ಸಪ್ತಸಾಗರ ವರದಿಗೆ ಫಲಶ್ರುತಿ: ಭವ್ಯ ರೂಪ ಪಡೆಯಲಿದೆ ವಿಜಯಪುರದ ಗಾಂಧಿ ವೃತ್ತ!

ಸಪ್ತಸಾಗರ ವಾರ್ತೆ,ವಿಜಯಪುರ, ಆ. 30:
ನಗರದ ಹೃದಯ ಭಾಗದಲ್ಲಿರುವ ಗಾಂಧಿ ಚೌಕ್‌ ನಲ್ಲಿ ಮಹಾತ್ಮ ಗಾಂಧೀಜಿ ಅವರ ಮೂರ್ತಿ ಚಿಕ್ಕದಾಗಿದ್ದು, ಸಂಚಾರದ ಒತ್ತಡದ ನಡುವೆ ಸಮರ್ಪಕವಾಗಿ ಅಭಿವೃದ್ಧಿಪಡಿಸಿ, ಐತಿಹಾಸಿಕ ವಿಜಯಪುರದ ಘನತೆಗೆ ತಕ್ಕಂತೆ ಸುಂದರ ಹಾಗೂ ಭವ್ಯ ಗಾಂಧಿ ವೃತ್ತ ಹಾಗೂ ಪುತ್ಥಳಿ ನಿರ್ಮಿಸಬೇಕೆಂಬ ಕುರಿತು ಸಪ್ತಸಾಗರ ಕನ್ನಡ ದಿನಪತ್ರಿಕೆ ವರದಿ ಪ್ರಕಟಿಸಿತ್ತು.
ಈ ವರದಿಗೆ ಇದೀಗ ಫಲಶ್ರುತಿ ದೊರೆತಿದ್ದು, ಗಾಂಧಿ ವೃತ್ತದ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. ಅಕ್ಟೋಬರ್ 2ರಂದು ಜಿಲ್ಲಾ ಉಸ್ತುವಾರಿ ಸಚಿವರು ನೂತನ ಗಾಂಧಿ ವೃತ್ತದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ನಗರದ ಪ್ರಮುಖ ವೃತ್ತವಾಗಿರುವ ಗಾಂಧಿ ಚೌಕ್‌ ಹಲವು ವರ್ಷಗಳಿಂದ ಕಿರಿದಾಗಿದ್ದು, ವೃತ್ತದ ಸೌಂದರ್ಯೀಕರಣ, ಸುಗಮ ಸಂಚಾರ ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಮಗ್ರ ಅಭಿವೃದ್ಧಿಯ ಅಗತ್ಯವಿತ್ತು. ಈ ಕುರಿತು ಸಪ್ತಸಾಗರ ನಿರಂತರವಾಗಿ ಧ್ವನಿ ಎತ್ತಿ, ಜನರ ಬೇಡಿಕೆಯನ್ನು ಆಡಳಿತದ ಗಮನಕ್ಕೆ ತಂದಿತ್ತು.
ಸಪ್ತಸಾಗರ ವರದಿಯ ಬೆನ್ನಲ್ಲೇ ಗಾಂಧಿ ವೃತ್ತ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆಯುತ್ತಿರುವುದು ಪತ್ರಿಕೆಯ ವರದಿಗಾರಿಕೆಯ ಸಾಮಾಜಿಕ ಬದ್ಧತೆಗೆ ದೊರೆತ ಫಲವಾಗಿದೆ.
ನಗರದ ಪ್ರಮುಖ ವೃತ್ತವೊಂದು ಭವ್ಯ ರೂಪ ಪಡೆಯಲಿರುವುದು ವಿಜಯಪುರದ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡಲಿದ್ದು, ಸಾರ್ವಜನಿಕರು ಹಾಗೂ ಸ್ಥಳೀಯ ನಿವಾಸಿಗಳಲ್ಲಿ ಸಂತಸ ಮೂಡಿಸಿದೆ.

Share this