ಸಪ್ತಸಾಗರ ವಾರ್ತೆ, ಸಿಂದಗಿ, ಜ. 20: ಪಟ್ಟಣದ ಆರಾಧ್ಯ ದೇವ ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವವು ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವಗಳು ಭಕ್ತ ಸಮೂಹದೊಂದಿಗೆ ದೇವಸ್ಥಾನದಿಂದ ನಂದಿಕೋಲ ಹಾಗೂ ಸಕಲವಾದ್ಯಗಳೊಂದಿಗೆ ಪ್ರಾರಂಭವಾಯಿತು. ಶ್ರೀ ಸಂಗಮೇಶ್ವರ ಮತ್ತು ಭ್ರಮರಾಂಭಿಕಾ ಉತ್ಸವ ಮೂರ್ತಿಗಳ ಪಲ್ಲಕ್ಕಿ ಉತ್ಸವದ ಮೇರವಣಿಗೆ ಮತ್ತು ರಥೋತ್ಸವ ನೀಲಗಂಗಾದೇವಸ್ಥಾನದ ಮಾರ್ಗವಾಗಿ ಹಳೆ ಬಜಾರದಲ್ಲಿನ ಶ್ರೀ ಬಸವೇಶ್ವರ ದೇವಸ್ಥಾನದವರೆಗೆ ನಡೆಯಿತು.
ದೇವಸ್ಥಾನದಲ್ಲಿ ಮತ್ತು ಮಾರ್ಗ ಮಧ್ಯ ನೀಲಗಂಗಾ ದೇವಸ್ಥಾನ ಹಾಗೂ ಹಳೆ ಬಜಾರದ ಮಧ್ಯದಲ್ಲಿ ವಿಶ್ವನಾಥ ಬಡಿಗೇರ ಪುರವಂತರ ಸೇವೆ ಸಲ್ಲಿಸಿದರು. ಪುರವಂತರ ಸೇವೆಯೊಂದಿಗೆ ವಿವಿಧ ಕಾರ್ಯಕ್ರಮಗಳು ಜರುಗಿದವು. ಮಾರ್ಗದುದ್ದಕ್ಕೂ ಭಕ್ತಾಧಿಗಳು ಉತ್ಸವ ಪಲ್ಲಕ್ಕಿಯಲ್ಲಿರುವ ಶ್ರೀ ಸಂಗಮೇಶ್ವರ ಮತ್ತು ಭ್ರಮರಾಂಭಿಕಾ ಉತ್ಸವ ಮೂರ್ತಿಗಳಿಗೆ ಆರತಿ ಮತ್ತು ಪೂಜೆ ಸಲ್ಲಿಸೂವ ಮೂಲಕ ದೇವರ ಕೃಪೆಗೆ ಪಾತ್ರರಾದರು.
ಸ್ಥಳಿಯ ಸಾರಂಗಮಠ-ಗಚ್ಚಿನಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರ ಸ್ವಾಮೀಜಿ, ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮೀಜಿ, ಶ್ರೀ ಭೀಮಾಶಂಕರಮಠದ ಶ್ರೀ ದತ್ತಪ್ಪಯ್ಯ ಮಹಾಸ್ವಾಮಿಗಳು, ಯರಗಲ್ ಬಿ.ಕೆ. ಗ್ರಾಮದ ಶ್ರೀ ಸಿದ್ಧರಾಜ ಮಹಾಸ್ವಾಮಿಗಳು, ಶಾಸಕ ಅಶೋಕ ಮನಗೂಳಿ, ಪಂಡಿತ ಕುಲಕರ್ಣಿ, ವಿಜಯ ಕುಲಕರ್ಣಿ, ಚಿಂತು ಕುಲಕರ್ಣಿ, ನೀಲಗಂಗಾದೇವಿ ದೇವಸ್ಥಾನದ ಧರ್ಮದರ್ಶಿ ಸುನೀಲ ದೇವರಮನಿ, ಹ.ಮ. ಪೂಜಾರ, ಎಂ.ಎಮ್. ಹೂಗಾರ, ಸಿ.ಎಂ. ಪೂಜಾರಿ, ಎಸ್.ಎಂ. ಪೂಜಾರಿ ಸೇರಿದಂತೆ ಸಂಗಮೇಶ್ವರ, ಮಲ್ಲಿಕಾರ್ಜುನ ಹಾಗೂ ಬೊಮ್ಮಲಿಂಗೇಶ್ವರ ದೇವಸ್ಥಾನಗಳ ಅರ್ಚಕರು, ಸ್ಥಳೀಯ ಹಾಗೂ ಸುತ್ತಮುತ್ತಲಿನ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಾಗವವಹಿಸಿದ್ದರು. ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವ ಮರುಳಿ ದೇವಸ್ಥಾನಕ್ಕೆ ಬಂದ ನಂತರ ಭಕ್ತರು ನೈವೇದ್ಯ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು.
ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವ


