ಸಪ್ತಸಾಗರ ವಾರ್ತೆ ವಿಜಯಪುರ, ಡಿ. 26:
ಸಿಂದಗಿ ತಾಲೂಕಿನ ಮನ್ನಾಪುರದ ಸಂಗಮನಾಥ ಸಕ್ಕರೆ ಕಾರ್ಖಾನೆಯಲ್ಲಿ ಅಧಿಕಾರಿಗಳ ತಪಾಸಣೆ ವೇಳೆಯಲ್ಲಿ ತೂಕದಲ್ಲಿ ಮೋಸ ನಡೆದಿರುವುದು ಪತ್ತೆಯಾಗಿದೆ.
ಬುಧವಾರ ಒಬ್ಬ ರೈತ ಸಂಶಯದಿಂದ ಹೊರಗಡೆ ತೂಕ ಮಾಡಿಕೊಂಡು ಬಂದಾಗ ಕಬ್ಬಿನ ತೂಕದಲ್ಲಿ 1000 ಕೆ,ಜಿ ತೂಕದಲ್ಲಿ ಮೋಸ ಆಗಿರುವುದು ಕಂಡು ಬಂದಿರುವ ಹಿನ್ನಲೆಯಲ್ಲಿ ಕಾರ್ಖಾನೆ ಸಿಬ್ಬಂದಿಯವರಿಗೂ ಹಾಗೂ ರೈತರ ನಡುವೆ ವಾಗ್ವಾದ ಉಂಟಾಯಿತು. ಈ ವೇಳೆ ಸ್ಥಳಕ್ಕೆ ಸಿಂದಗಿ ತಹಶಿಲ್ದಾರರು ಹಾಗೂ ಅಳತೆ ಮತ್ತು ತೂಕದ ಅಧಿಕಾರಿಗಳು ಬಂದಾಗ ಸರಿಯಾದ ತೂಕ ತೋರಿಸಿ ರೈತರಿಗೆ ಮೊಸ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ, ಅಧಿಕಾರಿಗಳು ಕೂಡಾ ಬಂದಾಗ 560 ಕೆ.ಜಿ ವ್ಯಾತ್ಯಾಸ ಬಂದಿದೆ. ಇದನ್ನು ತಪಾಸಣೆ ಮಾಡಬೇಕು ಎಂದರು.
ಈ ವಿಷಯವನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರಿಂದ ಬುಧವಾರ ಸಂಜೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಗುರುವಾರ ಸಂಬಂಧಿಸಿದ ಇಂಡಿ ಉಪವಿಭಾಗಾಧಿಕಾರಿಗಳು, ಸಿಂದಗಿ ತಹಶಿಲ್ದಾರರು, ಆಹಾರ ಇಲಾಖೆ ನಿರ್ದೇಶಕರು ಹಾಗೂ ಅಳತೆ ಮತ್ತು ಮಾಪನ ಇಲಾಖೆಯ ಅಧಿಕಾರಿ, ಸಿಂದಗಿ ಪಿ.ಎಸ್.ಐ ಅವರೊಂದಿಗೆ ಸ್ಥಳಕ್ಕೆ ಹೋಗಿ ಕೂಲಂಕುಷವಾಗಿ ಪರಿಶೀಲನೆ ಮಾಡಿ ವರದಿ ಕೊಡುವಂತೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ನಿರ್ದೇಶನ ನೀಡಿದ್ದರು.
