ರೂ.6,140 ಕೋಟಿ ಠೇವಣಿ; 2025-26ರಲ್ಲಿ ರೂ.36.99 ಕೋಟಿ ನಿವ್ವಳ ಲಾಭ
ಸಪ್ತಸಾಗರ ವಾರ್ತೆ,ವಿಜಯಪುರ, ಸೆ.27:
ಜನರ ವಿಶ್ವಾಸ ಮತ್ತು ಗ್ರಾಹಕರ ಸಹಕಾರದಿಂದ ಸಿದ್ಧಸಿರಿ ಮಲ್ಟಿ-ಸ್ಟೇಟ್ ಮಲ್ಟಿ-ಪರ್ಪಸ್ ಕೋ-ಆಪರೇಟಿವ್ ಸೊಸೈಟಿ ರಾಜ್ಯದಲ್ಲೇ ಮುಂಚೂಣಿಯಲ್ಲಿದ್ದು, ಸಂಸ್ಥೆಯ ಒಟ್ಟು ಠೇವಣಿ ರೂ.6,140 ಕೋಟಿಗೆ ತಲುಪಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ಕಿತ್ತೂರು ರಾಣಿ ಚೆನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ಭಾನುವಾರ ನಡೆದ ಸಿದ್ಧಸಿರಿ ಮಲ್ಟಿ-ಸ್ಟೇಟ್ ಮಲ್ಟಿ-ಪರ್ಪಸ್ ಕೋ-ಆಪರೇಟಿವ್ ಸೊಸೈಟಿಯ 20ನೇ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಸಿದ್ಧಸಿರಿ ಒಂದು ಕುಟುಂಬದಂತೆ ಕಾರ್ಯನಿರ್ವಹಿಸುತ್ತಿದ್ದು, ಪ್ರಾಮಾಣಿಕವಾಗಿ ದುಡಿಯುವ ಶ್ರಮಿಕರಿಗೆ ಕಾಮಧೇನು ಹಾಗೂ ಕಲ್ಪವೃಕ್ಷದಂತಾಗಿದೆ. ಜನಸೇವೆಯೇ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ಅಪಪ್ರಚಾರಗಳಿಗೆ ಜನರೇ ಉತ್ತರ ನೀಡಲಿದ್ದು, ವಂಚನೆ ಮತ್ತು ಮೋಸಕ್ಕೆ ಮುಂದಾದವರಿಗೆ ಶಿಕ್ಷೆ ನಿಶ್ಚಿತ ಎಂದು ಹೇಳಿದರು.
ಸಂಸ್ಥೆ ಇಂದು ಸಮುದ್ರದಂತೆ ಬೆಳೆದಿದೆ. ಕಳೆದ ಮೂರು ದಶಕಗಳಿಂದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಸಿದ್ದೇಶ್ವರ ಅವರ ನೇತೃತ್ವದ ಸಂಸ್ಥೆಯಲ್ಲಿ ಒಂದೇ ಒಂದು ಹಗರಣವನ್ನು ತೋರಿಸುವ ತಾಕತ್ತು ಯಾರಿಗೂ ಇಲ್ಲ. ಕೇವಲ ರೂ.1 ಕೋಟಿ ಇದ್ದ ಆಸ್ತಿ ಇಂದು ರೂ.465 ಕೋಟಿಗೆ ಏರಿಕೆಯಾಗಿದೆ ಎಂದು ಯತ್ನಾಳ ಹೇಳಿದರು.
ರೂ.36.99 ಕೋಟಿ ನಿವ್ವಳ ಲಾಭ
ಸೊಸೈಟಿ ಅಧ್ಯಕ್ಷ ರಾಮನಗೌಡ ಪಾಟೀಲ ಯತ್ನಾಳ ಮಾತನಾಡಿ, ಆಡಳಿತ ಮಂಡಳಿ, ಗ್ರಾಹಕರ ಸಹಕಾರ, ವಿಶ್ವಾಸ ಹಾಗೂ ಸಿಬ್ಬಂದಿಯ ಪ್ರಾಮಾಣಿಕ ಪರಿಶ್ರಮದಿಂದ 2025-26ನೇ ಸಾಲಿನಲ್ಲಿ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘವು ರೂ.36.99 ಕೋಟಿ ನಿವ್ವಳ ಲಾಭ ಗಳಿಸಿದೆ. ಈ ವರ್ಷ ಶೇ.15ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದರು.
