ಸಪ್ತಸಾಗರ ವಾರ್ತೆ ತಿರುವನಂತಪುರಂ, ಆ. 29:
ದೇಶದ ಎಲ್ಲಾ ರಾಜ್ಯಗಳ ಹಿರಿಯ ನಿವೃತ್ತ ಪತ್ರಕರ್ತರಿಗೆ ಏಕರೂಪದ ಮಾಸಾಶನ ಪದ್ಧತಿಯನ್ನು ರೂಪಿಸಬೇಕೆಂದು ಕೇಂದ್ರ ಸರ್ಕಾರವನ್ನು ರಾಷ್ಟ್ರೀಯ ಹಿರಿಯ ಪತ್ರಕರ್ತರ ಒಕ್ಕೂಟವು ಸಮ್ಮೇಳನದಲ್ಲಿ ಒತ್ತಾಯಿಸಿತು.
ಆಗಸ್ಟ್ 19, 20 ಹಾಗೂ 21ರಂದು ಕೇರಳ ರಾಜಧಾನಿ ತಿರುವನಂತನಪುರಂ ವಿ ಪ್ರತಾಪ ಚಂದ್ರನ್ ನಗರದಲ್ಲಿ ನಡೆದ ಹಿರಿಯ ಪತ್ರಕರ್ತರ ಪ್ರಪ್ರಥಮ ರಾಷ್ಟ್ರೀಯ ಸಮ್ಮೇಳನದಲ್ಲಿ ಒಕ್ಕೊರಲಿನ ನಿರ್ಣಯ ಅಂಗೀಕರಿಸಲಾಯಿತು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಕೇರಳ ಮುಖ್ಯಮಂತ್ರಿ ಪೀಣರಾಯಿ ವಿಜಯನ್, ಅತಿ ಹೆಚ್ಚು ಹಿರಿಯ ಪತ್ರಕರ್ತರಿಗೆ ಮಾಶಾಸನ ನೀಡುತ್ತಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಕೇರಳ ಪಾತ್ರವಾಗಿದೆ ಎಂದರು.
ಕೇರಳದಲ್ಲಿ 1971ರಲ್ಲಿಯೇ ಹಿರಿಯ ಪತ್ರಕರ್ತರಿಗೆ ಮಾಸಾಶನವನ್ನು ಜಾರಿ ಮಾಡಲಾಯಿತು. ಪ್ರಸ್ತುತ 960 ಪತ್ರಕರ್ತರಿಗೆ ಪ್ರತಿ ತಿಂಗಳು 11000 ಮಾಸಾಶನ ನೀಡುತ್ತಿದ್ದೇವೆ. ಅದನ್ನು 12,000 ರೂ.ಗಳಿಗೆ ಹೆಚ್ಚಿಸುತ್ತೇವೆ ಎಂದು ತಿಳಿಸಿದರು.
” ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಸರ್ಕಾರದ ಕೆಲಸ ಕಾರ್ಯಗಳನ್ನು ಟೀಕೆ ಮಾಡುವ ಪತ್ರಕರ್ತರ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಇದು ಸರಿಯಲ್ಲ. ತಮ್ಮ ಸರ್ಕಾರ ಪತ್ರಕರ್ತರ ಹಿತ ರಕ್ಷಣೆಗೆ ಕಟ್ಟಿ ಬದ್ಧವಾಗಿದೆ ಎಂದು ಹೇಳಿದರು.
ಈ ಐತಿಹಾಸಿಕ ಹಾಗೂ ಪ್ರಪ್ರಥಮ ಹಿರಿಯ ಪತ್ರಕರ್ತರ ಸಮಾವೇಶದಲ್ಲಿ 21 ರಾಜ್ಯಗಳಿಂದ 250 ಪತ್ರಕರ್ತರು ಭಾಗವಹಿಸಿ ಹಿರಿಯ ಪತ್ರಕರ್ತರಿಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು.
ಹಿರಿಯ ಪತ್ರಕರ್ತರಿಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶ್ರಮಿಸಲು ನಿರ್ಧರಿಸಿತು.
ಕರ್ನಾಟಕದ ಹಿರಿಯ ಪತ್ರಕರ್ತೆ ಕೆ. ಶಾಂತಕುಮಾರಿ ಮಾತನಾಡಿ, ದೇಶದಾದ್ಯಂತ ಕಾಯಾ, ವಾಚಾ, ಮನಸಾ ಸೇವೆ ಸಲ್ಲಿಸಿ, ನಿಧನರಾದ ವಿವಿಧ ರಾಜ್ಯಗಳ ಹಿರಿಯ ಪತ್ರಕರ್ತರ ಸಂತಾಪ ಸೂಚಕ ನಿರ್ಣಯವನ್ನು ಮಂಡಿಸಿದರು. ವಿವಿಧ ರಾಜ್ಯಗಳಿಂದ ಆಗಮಿಸಿದ ಹಿರಿಯ ಪತ್ರಕರ್ತರು ಆಯಾ ರಾಜ್ಯಗಳಲ್ಲಿರುವ ಹಿರಿಯ ಪತ್ರಕರ್ತರಿಗಿರುವ ಸವಲತ್ತುಗಳು ಹಾಗೂ ಅವರು ಎದುರಿಸುತ್ತಿರುವ ಸವಾಲುಗಳು ವಿವಿಧ ರಾಜ್ಯಗಳಲ್ಲಿ ಇರುವ ವಿವಿಧ ರೀತಿಯ ಮಾಸಾಶನಗಳು ಏಕರೂಪದಲ್ಲಿ ಬರುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದರ ಮೂಲಕ ಆಯಾ ರಾಜ್ಯ ಸರ್ಕಾರಗಳಲ್ಲಿ ಇರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸುದೀರ್ಘವಾಗಿ ಚರ್ಚೆ ನಡೆಯಿತು. ಹಿರಿಯ ಪತ್ರಕರ್ತರಿಗೆ ಆರೋಗ್ಯ ವಿಮೆ, ನಿವೃತ್ತಿ ನಂತರ ನಿವೇಶನ ಒದಗಿಸುವುದರ ಕುರಿತು, ಹಿರಿಯ ಪತ್ರಕರ್ತರಿಗೆ ರದ್ದುಪಡಿಸಿರುವ ರೈಲ್ವೆ ಪಾಸುಗಳನ್ನು ಪುನರ್ ಆರಂಭಿಸುವಂತೆ ನಿರ್ಣಯವನ್ನು ಕೈಗೊಳ್ಳಲಾಯಿತು.
ಇದೇ ಸಂದರ್ಭದಲ್ಲಿ 21 ರಾಜ್ಯಗಳಿಂದ ಭಾಗವಹಿಸಿದ ಹಿರಿಯ ಪತ್ರಕರ್ತರ ಪ್ರತಿನಿಧಿಗಳ ಸಮಾವೇಶವನ್ನು ಕೇರಳದ ವಿರೋಧ ಪಕ್ಷದ ನಾಯಕ ವಿ. ಡಿ.ಶಶಿಧರನ್ ಉದ್ಘಾಟಿಸಿದರು.
ಕೇರಳದ ಕೈಗಾರಿಕಾ ಮಂತ್ರಿ ಪಿಕೆ ಕುನ್ನಳ್ಳಿ ಕುಟ್ಟಿ, ಕೇರಳ ಪತ್ರಿಕೆ ಸಂಘದ ಅಧ್ಯಕ್ಷ ಕೆಪಿ ರೆಜಿ ಹಾಗೂ ಜೆ ಅಜಿತಕುಮಾರ್ ಭಾಗವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೇರಳ ರಾಜ್ಯದ ಆಹಾರ ಸರಬರಾಜು ಮಂತ್ರಿ ಜಿ. ಆರ್. ಅನಿಲ್, ಲೋಕಸಭಾ ಸದಸ್ಯರಾದ ಆಡೂರು ಪ್ರಕಾಶ್, ಶಶಿ ತರೂರ್, ಹಿರಿಯ ಪತ್ರಕರ್ತರ ವೇದಿಕೆ ಕಾರ್ಯದರ್ಶಿ ಕೆಪಿ ವಿಜಯ್ ಕುಮಾರ್, ಕರಿಯಂ ರವಿ ಭಾಗವಹಿಸಿದ್ದರು.
