ಸಪ್ತಸಾಗರ ವಾರ್ತೆ | ವಿಜಯಪುರ, ಆ.9: ರಾಷ್ಟ್ರಪ್ರೇಮವೆಂದರೆ ಕೇವಲ ದೇಶದ ಮೇಲಿನ ಪ್ರೀತಿ, ಭಕ್ತಿ ಮತ್ತು ಗೌರವಕ್ಕೆ ಸೀಮಿತವಾಗಿಲ್ಲ. ದೇಶದ ಸಂಸ್ಕೃತಿ, ಇತಿಹಾಸ ಹಾಗೂ ಸಂವಿಧಾನವನ್ನು ಗೌರವಿಸುವುದರ ಜೊತೆಗೆ, ದೇಶದ ಒಳಿತಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುವ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಮುಖ್ಯವಾಗಿ ಬಾಲ್ಯದಿಂದಲೇ ಮಕ್ಕಳಲ್ಲಿ ರಾಷ್ಟ್ರಪ್ರೇಮದ ಸಂಸ್ಕಾರ ಬೆಳೆಸುವ ಅಗತ್ಯವಿದೆ ಎಂದು ನವದೆಹಲಿಯ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರ ವೇದಿಕೆ ಅಧ್ಯಕ್ಷ ಡಾ. ಜಾವೀದ್ ಜಮಾದಾರ್ ಪ್ರತಿಪಾದಿಸಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ, ತಾಲೂಕು ಹಾಗೂ ನಗರ ಘಟಕಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿವಿಧ ದತ್ತಿ ಉಪನ್ಯಾಸ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ದೇಶದ ಮೇಲಿನ ಅಭಿಮಾನ ಕೇವಲ ಘೋಷಣೆಗಳಿಗೆ ಸೀಮಿತವಾಗಬಾರದು. ದೇಶದ ಅಭಿವೃದ್ಧಿಗೆ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕೊಡುಗೆ ನೀಡುವುದು, ಕಾನೂನು–ನಿಯಮಗಳನ್ನು ಪಾಲಿಸುವುದು, ಸಾಮಾಜಿಕ ಹೊಣೆಗಾರಿಕೆ ನಿರ್ವಹಿಸುವುದು ಹಾಗೂ ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುವುದೇ ನಿಜವಾದ ರಾಷ್ಟ್ರಪ್ರೇಮ ಎಂದು ಅವರು ಹೇಳಿದರು.
ಹಿರಿಯರ ಸ್ಮರಣಾರ್ಥ ಸ್ಥಾಪಿಸಿರುವ ವಿವಿಧ ದತ್ತಿಗಳ ಮೂಲಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜ್ಞಾನ ದಾಸೋಹದ ಮಹತ್ವದ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಹಿರಿಯರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಇಂತಹ ಕಾರ್ಯಕ್ರಮಗಳು ಸಮಾಜದ ಮೌಲ್ಯಗಳನ್ನು ಗಟ್ಟಿಗೊಳಿಸುತ್ತವೆ ಎಂದು ಡಾ. ಜಮಾದಾರ್ ಅಭಿಪ್ರಾಯಪಟ್ಟರು.
