ಸಿದ್ದರಾಮಯ್ಯ ಪದತ್ಯಾಗ: ಅಹಿಂದ ವರ್ಗ ಆಕ್ರೋಶ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 28 :
ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುತ್ತಿರುವುದನ್ನು ಅಹಿಂದ ವರ್ಗ ಹಾಗೂ ಜಿಲ್ಲಾ ಕುರುಬ ಸಂಘವು ಖಂಡಿಸುತ್ತದೆ ಎಂದು ಜಿಲ್ಲಾ ಕುರುಬ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಕಾತ್ರಾಳ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಿದ್ದರಾಮಯ್ಯ ಬಡವರ ಮುಖ್ಯಮಂತ್ರಿ, ಅನ್ನಭಾಗ್ಯ, ಕ್ಷೀರ ಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆಯಂತಹ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿ ಜನಪರ ಆಡಳಿತ ನೀಡಿದ ಧೀಮಂತ ನಾಯಕ. ಸಮಾಜದ ಎಲ್ಲ ವರ್ಗಗಳನ್ನು ಒಗ್ಗೂಡಿಸಿ ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಮಾಡುವಲ್ಲಿ ಶ್ರಮಿಸಿದ್ದಾರೆ. ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಿದ್ದ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುತ್ತಿರುವವುದು ಅತ್ಯಂತ ನೋವಿನ ಸಂಗತಿ. ಕಾಂಗ್ರೆಸ್ ಹೈಕಮಾಂಡ್ ತನ್ನ ನಿಲುವು ಬದಲಾಯಿಸಿ ಸಿದ್ದರಾಮಯ್ಯ ಅವರನ್ನೆ ಮುಂದುವರೆಸಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಅಹಿಂದ ವರ್ಗ ಕಾಂಗ್ರೆಸ್ ಪಕ್ಷವನ್ನೇ ತಿರಸ್ಕಾರ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಿದ್ದರಾಮಯ್ಯನವರು ಜಾತಿ ಧರ್ಮ ಬೇಧವಿಲ್ಲದೆ. ದಕ್ಷ ಆಡಳಿತ ಮಾಡುವುದರ ಜೊತೆಗೆ ಅಹಿಂದ ವರ್ಗದ ಆಶಾಕಿರಣವಾಗಿದ್ದರು. ದೀನದಲಿತರ ಏಳಿಗೆಗೆ ಶ್ರಮಿಸಿದಂತ ಮಹಾನ್ ನಾಯಕ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬಾರದು. ಇಡೀ ದೇಶದಲ್ಲಿಯೇ ಜನಪ್ರಿಯ ಹಾಗೂ ದಾಖಲೆ ಬಜೆಟ್ ಮಂಡಿಸಿದ ನಾಯಕ ಅಂತಹ ಯಶಸ್ವಿ ನಾಯಕನನ್ನು ಕಾಂಗ್ರೆಸ್ ಹೈಕಮಾಂಡ್ ಗೌರವಯುತವಾಗಿ ನಡೆಸಿಕೊಳ್ಳಬೇಕಾಗಿತ್ತು. ಯಾವುದೇ ಕಳಂಕವಿಲ್ಲದ ಸಿದ್ದರಾಮಯ್ಯನಂತಹ ನಾಯಕನ್ನು ಅಗೌರವದಿಂದ ನಡೆಸಿಕೊಂಡಿರು. ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲೂ ತಕ್ಕ ಪಾಠ ಕಲಿಸುತ್ತೇವೆ ಎಂದು ಗುಡುಗಿದ್ದಾರೆ.

Share this