ರಾಷ್ಟ್ರೀಯ ಸಮಿತಿ ರಚನೆ
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರ ರಾಷ್ಟ್ರೀಯ ಮಂಡಳಿ ರಚಿಸಲಾಯಿತು. ಅಧ್ಯಕ್ಷರಾಗಿ ಸಂದೀಪ್ ದೀಕ್ಷಿತ್ (ದೆಹಲಿ), ಉಪಾಧ್ಯಕ್ಷರಾಗಿ ಆನಂದಂ ಪುಲಿಪಲುಪುಲ (ತೆಲಂಗಾಣ), ಸುಹಾಸಿನಿ ಪ್ರಭು ಗೊಂಕರ್ (ಗೋವಾ), ಡಾ. ಬಿ. ಜನಾರ್ಧನ (ಆಂಧ್ರ ಪ್ರದೇಶ), ಚಂದನ್ ಪ್ರಕಾಶ್ ಭಾರದ್ವಾಜ್ (ಮಧ್ಯಪ್ರದೇಶ), ಪ್ರಧಾನ ಕಾರ್ಯದರ್ಶಿಯಾಗಿ ಎನ್. ಪಿ. ಚೇಕುಟ್ಟಿ,(ಕೇರಳ), ಕೆ. ಶಾಂತಕುಮಾರಿ (ಕರ್ನಾಟಕ), ಕನೂ ನಂದ (ಒರಿಸ್ಸಾ), ಆರ್ ಆರ್. ರಂಗರಾಜನ್,(ತಮಿಳುನಾಡು), ಜೈಪಾಲ್ ಪರಶುರಾಮ್ ಪಾಟೀಲ (ಮಹಾರಾಷ್ಟ್ರ), ಕೋಶಾಧಿಕಾರಿಯಾಗಿ ಕೆ. ಪಿ. ವಿಜಯ್ ಕುಮಾರ್ (ಕೇರಳ), ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪಿ. ಸಾಂಬ ಸದಾಶಿವ ರೆಡ್ಡಿ (ಕರ್ನಾಟಕ), ಜಾರ್ಜ್ ಕಲ್ಲಿ ವೈಲಿಲ್ (ದೆಹಲಿ), ಎನ್ ನಭ ನಾಯಕ (ಪಶ್ಚಿಮ ಬಂಗಾಳ),. ಹಿಮಾ ಶರ್ಮಾ (ಅಸ್ಸಾಂ), ಅಭಿಜಿತ್ ಸಹಿತೆ (ಬಿಹಾರ), ಅಶ್ವಿನಿ ಕುಮಾರ್ (ಜಮ್ಮು ಮತ್ತು ಕಾಶ್ಮೀರ), ಉಪೇಂದ್ರ ಸಿಂಗ್ ರಾಥೋಡ್ (ರಾಜಸ್ಥಾನ್), ಪ್ರವೀಣ್ ಪಟೇಲ (ಉತ್ತರಖಂಡ), ನುಮವಲ್ಲ ಹೌಸಲ್ (ಜಾರ್ಖಂಡ್), ಪಿ. ಪರಮೇಶ್ವರರಾವ್ (ಆಂಧ್ರ ಪ್ರದೇಶ), ಕೇಂದ್ರ ಸಮಿತಿ ಕೌನ್ಸಿಲ್ ಸದಸ್ಯರಾಗಿ ಕರ್ನಾಟಕದಿಂದ ಜಾಕಿರ ಹುಸೇನ್, (ಬಾಗಲಕೋಟೆ), ರುದ್ರಪ್ಪ ಆಸಂಗಿ (ವಿಜಯಪುರ), ಸುನಿಲ ನಾಟೇಕರ ( ಮೈಸೂರು) ಆಯ್ಕೆಯಾಗಿದ್ದಾರೆ.