ಗುರುವಾರ ಬೆಳಿಗ್ಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಯಾವುದೇ ಪೋನ್ ಮೂಲಕ ತಿಳಿಸದೇ ಕಾರ್ಖಾನೆಗೆ ಭೇಟಿ ನೀಡಿ ಈ ಮೇಲಿನ ವಿಷಯಗಳನ್ನು ಹಂತ ಹಂತವಾಗಿ ಕೂಲಂಕುಷವಾಗಿ ಪರಿಶೀಲನೆ ಮಾಡಿ, ಹಲವಾರು ರೀತಿಯ ಪ್ರಯೋಗಗಳನ್ನು ಮಾಡಿ ಮೋಸ ಮಾಡಲು ಸಾಧ್ಯವಿರಬಹುದಾದ ಎಲ್ಲಾ ರೀತಿಯಲ್ಲಿ ತಪಾಸಣೆ ಮಾಡಿದರು. ಎಲ್ಲವೂ ಸರಿಯಾಗಿತ್ತು,
ಕಬ್ಬು ಕಾರ್ಖಾನೆಗೆ ಬಂದ ನಂತರ ಒಟ್ಟು 3 ಬಾರಿ ತೂಕ ಮಾಡಿದಾಗ 3 ಬಾರಿ ಬೇರೆ ಬೇರ ತೂಕ ತೋರಿಸಲಾಗಿತ್ತು, ಹೊರಗಡೆಗಿಂತ 995 ಕೆ.ಜಿ ಕಡಿಮೆ ತೋರಿಸಿತ್ತು, ನಂತರದಲ್ಲಿ 560 ಕೆ.ಜಿ ಕಡಿಮೆ ತೋರಿಸಿತ್ತು, ಅಧಿಕಾರಿಗಳು ಬಂದ ನಂತರ ಎಲ್ಲವೂ ಸರಿಯಾಗಿ ತೋರಿಸಲಾಗಿತ್ತು, ಎಲ್ಲದಕ್ಕೂ ಸಿ,ಸಿ.ಟಿ.ವಿ ಕಣ್ಗಾವಲು ಹಾಗೂ ಅಧಿಕೃತ ಕಾರ್ಖಾನೆಯವರು ನೀಡಿರುವ ರಸೀದಿಯ ಮೇಲೆ 560 ಕೆ.ಜಿ ಮೋಸ ಆಗಿರುವುದಾಗಿ ಅಧಿಕಾರಿಗಳು ನಿರ್ಧರಿಸಿದರು
ನಾಳೆ ಕಾರ್ಖಾನೆಯರಿಗೆ ಇದನ್ನು ಕೇಳಿ ಒಂದು ನೋಟಿಸ್ ಕೊಟ್ಟು ೨ ದಿನಗಳಲ್ಲಿ ಉತ್ತರ ಕೇಳುತ್ತೇವೆ. ಹಾಗೆ ಒಂದು ವಿಸ್ತ್ರತವಾದ ವರದಿಯನ್ನು ತಯಾರಿಸಿ ಜಿಲ್ಲಾಧಿಕಾರಿಗಳಿಗೆ ನೀಡುತ್ತೇವೆ. ನಂತರ ಈ ಕುರಿತು ಕಾನೂನು ಕ್ರಮ ಕುರಿತು ಚರ್ಚಿಸಿ ನಿರ್ಧರಿಸಲಾಗುವುದು ಎಂದರು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಮಾತನಾಡಿ, ಒಂದು ಟ್ರಾಕ್ಟರ್ ಕಬ್ಬಿನಿಂದ 560 ಕೆ.ಜಿ ಮೋಸ ಆಗಿದೆ ಎಂದಾದರೆ ಈ ಮೊದಲು ಬಂಧಿರುವ ಕಬ್ಬಿನ ತೂಕದಲ್ಲೂ ಮೋಸ ಆಗಿರುವ ಸಾಧ್ಯತೆಗಳಿವೆ. ಈ ಕುರಿತು ತಪಿತಸ್ಥರಿಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಸಕ್ಕರೆ ಸಚಿವರ ಹೇಳಿಕೆಯಂತೆ 5 ಲಕ್ಷ ಬಹುಮಾನ ಕೊಡಬೇಕು ಎಂದು ಈ ಮೂಲಕ ಒತ್ತಾಯ ಮಾಡುತ್ತೇವೆ ಎಂದರು.
ಈ ವೇಳೆ ರೈತ ಮುಖಂಡರಾದ ಸಿದ್ರಾಮಪ್ಪ ರಂಜಣಗಿ, ಧರೆಪ್ಪಗೌಡ ಬಿರಾದಾರ, ಕ.ರ.ವೇ ರಾಜ್ಯ ಉಪಾಧ್ಯಕ್ಷ ಬಸವರಾಜ ತಾಳಿಕೋಟಿ, ರಾಘವೇಂದ್ರ ಹೂಗಾರ ಸೇರಿದಂತೆ ನೂರಾರು ರೈತರು ಇದ್ದರು.
ಸಂಗಮನಾಥ ಸಕ್ಕರೆ ಕಾರ್ಖಾನೆ:ತೂಕದಲ್ಲಿ 560 ಕೆ.ಜಿ ಮೋಸ ಬಯಲು


