ಸಪ್ತಸಾಗರ ವಾರ್ತೆ,ಬೆಂಗಳೂರು, ಸೆ. 7: ಕಲಾಪೋಷಕರ ಮಠ ಸುಕ್ಷೇತ್ರ ಸಿದ್ದನಕೊಳ್ಳದ ಪೂಜ್ಯ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಕೀರ್ತನ ಮೂವೀ ಮೇಕರ್ಸ್ ವತಿಯಿಂದ ನಿರ್ಮಾಣವಾಗುತ್ತಿರುವ ‘ಸಾಕ್ಷಿ’ ಕಿರುಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಸಂಕಲನ ಕಾರ್ಯ ಆರಂಭವಾಗಿದೆ.
ಕೊಲೆ ರಹಸ್ಯವನ್ನು ಭೇದಿಸುವ ರೋಚಕ ಕಥಾಹಂದರ ಹೊಂದಿರುವ ಈ ಕಿರುಚಿತ್ರದ ಚಿತ್ರೀಕರಣವನ್ನು ಬೆಂಗಳೂರಿನ ವಿವಿಧೆಡೆ ಐದು ದಿನಗಳ ಕಾಲ ನಡೆಸಲಾಗಿದೆ. ನಿರ್ದೇಶಕ ಲೋಕೇಶ್ ವಿದ್ಯಾಧರ ಅವರ ಹಿಂದಿನ ‘ಒಬ್ಬಟ್ಟು’ ಸಸ್ಪೆನ್ಸ್, ಥ್ರಿಲ್ಲರ್ ಹಾಸ್ಯಕಥೆಯ ಚಿತ್ರ ಬಿಡುಗಡೆಯಾಗಿದ್ದು, ಇದೀಗ ಅವರ ನಿರ್ದೇಶನದ ಎರಡನೇ ಸಿನಿಮಾ ‘ಹೂಗಾರ’ ಸೆನ್ಸಾರ್ಗೆ ತೆರಳಲು ಅಂತಿಮ ಸಿದ್ಧತೆ ನಡೆಸುತ್ತಿದೆ. ಮೂರನೇ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರದ ಚಿತ್ರಕ್ಕಾಗಿ ಸ್ಕ್ರಿಪ್ಟ್ ಸಿದ್ಧಪಡಿಸಲಾಗುತ್ತಿದೆ.
ತಂಡದ ಸದಸ್ಯರ ಸಕ್ರಿಯ ಸಹಕಾರದೊಂದಿಗೆ ‘ಸಾಕ್ಷಿ’ ಕಿರುಚಿತ್ರ ನಿರ್ಮಾಣಗೊಂಡಿದ್ದು, ಮುಂದಿನ ತಿಂಗಳು ಒಟಿಟಿ ಹಾಗೂ ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ. ಚಿತ್ರಪ್ರೇಮಿಗಳು ತಂಡಕ್ಕೆ ಪ್ರೋತ್ಸಾಹ ನೀಡಬೇಕು ಎಂದು ನಿರ್ದೇಶಕ ಲೋಕೇಶ್ ವಿದ್ಯಾಧರ ಮನವಿ ಮಾಡಿದ್ದಾರೆ.
ಚಿತ್ರದ ಪ್ರಮುಖ ಪಾತ್ರಗಳಲ್ಲಿ ಲೋಕೇಶ್ ವಿದ್ಯಾಧರ, ವಿದ್ಯಾಶ್ರೀ, ಹುನಗುಂದದ ಮಹಾಂತೇಶ ಹಳ್ಳೂರ, ಸತೀಶ್ ಶೆಟ್ಟಿ, ಮುತ್ತುರಾಜ್ ಬುದ್ಧಿ, ಜೀವನ ಗೌಡ, ಗೀತಾ, ರೋಹಿತ್, ಪಲ್ಲವಿ, ಸುರೇಶ್ ಗ್ಲೋರಿ, ಕಿಟ್ಟಿ ತಾಳಿಕೋಟೆ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.
ಕ್ಯಾಮೆರಾ ವಿಭಾಗದಲ್ಲಿ ಬೆಟ್ಟೇಗೌಡ ಕಿಲಾರ, ಗೋವರ್ಧನ್ ಮೇಕಪ್, ಶಿವು ಹೇರ್ಸ್ಟೈಲ್, ಪಲ್ಲವಿ, ಸಂಕಲನ ಶಿವರಾಜ್, ಡಿಐ ಜೀವನ, ನೃತ್ಯ ರಾಜು ಮಾಸ್ಟರ್, ಡಾ. ಪ್ರಭು ಗಂಜಿಹಾಳ, ಡಾ. ವೀರೇಶ್ ಹಂಡಿಗಿ ಸೇರಿದಂತೆ ಹಲವರು ಕಾರ್ಯನಿರ್ವಹಿಸಿದ್ದಾರೆ. ಪತ್ರಿಕಾ ಸಂಪರ್ಕ, ಕಥೆ-ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಲೋಕೇಶ್ ವಿದ್ಯಾಧರ ವಹಿಸಿಕೊಂಡಿದ್ದಾರೆ.
ಕೀರ್ತನ ಮೂವೀ ಮೇಕರ್ಸ್ ಹಾಗೂ ಚಿತ್ರತಂಡದ ಬಳಗ ‘ಸಾಕ್ಷಿ’ ನಿರ್ಮಾಣಕ್ಕೆ ಸಹಕಾರ ನೀಡಿದೆ.
‘ಸಾಕ್ಷಿ’ ಕಿರುಚಿತ್ರದ ಚಿತ್ರೀಕರಣ ಮುಕ್ತಾಯ


