೇತುವೆ ನಿರ್ಮಾಣದ ವಿಷಯದಲ್ಲಿ ರೇಲ್ವೆ ಇಲಾಖೆ ಮಾಡಬೇಕಾದ ಕೆಲಸದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯದೆ ರಾಜ್ಯ ಸರಕಾರದ ವಿರುದ್ಧ ಮಾಡಿರುವ ಆರೋಪ ನಿರಾಧಾರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಂಸದರಿಗೆ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ನಿಜವಾದರೂ ಕಾಳಜಿ ಇದ್ದರೆ ತಮ್ಮ ಪ್ರಭಾವ ಬಳಸಿ ರೇಲ್ವೆ ಇಲಾಖೆಯಿಂದ ಅಗತ್ಯವಿರುವ ಅನುದಾನ ತಂದು ಕಾಮಗಾರಿ ಪೂರ್ಣಗೊಳಿಸಬೇಕು. ಆದನ್ನು ಬಿಟ್ಟು ರಾಜ್ಯ ಸರಕಾರದ ವಿರುದ್ಧ ಆರೋಪಿಸುವುದು ಸರಿಯಲ್ಲ ಎಂದು ಸಚಿವ ಎಂ. ಬಿ. ಪಾಟೀಲ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೇಲ್ವೆ ಕೆಳಸೇತುವೆ ನಿರ್ಮಾಣ ವೇಳೆ ಅಗತ್ಯವಾಗಿರುವ ಸೌಕರ್ಯಗಳ ಸ್ಥಳಾಂತರ ಕೇಂದ್ರದ ಜವಾಬ್ದಾರಿ: ಎಂಬಿಪಿ


