ಸಪ್ತಸಾಗರ ವಾರ್ತೆ, ವಿಜಯಪುರ, ಜು. 27:
ಶೈಕ್ಷಣಿಕ ಕ್ರಾಂತಿಯ ಹರಿಕಾರ, ಅಕ್ಷರ ದಾಸೋಹಿ ಬಂಥನಾಳದ ಲಿಂ.ಸಂಗನಬಸವ ಶ್ರೀಗಳು ಎರಡನೇ ಬಸವಣ್ಣನಂತಿದ್ದರು. ದೇಹದ ಆರೋಗ್ಯಕ್ಕಿಂತ ಸಮಾಜದ ಆರೋಗ್ಯವೇ ಮುಖ್ಯ ಎಂದರಿತ ಶ್ರೀಗಳ ಜೀವನವೇ ನಮ್ಮ ಬದುಕಿಗೆ ದಾರಿದೀಪ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ರವಿವಾರ ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಹಮ್ಮಿಕೊಂಡ ‘ಸಂತ ಸಂಗನಬಸವ ಶಿವಯೋಗಿಗಳ 125 ನೇ ಜಯಂತ್ಯೋತ್ಸವ’ಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳೇ ದೇವರು, ವಿದ್ಯಾಲಯವೇ ದೇವಾಲಯ ಎಂಬ ಮಂತ್ರದೊಂದಿಗೆ ಭಕ್ತರು ಕೊಟ್ಟ ಕಾಣಿಕೆಯಲ್ಲೇ ಬಡ ಮಕ್ಕಳ ಅಕ್ಷರ ದಾಹ ನೀಗಿಸಿದ ಸಂತ ಬಂಥನಾಳದ ಸಂಗನಬಸವ ಶ್ರೀಗಳು ನಾಡಿನೆಲ್ಲೆಡೆ ವಿದ್ಯಾಕೇಂದ್ರಗಳನ್ನು ಸ್ಥಾಪಿಸಿ, ಬಡ ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ ಎಂದು ಹೇಳಿದರು.
ಶೈಕ್ಷಣಿಕ ಕ್ರಾಂತಿ ಮಾಡಿ ಮಠಗಳ ಮೂಲಕ ರಾಷ್ಟ್ರಾಭಿಮಾನ ಹೆಚ್ಚಿಸಿದ, ಸ್ವಾತಂತ್ರ್ಯ ಹೋರಾಟಗಾರರ ಬೆಂಬಲಕ್ಕೆ ನಿಂತು ಅವರಿಗೆ ಆಶ್ರಯ ನೀಡಿ ಹೋರಾಟಕ್ಕೆ ಅಣಿಯಾದ ಧೀರ ಸನ್ಯಾಸಿ ಈ ನಮ್ಮ ಬಂಥನಾಳ ಸಂಗನಬಸವ ಶಿವಯೋಗಿಗಳು ಎಂದು ಹೇಳಿದರು.
ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಮಾತನಾಡಿ, ಪ್ರವಚನದ ಮೂಲಕ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಪ್ರಗತಿ ಮಾಡಿದ ಸಂಗನಬಸವ ಶ್ರೀಗಳು ತಮ್ಮ ಅವಿರತ ಪ್ರಯತ್ನದಿಂದ ಶೈಕ್ಷಣಿಕವಾಗಿ ಬರಡಾಗಿದ್ದ ವಿಜಯಪುರ ಜಿಲ್ಲೆಯನ್ನು ಶಿಕ್ಷಣದ ತವರೂರನ್ನಾಗಿಸಿದ್ದಾರೆ ಎಂದು ಹೇಳಿದರು.
ಸುರೇಶ ಕತ್ನಳ್ಳಿ, ಕೆಇಬಿ ಉದ್ಯೋಗಿ ಮಂಜುನಾಥ ಬಡಿಗೇರ, ಬಸವರಾಜ ತೇಲಿ, ಅಪ್ಪು ಪತ್ತಾರ, ಚಂದ್ರಕಾಂತ ಬಂದಾಳ,ವಿಶ್ವನಾಥ ಹಂಡಿ, ಪ್ರವೀಣ ಅರಕೇರಿ, ಸುನೀಲ ಸುಧಾಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬಡಮಕ್ಕಳ ಅಕ್ಷರ ದಾಹ ನೀಗಿಸಿದ ಬಂಥನಾಳದ ಸಂಗನಬಸವ ಶಿವಯೋಗಿಗಳು-ಸಂತೋಷ ಬಂಡೆ


