ಗ್ರಾಮೀಣ ಜನತೆಗೆ ತ್ವರಿತವಾಗಿ ಸ್ಪಂದಿಸಿ:ಜಿಪಂ ಸಿಇಒ ರಿಷಿ ಆನಂದ ಕಿವಿಮಾತು

ಸಪ್ತಸಾಗರ ವಾರ್ತೆ,ವಿಜಯಪುರ, ಮೇ 14:
ಸಮಸ್ಯೆ ಹೊತ್ತು ಬರುವ ಗ್ರಾಮೀಣ ಜನತೆಗೆ ತ್ವರಿತವಾಗಿ ಪರಿಹಾರ ಕಲ್ಪಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಕಾಧಿರಿ ರಿಷಿ ಆನಂದ ಹೇಳಿದರು.
ಜಿಲ್ಲೆಯ ತಿಕೋಟಾ ತಾಲೂಕು ಪಂಚಾಯತಿ ಕಾರ್ಯಾಲಯದ ನವೀಕರಣಗೊಂಡ ಪಿಠೋಪಕರಣ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಾಲಯವು ಎಷ್ಟು ನಿಟ್ಟಾಗಿ ಅಚ್ಚುಕಟ್ಟಾಗಿ ಹಾಗೂ ಸ್ವಚ್ಚತೆಯಿಂದ ಇರುತ್ತದೇಯೋ ಅಷ್ಟು ಸಿಬ್ಬಂದಿಗಳಿಗೆ ಕೆಲಸ ನಿರ್ವಹಿಸಲು ಪ್ರೇರಣೆ ಸಿಗುತ್ತದೆ. ಇಂತಹ ಒಂದು ಉತ್ತಮ ಯೋಜನೆಯನ್ನು ಹಾಕಿಕೊಂಡು ಹಳೆಯ ಕಟ್ಟಡದಲ್ಲಿಯೇ ಸಿಬ್ಬಂದಿಗೆ ಅವಶ್ಯಕವಾಗಿ ಬೇಕಾಗಿರುವ ಟೇಬಲ್, ಕುರ್ಚಿ, ಗಣಕಯಂತ್ರ,
ಪ್ರಿಂಟರ್ಸ್‌, ಶೌಚಾಲಯ, ಕುಡಿಯುವ ನೀರು ಮತ್ತು ಉತ್ತಮ ಪರಿಸರ ಓದಗಿಸಿರುವ ತಾಲೂಕು ಪಂಚಾಯತಿಯ ಕಾರ್ಯವನ್ನು ಸಿಇಒ ಪ್ರಶಂಸಿಸಿದರು.
ಮುಂದಿನ ದಿನಮಾನದಲ್ಲಿ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಇನ್ನೂ ಹೆಚ್ಚಿನ ಉತ್ಸಾಹದಿಂದ ಕೆಲಸ ನಿರ್ವಹಿಸಿ ತಿಕೋಟಾ ತಾಲೂಕನ್ನು ಮಾದರಿ ತಾಲೂಕನ್ನಾಗಿಸಲು ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮಗೆ ಒದಗಿಸಿರುವ ಸಲಕರಣೆಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಆ ಮೂಲಕ ಸಮಸ್ಯೆ ಹೊತ್ತು ಬರುವ ಗ್ರಾಮೀಣ ಜನರಿಗೆ ಸೂಕ್ತ ಪರಿಹಾರವನ್ನು ತ್ವರಿತವಾಗಿ ಒದಗಿಸಬೇಕು. ಜೊತೆಗೆ ಅವರೊಡನೆ ಅತ್ಯಂತ ಗೌರವಯುತವಾಗಿ ವರ್ತಿಸಬೇಕು ಎಂದರು.
ನಮ್ಮ ಕಾರ್ಯಾಲಯದ ಬಗ್ಗೆ ನಮಗೆಲ್ಲಾ ಹೆಮ್ಮೆಯಿರಬೇಕು. ಜೊತೆಗೆ ಕಾರ್ಯಾಲಯದ ಸ್ವಚ್ಛತೆಗೆ ಎಲ್ಲರೂ ಸಹಕರಿಸಬೇಕು. ಇದೇ ರೀತಿ ಎಲ್ಲಾ ಗ್ರಾಮ ಪಂಚಾಯತಿಗಳೂ ಸಹ ಜನಸ್ನೇಹಿ ಹಾಗೂ ಸಿಬ್ಬಂದಿಗಳ ಸ್ನೇಹಿಯಾಗಿ ನಿರ್ಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಮುಖ್ಯ ಯೋಜನಾಧಿಕಾರಿ ಸಿ.ಬಿ.ಕುಂಬಾರ, ತಾಲೂಕು ಪಂಚಾಯತಿಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ, ಸಹಾಯಕ ಲೆಕ್ಕಾಧಿಕಾರಿ ಅನ್ವರಹುಸೇನ ನದಾಫ್‌, ತಾಲೂಕು ಯೋಜನಾಧಿಕಾರಿ ಮಹಾಂತೇಶ ಬಾಗೇವಾಡಿ, ಸಹಾಯಕ ನಿರ್ದೇಶಕರಾದ ಶೋಭಕ್ಕ ಶಿಳೀನ, ಬಸವರಾಜ ಸಂಕಗೊಂಡ ಸೇರಿದಂತೆ ತಾಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.
ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ ನಿರೂಪಿಸಿದರು. ಪಿಡಿಓ ಶ್ರೀಶೈಲ ಹಡಪದ ಸ್ವಾಗತಿಸಿದರು. ಸರ್ವಮಂಗಲಾ ಮುಪ್ಪಯ್ಯನಮಠ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿವೃತ್ತಿ ಹೊಂದಿದ ಮಹಾದೇವ ವಾಜಂತ್ರಿ ಅವರನ್ನು ಸನ್ಮಾನಿಸಲಾಯಿತು.

Share this