ಸಪ್ತಸಾಗರ ವಾರ್ತೆ, ವಿಜಯಪುರ, ಆ. 5: ದೇವರ ಸ್ಮರಣೆಯಿಂದ ಪ್ರತಿಯೊಬ್ಬರ ಬದುಕಿನಲ್ಲಿ ನೆಮ್ಮದಿ ಮೂಡಿ, ಧನಾತ್ಮಕ ಶಕ್ತಿಯ ಅನುಭವವಾಗುತ್ತದೆ ಎಂದು ಮ ಘ ಚ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸೋಮವಾರ ಸಂಜೆ ತಾಲೂಕಿನ ನಾಗಠಾಣ ಗ್ರಾಮದ ಉದಯಲಿಂಗೇಶ್ವರ ಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಪುರಾಣ ಕಾರ್ಯಕ್ರಮದಲ್ಲಿ ‘ಉದಯಲಿಂಗೇಶ್ವರ ಚರಿತಾಮೃತ’ ಧ್ವನಿಸುರುಳಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ದೇವರ ನಾಮ ಸ್ಮರಣೆಯು ಸರಳ. ಆದರೆ ಪರಿಣಾಮಕಾರಿಯಾಗಿದೆ. ಇದು ಎಲ್ಲರ ಜೀವನದಲ್ಲಿ ಶಾಂತಿ, ಸಂತೋಷ ಮತ್ತು ಯಶಸ್ಸನ್ನು ತರುತ್ತದೆ ಎಂದು ಹೇಳಿದರು.
ಧ್ವನಿಸುರುಳಿ ರಚಿಸಿದ ಕರ್ಜಗಿಯ ಶಿವಾನಂದ ಶಾಸ್ತ್ರಿ ಮಾತನಾಡಿ, ಉದಯಲಿಂಗರ ಸ್ಮರಣೆ ನಮಗೆಲ್ಲ ಶ್ರೀರಕ್ಷೆ. ದೇವರ ಸ್ಮರಣೆಯು ನಮ್ಮಲ್ಲಿ ವಿಶ್ವ ಭ್ರಾತೃತ್ವದ ಭಾವವನ್ನು ಮೂಡಿಸುತ್ತದೆ ಎಂದರು.
ಶಿಕ್ಷಕ ಸಾಹಿತಿ ಸಂತೋಷ ಬಂಡೆ ಮಾತನಾಡಿ, ಉತ್ಸಾಹ ಮತ್ತು ಭಕ್ತಿಯಿಂದ ದೇವರ ಸ್ಮರಣೆಯನ್ನು ಜೀವನದ ಎಲ್ಲಾ ಕಾರ್ಯಗಳಲ್ಲಿ ಅಳವಡಿಸಿಕೊಂಡು, ನಮ್ಮ ಇಷ್ಟ ದೇವರು-ಗುರುವನ್ನು ಸದಾ ಸ್ಮರಿಸುತ್ತಿರಬೇಕು.ನಮ್ಮಲ್ಲಿ ವಿಶ್ವ ಪ್ರೀತಿಯ ಭಾವ ಮೂಡಿಸುವಲ್ಲಿ ದೇವರ ಸ್ಮರಣೆ ಮುಖ್ಯವಾಗಿದೆ ಎಂದು ಹೇಳಿದರು.
ಉಮರಾಣಿಯ ವೇದಮೂರ್ತಿ ಮುರುಗೇಂದ್ರ ಶಾಸ್ತ್ರಿಗಳು ಪುರಾಣ ಕಾರ್ಯಕ್ರಮ ನಡೆಸಿಕೊಟ್ಟರು.
ಶರಣಬಸು ಪೂಜಾರಿ, ಗಾಯಕ ವಿರೂಪಾಕ್ಷಯ್ಯ ಗೌಡಗಾಂವ, ತಬಲಾ ವಾದಕ ಬಸವರಾಜ ಆಳಂದ, ಗ್ರಾಮಸ್ಥರಾದ ಅಶೋಕ ಕತ್ನಳ್ಳಿ, ರಾವುತಪ್ಪ ಬಿಜ್ಜರಗಿ, ಶಂಕರಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಬಾಬು ಕೋಲಾರ, ಸುರೇಶ ಕತ್ನಳ್ಳಿ, ಮಹಾದೇವ ಲೋಣಿ, ಮುತ್ತು ಕತ್ನಳ್ಳಿ, ಹನಮಂತ ಬಕಾಟಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಬದುಕಿನ ನೆಮ್ಮದಿಗೆ ದೇವರ ಸ್ಮರಣೆ ಅಗತ್ಯ- ಚನ್ನಮಲ್ಲಿಕಾರ್ಜುನ ಶ್ರೀಗಳು
