ಸಿಳ್ಳೆಕ್ಯಾತ–ಕಿಳ್ಳೆಕ್ಯಾತ ಸಮುದಾಯದಿಂದ ಶಾಸಕ ಚಿಮ್ಮನಕಟ್ಟಿಗೆ ಸನ್ಮಾನ

ಸಪ್ತಸಾಗರ ವಾರ್ತೆ, ಬಾದಾಮಿ, ಮಾ. 22
ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತಕ್ಷೇತ್ರದ ಶಾಸಕ ಭೀಮಸೇನ ಬಿ. ಚಿಮ್ಮನಕಟ್ಟಿ ಅವರಿಗೆ ಸಿಳ್ಳೆಕ್ಯಾತ–ಕಿಳ್ಳೆಕ್ಯಾತ ಸಮುದಾಯದ ವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ಅವರ ಗೃಹ ಕಚೇರಿಯಲ್ಲಿ ಆಯೋಜಿಸಲಾಯಿತು.
ವಿಧಾನಸಭಾ ಅಧಿವೇಶನದಲ್ಲಿ ಸಿಳ್ಳೆಕ್ಯಾತ–ಕಿಳ್ಳೆಕ್ಯಾತ ಸಮುದಾಯಕ್ಕೆ ಜಾತಿ ಪ್ರಮಾಣಪತ್ರ ನೀಡುವಲ್ಲಿ ಎದುರಾಗುತ್ತಿರುವ ಸಮಸ್ಯೆಯನ್ನು ಚುಕ್ಕೆ ಗುರುತಿನ ಪ್ರಶ್ನೆಯ ಮೂಲಕ ಸದನದಲ್ಲಿ ಪ್ರಸ್ತಾಪಿಸಿದ್ದಕ್ಕಾಗಿ ಸಮುದಾಯದ ಮುಖಂಡರು ಮತ್ತು ಬಂಧುಗಳು ಕೃತಜ್ಞತೆ ಸಲ್ಲಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರು ಮಾತನಾಡಿ, ಸಿಳ್ಳೆಕ್ಯಾತ–ಕಿಳ್ಳೆಕ್ಯಾತರು ಅತ್ಯಂತ ಹಿಂದುಳಿದ ಅಲೆಮಾರಿ ಸಮುದಾಯವಾಗಿದ್ದು, ಜಾತಿ ಪ್ರಮಾಣಪತ್ರ ಪಡೆಯುವಲ್ಲಿ ಹಲವಾರು ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ವಿವರಿಸಿದರು.
ಈ ಸಮಸ್ಯೆಗೆ ಶೀಘ್ರದಲ್ಲೇ ಸೂಕ್ತ ಪರಿಹಾರ ನೀಡುವಂತೆ ಶಾಸಕರ ಗಮನಕ್ಕೆ ತಂದರು.
ರಾಜ್ಯ ಸಂಘದ ಗೌರವ ಅಧ್ಯಕ್ಷ ಡಾ. ಸಣ್ಣವೀರಣ್ಣ ದೊಡ್ಡಮನಿ ಅವರು ವಿಷಯದ ಕುರಿತು ವಿವರವಾಗಿ ಮನವರಿಕೆ ಮಾಡಿಕೊಟ್ಟರು. ಜಿಲ್ಲಾಧ್ಯಕ್ಷ ಮದ್ದಾನಪ್ಪ ಸೇರಿದಂತೆ ಬಾದಾಮಿ ಮತಕ್ಷೇತ್ರದ ಕಾಟಾಪುರ, ಕಾಕನೂರು ಹಾಗೂ ಖ್ಯಾಡ ಗ್ರಾಮದ ಪ್ರಮುಖರು ಮತ್ತು ಸಮುದಾಯದ ಅನೇಕ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share this