2026ರ ಮಾರ್ಚ್ ಅಂತ್ಯಕ್ಕೆ ರೂ.85.37 ಕೋಟಿ ಶೇರು ಬಂಡವಾಳ, ರೂ.5,638.99 ಕೋಟಿ ದುಡಿಯುವ ಬಂಡವಾಳ, ರೂ.5,201.92 ಕೋಟಿ ಠೇವಣಿ, ರೂ.3,905.56 ಕೋಟಿ ಸಾಲ ಮುಂಗಡ, ರೂ.113.78 ಕೋಟಿ ಕಾಯ್ದಿಟ್ಟ ನಿಧಿ, ರೂ.59.11 ಕೋಟಿ ನಿಶ್ಚಿತ ಆಸ್ತಿ ಹಾಗೂ ರೂ.432 ಕೋಟಿ ಹೂಡಿಕೆ ಹೊಂದಿದೆ ಎಂದು ತಿಳಿಸಿದರು.
ಸಾಮಾಜಿಕ ಕಾರ್ಯಗಳಿಗೆ ಆದ್ಯತೆ
ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಿಗೂ ಸಿದ್ಧಸಿರಿ ಸಂಸ್ಥೆ ನೆರವು ನೀಡುತ್ತಿದೆ. ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ಜನಿಸುವ ಪ್ರತಿ ಹೆಣ್ಣು ಮಗುವಿಗೆ ಲಕ್ಷ್ಮೀಪುತ್ರಿ ಯೋಜನೆಯಡಿ ಚಿಕಿತ್ಸೆಗೆ ರೂ.10 ಸಾವಿರ ಹಾಗೂ ತಾಯಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ವಿಜಯಪುರದ ಗಾಂಧಿ ಚೌಕ್ ಪೊಲೀಸ್ ಠಾಣೆಯ ಸಂಚಾರಿ ಕಮಾಂಡ್ ಕೇಂದ್ರಕ್ಕೆ ರೂ.25 ಲಕ್ಷ, ಜ್ಞಾನಯೋಗಾಶ್ರಮದ ಗುರು ಪೂರ್ಣಿಮಾ ಕಾರ್ಯಕ್ರಮಕ್ಕೆ ರೂ.1.49 ಲಕ್ಷ, ವೃಕ್ಷೋತ್ಥಾನ ಹೆರಿಟೇಜ್ ರನ್ಗೆ ರೂ.10 ಲಕ್ಷ, ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠದ ಅನ್ನದಾಸೋಹಕ್ಕೆ ರೂ.98 ಸಾವಿರ ಹಾಗೂ ನಗರದಲ್ಲಿ ನೆಡುವ ಗಿಡಗಳ ರಕ್ಷಣೆಗೆ ಕಬ್ಬಿಣದ ಕವಚ ಅಳವಡಿಸಲು ರೂ.10 ಲಕ್ಷ ನೀಡಲಾಗಿದೆ ಎಂದರು.