ದೇಶದ ಋಣ ತೀರಿಸುವ ಹೊಣೆ ಪ್ರತಿಯೊಬ್ಬರದ್ದು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಜಯಪುರ ತಾಲೂಕು ಕಸಾಪ ಅಧ್ಯಕ್ಷ ಡಾ. ಆನಂದ ಕುಲಕರ್ಣಿ ಮಾತನಾಡಿ, ರಾಷ್ಟ್ರದ ವಿಚಾರಧಾರೆಗಳನ್ನು ಬಿಂಬಿಸುವಲ್ಲಿ ಸಾಮಾಜಿಕ ಹಾಗೂ ಸಾರ್ವಕಾಲಿಕ ಮೌಲ್ಯಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ನೆಲದ ಅನ್ನ, ನೀರು ಸೇವಿಸಿ ಬದುಕುತ್ತಿರುವ ನಾವು ದೇಶಕ್ಕೆ ಋಣಿಯಾಗಿದ್ದು, ನಮ್ಮ ಕಾರ್ಯಗಳ ಮೂಲಕ ಆ ಋಣ ತೀರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕಾನೂನು ಪಾಲನೆಯೂ ದೇಶಪ್ರೇಮ
‘ರಾಷ್ಟ್ರಪ್ರೇಮದ ಮಹತ್ವ’ ಕುರಿತು ಉಪನ್ಯಾಸ ನೀಡಿದ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ, ಜಾತಿ, ಧರ್ಮ, ಭಾಷೆ ಎಂಬ ಭೇದಭಾವವಿಲ್ಲದೆ ಎಲ್ಲರೊಂದಿಗೆ ಪ್ರೀತಿ ಮತ್ತು ಸೌಹಾರ್ದದಿಂದ ಬದುಕುವುದು ರಾಷ್ಟ್ರಪ್ರೇಮದ ಪ್ರಮುಖ ಲಕ್ಷಣವಾಗಿದೆ. ದೇಶದ ಕಾನೂನು ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದೂ ದೇಶಪ್ರೇಮದ ಭಾಗವೇ ಆಗಿದೆ ಎಂದು ಹೇಳಿದರು.
ಸಮಾಜ ಸೇವೆ, ಪರಿಸರ ಸಂರಕ್ಷಣೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳ ಮೂಲಕ ಪ್ರತಿಯೊಬ್ಬ ನಾಗರಿಕನೂ ರಾಷ್ಟ್ರದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಬಹುದು ಎಂದರು.
ಸ್ವಾವಲಂಬನೆ ಆತ್ಮಗೌರವದ ಸಂಕೇತ
‘ಸ್ವಾವಲಂಬಿ ಜೀವನ’ ಕುರಿತು ಉಪನ್ಯಾಸ ನೀಡಿದ ವಿಜಯಪುರ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಕವಿತಾ ಕಲ್ಯಾಣಪ್ಪಗೋಳ, ಇತರರನ್ನು ಅವಲಂಬಿಸದೆ ಸ್ವಂತ ಶ್ರಮ, ಕೌಶಲ್ಯ ಮತ್ತು ಆದಾಯದ ಮೂಲಕ ಆತ್ಮಾಭಿಮಾನದಿಂದ ಬದುಕುವುದೇ ಸ್ವಾವಲಂಬಿ ಜೀವನ. ಇದು ವ್ಯಕ್ತಿಯ ಆರ್ಥಿಕ ಭದ್ರತೆ, ಮಾನಸಿಕ ನೆಮ್ಮದಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಜಯಾ ಬಿರಾದಾರ, ತ್ರಿಶೂಲ ಸಿದ್ದರಾಮ ದೊಡಮನಿ, ಮೌಲಾಲಿ ಬಸಂತಪೂರ, ಅರ್ಜುನ ಶಿರೂರ ಸೇರಿದಂತೆ ಗಣ್ಯರು ಮಾತನಾಡಿದರು.
ಸುಮನಾ ಕೋರಿ ಪ್ರಾರ್ಥಿಸಿದರು. ಮಹಾದೇವಿ ತೆಲಗಿ ಸ್ವಾಗತಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿಲ್ಪಾ ಭಸ್ಮೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಮತಾ ಮುಳಸಾವಳಗಿ ನಿರೂಪಿಸಿದರು. ವಿಜಯಲಕ್ಷ್ಮೀ ಹಳಕಟ್ಟಿ ವಂದಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ವಿಜಯಕುಮಾರ ಘಾಟಗೆ, ಬಿ.ಎಂ. ಆಜೂರ ಸೇರಿದಂತೆ ಸಾಹಿತ್ಯಾಸಕ್ತರು, ಗಣ್ಯರು ಹಾಗೂ ಕಸಾಪ ಪದಾಧಿಕಾರಿಗಳು ಉಪಸ್ಥಿತರಿದ್ದರು.


