ಭುವನೇಶ್ವರದ ಆರ್ಟ್ ಆಫ್ ಗಿವಿಂಗ್ ಸಂಚಾಲಕಿಯಾಗಿ ಶಿಫಾ ಜಮಾದಾರ ನೇಮಕ

ಸಪ್ತಸಾಗರ ವಾರ್ತೆ ವಿಜಯಪುರ, ಮೇ. 10:
ಸಮಾಜ ಸೇವೆ, ಯುವ ಸಬಲೀಕರಣ, ನೊಂದವರಿಗೆ ಸೇವೆ ಮಾಡುವ ದಿವ್ಯ ಧ್ಯೇಯೋದ್ದೇಶಗಳನ್ನು ಹೊಂದಿರುವ ದೇಶದ ಪ್ರತಿಷ್ಠಿತ ಭುವನೇಶ್ವರದ ಆರ್ಟ್ ಆಫ್ ಗಿವಿಂಗ್ ಕರ್ನಾಟಕ ಸಂಚಾಲಕರಾಗಿ ವಿಜಯಪುರದ ಕುಮಾರಿ
ಶಿಫಾ ಜಮಾದಾರ ಅವರನ್ನು ನೇಮಕ ಮಾಡಿ ಮಹತ್ವದ ಜವಾಬ್ದಾರಿ ನೀಡಲಾಗಿದೆ.
ಇಂಜನಿಯರಿಂಗ್ ಪದವಿಯನ್ನು ವ್ಯಾಸಾಂಗ ಮಾಡುತ್ತಿರುವ ಶಿಫಾ ವಿದ್ಯಾರ್ಥಿ ದೆಸೆಯಲ್ಲಿಯೇ
ಯುವಜನರ ಶ್ರೇಯೋಭಿವೃದ್ಧಿ, ಯುವತಿಯರಿಗೆ ಆರೋಗ್ಯ ಜಾಗೃತಿ
ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಇತ್ತೀಚಿಗೆ ರಷ್ಯಾದಲ್ಲಿ ನಡೆದ ಯುವ ಶೃಂಗ ಸಭೆಯಲ್ಲಿ ಭಾರತ ದೇಶವನ್ನು
ಪ್ರತಿನಿಧಿಸಿದ್ದರು. ರಷ್ಯಾ ಅಧ್ಯಕ್ಷ ವಾಡ್ಲೀಮಿರ್ ಪುಟೀನ್ ಚಾಲನೆ ನೀಡಿದ್ದ ಈ ಸಮಾವೇಶದಲ್ಲಿ ಶಿಫಾ ಅಭೂತಪೂರ್ವ ವಿಚಾರಗಳನ್ನು ಪ್ರತಿಪಾದಿಸಿ ಶಾಂತಿಯ
ಸಂದೇಶ ಸಾರಿದ್ದರು.
ಲಾಡಲಿ ಫೌಂಡೇಶನ್ ಮೂಲಕ ವಿಜಯಪುರವನ್ನು ಪೈಲಟ್ ಪ್ರಾಜೆಕ್ಟ್ ಆಗಿಸಿ ಮಹಿಳೆಯರಿಗೆ ವಿದ್ಯಾರ್ಥಿನಿಯರಿಗಾಗಿ ಹೈಟೆಕ್ ಎ.ಐ.ತಂತ್ರಜ್ಞಾನ ಆಧಾರಿತ ಶೌಚಾಲಯ
ನಿರ್ಮಾಣಕ್ಕೆ ಬಹುಮುಖ್ಯ ಪಾತ್ರ ವಹಿಸಿದ್ದಾರೆ. ನಿಯಮಿತವಾಗಿ ಬಾಲಕಿಯರಿಗೆ ಆರೋಗ್ಯ
ಜಾಗೃತಿ, ಶಾಲಾ ಬ್ಯಾಗ್ ವಿತರಣೆ ಸೇರಿದಂತೆ ಅನೇಕ ಸಮಾಜ ಸೇವಾ ಕಾರ್ಯಗಳನ್ನು
ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ.
ಲಕ್ಷಾಂತರ ಆದಿವಾಸಿ, ಬಡ ಹಾಗೂ ಅನಾಥ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸುವ ಮೂಲಕ
ಪ್ರಪಂಚದಲ್ಲಿಯೇ ಖ್ಯಾತಿ ಪಡೆದಿರುವ ಅಚ್ಯತಾ ಸಾಮಂತ ಅವರ ನೇತೃತ್ವದಲ್ಲಿ
ಭುವನೇಶ್ವರದ ಕಳಿಂಗ ಇನ್ಸಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ಸಾರಥ್ಯದಲ್ಲಿ
ನಡೆಯುವ ಆರ್ಟ್ ಆಫ್ ಗಿವಿಂಗ್ ಕರ್ನಾಟಕ ರಾಜ್ಯ ಯುವ ಸಂಚಾಲಕರಾಗಿ ನಿಯೋಜಿಸಲಾಗಿದೆ.
ವಿಶ್ವದ 122 ರಾಷ್ಟ್ರಗಳಲ್ಲಿ ತನ್ನ ಶಾಖೆ ಹಾಗೂ ಸದಸ್ಯತ್ವವನ್ನು ಆರ್ಟ್ಸ ಆಫ್ ಗಿವಿಂಗ್ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ.
ಈ ಸಾಮಾಜಿಕ ಸೇವಾ ಸಂಸ್ಥೆಗಳ ಅಡಿಯಲ್ಲಿ ವಿವಿಧ ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಆದೇಶ ಪತ್ರದಲ್ಲಿ ಜವಾಬ್ದಾರಿ ವಹಿಸಲಾಗಿದೆ.

Share this