ನಗರದ ಹಿಂದುಳಿದ ಪ್ರದೇಶಗಳ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ 40 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
ರೈತರಿಗೆ ಬೋಜಾರಹಿತ ಸಾಲ
ರೈತರ ಆರ್ಥಿಕ ಅಭಿವೃದ್ಧಿಗಾಗಿ ಸಂಸ್ಕರಣಾ ಘಟಕ ಹಾಗೂ ಶೀತಲ ಘಟಕ ಸ್ಥಾಪಿಸಲಾಗಿದೆ. ದ್ರಾಕ್ಷಿ ಬೆಳೆಯುವ ಹಂಗಾಮಿನಲ್ಲಿ ರೈತರ ಅಗತ್ಯಕ್ಕೆ ಅನುಗುಣವಾಗಿ ಶೇ.15ರ ಬಡ್ಡಿದರದಲ್ಲಿ ಎಕರೆಗೆ ರೂ.1 ಲಕ್ಷದಂತೆ ಬೋಜಾರಹಿತ ಸಾಲ ನೀಡಲಾಗುತ್ತಿದೆ. ಕೇಸರಿ ಸ್ವಾವಲಂಬಿ ಸಾಲ, ಎಕ್ಸ್ಪ್ರೆಸ್ ಸಾಲ ಹಾಗೂ ಸ್ವಸಹಾಯ ಗುಂಪುಗಳಿಗೆ ಆರ್ಥಿಕ ನೆರವು ಯೋಜನೆಗಳ ಮೂಲಕ ರೈತರು ಮತ್ತು ಬಡವರಿಗೆ ನೆರವು ಕಲ್ಪಿಸಲಾಗುತ್ತಿದೆ ಎಂದರು.
ರಾಜ್ಯದಾದ್ಯಂತ 211 ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು, 14 ಸ್ವಂತ ಕಟ್ಟಡಗಳು ಹಾಗೂ 25 ನಿವೇಶನಗಳನ್ನು ಹೊಂದಿದೆ. ವಿಜಯಪುರದಲ್ಲಿ 5,100 ಟನ್ ಸಾಮರ್ಥ್ಯದ ಸಿದ್ಧಸಿರಿ ಕೋಲ್ಡ್ ಸ್ಟೋರೇಜ್, ಜೇವರ್ಗಿ ಮತ್ತು ಚಿಂಚೋಳಿಯಲ್ಲಿ ಎರಡು ಸಿದ್ಧಸಿರಿ ಇಂಧನ ಕೇಂದ್ರಗಳು, ವಿಜಯಪುರ, ಬಿಜ್ಜರಗಿ, ಬಬಲೇಶ್ವರ, ಸಿಂದಗಿ, ಝಳಕಿ ಹಾಗೂ ಚಿಂಚೋಳಿಯಲ್ಲಿ ಆರು ಸಿದ್ಧಸಿರಿ ಕೃಷಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಚಿಂಚೋಳಿಯಲ್ಲಿ ಪ್ರತಿದಿನ 5 ಸಾವಿರ ಟನ್ ಕಬ್ಬು ನುರಿಸುವ ಸಾಮರ್ಥ್ಯದ ಸಿದ್ಧಸಿರಿ ಎಥೆನಾಲ್ ಮತ್ತು ಪವರ್ ಉತ್ಪಾದನಾ ಘಟಕ ಸ್ಥಾಪಿಸಲಾಗಿದ್ದು, 22 ಸಿದ್ಧಸಿರಿ ಇ-ಸ್ಟಾಂಪ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ರಾಮನಗೌಡ ಪಾಟೀಲ ಯತ್ನಾಳ ವಿವರಿಸಿದರು.
ಸೊಸೈಟಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ನಿರ್ದೇಶಕರಾದ ಬಸಯ್ಯ ಹಿರೇಮಠ, ಸಂಗನಬಸಪ್ಪ ಸಜ್ಜನ, ಶಿವಾನಂದ ಅಣೆಪ್ಪನವರ, ಸಾಯಿಬಾಬಾ ಸಿಂದಗೇರಿ, ಜಗದೀಶ ಕ್ಷತ್ರಿ, ವಿಜಯಕುಮಾರ್ ಚವ್ಹಾಣ, ಶೈಲಜಾ ಪಾಟೀಲ, ಸೀಮಾ ಕೋರೆ, ಸೋಮಶೇಖರ ಬಂಡಿ, ಬಸನಗೌಡ ಪಾಟೀಲ ನಾಗರಾಳಹುಲಿ, ಗಣಪತಿ ಜಾಧವ, ವೈಭವ ಡಾಂಗೆ, ಆದರ್ಶ ಪಾಟೀಲ, ನಾಗರಾಜ ಮುಳವಾಡ, ಅಬೋಲಿ ಪಾಟೀಲ, ಆಕಾಶ ಗುತ್ತೇದಾರ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜ್ಯೋತಿಬಾ ಖಂಡಾಗಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.


