ಹಿರಿಯ ನ್ಯಾಯವಾದಿ ಎಸ್. ಎಚ್. ಲಗಳಿ ನಿಧನ

ಸಪ್ತಸಾಗರ ವಾರ್ತೆ, ವಿಜಯಪುರ, ಏ. 19: ನಗರದ ಪ್ರಖ್ಯಾತ ಹಿರಿಯ ವಕೀಲ ಸುರೇಶ ಹಣಮಂತರಾಯ ಲಗಳಿ (77) ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಮೃತರು ಸುದೀರ್ಘ ಕಾಲ ಸಾರ್ವಜನಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಎಸ್. ಎಂ. ಕೃಷ್ಣ ಅವರ ಸರ್ಕಾರದ ಅವಧಿಯಲ್ಲಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಬಿ.ಎಲ್.ಡಿ.ಇ. ಸಂಸ್ಥೆ, ಡಿ.ಎಲ್.ಆರ್.ಸಿ. ಮತ್ತು ಸ್ಪಿನ್ನಿಂಗ್ ಮಿಲ್‌ನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ವಿಜಯಪುರ ಡಿಸಿಸಿ ಬ್ಯಾಂಕ್‌ನ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಖ್ಯಾತ ಕ್ರಿಮಿನಲ್ ವಕೀಲರಾಗಿದ್ದ ಇವರು, ವಿಜಯಪುರ ನಗರಸಭೆ ಸೇರಿದಂತೆ ಜಿಲ್ಲೆಯ ಹಲವು ಬ್ಯಾಂಕುಗಳಿಗೆ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು.
ಮೃತರು ಓರ್ವ ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ನಾಳೆ ದಿ.20 ಸೋಮವಾರ ಬೆ.10 ಗಂ. ಜುಮನಾಳ ಗ್ರಾಮದ ಅವರ ತೋಟದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಂತಾಪ:
ಎಸ್. ಎಚ್. ಲಗಳಿ ಅವರ ನಿಧನಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಎಂ. ಬಿ. ಪಾಟೀಲ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಲಗಳಿ ಅವರ ನಿಧನದಿಂದ ಜಿಲ್ಲೆಯು ಒಬ್ಬ ಹಿರಿಯ ಕಾನೂನು ತಜ್ಞರನ್ನು ಹಾಗೂ ಸಮಾಜ ಸೇವಕರನ್ನು ಕಳೆದುಕೊಂಡಂತಾಗಿದೆ ಎಂದು ಅವರು ತಿಳಿಸಿದ್ದಾರೆ.

Share this