ಮನರೇಗಾ ಕೂಲಿಕಾರರ ಇಕೆವೈಸಿಯಲ್ಲಿ ಶೇ. 100 ಪ್ರಗತಿ ಸಾಧಿಸಲು ವಿಶೇಷ ಅಭಿಯಾನ: ಬಸವಂತರಾಯಗೌಡ ಬಿರಾದಾರ

ಸಪ್ತಸಾಗರ ವಾರ್ತೆ, ತಿಕೋಟಾ, ಫೆ. 17: ತಾಲೂಕು ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನೊಂದಣಿಯಾದ ಎಲ್ಲಾ ಕೂಲಿಕಾರರ ಇಕೆವೈಸಿಯನ್ನು ಸಂಪೂರ್ಣವಾಗಿ ಪ್ರಗತಿ ಸಾಧಿಸಲು ತಾಲೂಕಿನಾದ್ಯಂತ ಫೆಬ್ರುವರಿ 27ರ ವರೆಗೆ ವಿಶೇಷ ಅಭಿಯಾನ ಆಯೋಜನೆ ಮಾಡಲಾಗಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ ಅವರು ತಿಳಿಸಿದ್ದಾರೆ.
ಸರ್ಕಾರದ ಸೂಚನೆಯ ಅನ್ವಯ ಯೋಜನೆಯಡಿ ಕೆಲಸ ನಿರ್ವಹಿಸತಕ್ಕ ಅರ್ಹ ಎಲ್ಲಾ ಕೂಲಿಕಾರರ ಇ-ಕೆವೈಸಿ ಮಾಡುವುದು ಕಡ್ಡಾಯವಾಗಿರುತ್ತದೆ. ಆದ್ಯತೆಯ ಮೇಲೆ ನೋಂದಾಯಿತ ಎಲ್ಲಾ ಅರ್ಹ ಕೂಲಿಕಾರರ e-KYC ಅಪ್ಲೋಡ್ ಅನ್ನು ಫೆ. 27 ರವರೆಗೆ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಪ್ರಗತಿ ಸಾಧಿಸಲು ಸೂಚಿಸಿದೆ.
ಈ ಅಭಿಯಾನದ ಅವಧಿಯಲ್ಲಿ ಮನರೇಗಾ ತಂತ್ರಾಂಶದಡಿ ನೋಂದಣಿಯಾದ ಎಲ್ಲಾ ಕೂಲಿಕಾರರ ಇ-ಕೆವೈಸಿ ಪೂರ್ಣಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಇಕೆವೈಸಿ ಮಾಡಲು ಸಮಸ್ಯೆಯಿರುವ ಅಂಶಗಳಾದ ಎನ್.ಪಿ.ಸಿ.ಐ, ಮ್ಯಾಪಿಂಗ್, ಜಾಬ್ ಕಾರ್ಡ್ ಪರಿಶೀಲನೆ, ಆಧಾರ Updation ಮಾಡಿಸಿ, ಇ-ಕೆವೈಸಿ ಮಾಡಿಸಲು ವಿಶೇಷ ಶಿಬಿರ, ಮನೆ-ಮನೆ ಭೇಟಿ, ವಿಶೇಷ ಸಭೆ ಸೇರಿ ವಿವಿಧ ಚಟುವಟಿಕೆಗಳನ್ನು ಆಯೋಜಿಸಿ ಶೇ.100ರಷ್ಟು ಪ್ರಗತಿ ಸಾಧಿಸಲು ಈಗಾಗಲೇ ಎಲ್ಲಾ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಸೂಚನೆ ಹಾಗೂ ಸಿಬ್ಬಂದಿಗಳಿಗೆ ಅಗತ್ಯ ತರಬೇತಿಯನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇ-ಕೆವೈಸಿ ಮಾಡಿಕೊಳ್ಳದ ಜಾಬ್-ಕಾರ್ಡ್ ಗಳು ನಿಷ್ಕ್ರಿಯವಾಗುತ್ತವೆ. ನರೇಗಾ ಯೋಜನೆಯಡಿ ನೋಂದಾಯಿತ ಕೂಲಿಕಾರರಲ್ಲಿ ಸಕ್ರಿಯ ಕೂಲಿಕಾರರ ಮಾಹಿತಿಯನ್ನು NMMS ಮೊಬೈಲ್ ತಂತ್ರಾಂಶದಲ್ಲಿ ಇ-ಕೆವೈಸಿ ಮಾಡುವ ಬಗ್ಗೆ ಈಗಾಗಲೇ ಎಲ್ಲ ಗ್ರಾಮ ಪಂಚಾಯಿತಿ, ಗ್ರಾಮ ಮಟ್ಟದಲ್ಲಿ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಈ ಅಭಿಯಾನದ ಕುರಿತು ಧ್ವನಿ ಮುದ್ರಿಕೆಯನ್ನು ಗ್ರಾಪಂನ ಸ್ವಚ್ಛವಾಹಿನಿ ವಾಹನಗಳ ಮೂಲಕ ಪ್ರಸಾರ ಮಾಡಲಾಗುತ್ತಿದೆ. ಆದರೆ, ಕೆಲ ಗ್ರಾಮದಲ್ಲಿ ಮನರೇಗಾ ಕೂಲಿಕಾರರು ವೈಯಕ್ತಿಕ ಕೆಲಸಕ್ಕಾಗಿ ಮನೆಯಲ್ಲಿ ಇರದೇ ಬೇರೆಡೆ ಹೋದಾಗ ಮನೆ-ಮನೆ ಭೇಟಿ ನೀಡಿದ ಸಂದರ್ಭದಲ್ಲಿ ನರೇಗಾ ಸಿಬ್ಬಂದಿಗೆ ಅಲಭ್ಯವಾದಾಗ ಇ-ಕೆವೈಸಿ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿದೆ. ಹೀಗಾಗಿ ಇದರಿಂದ ಮುಂದಿನ ದಿನಗಳಲ್ಲಿ ಮನರೇಗಾ ಕೂಲಿಕಾರರಿಗೆ ಕೆಲಸ ನೀಡುವ ಸಂದರ್ಭದಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ. ಹೀಗಾಗಿ ಎಲ್ಲ ಮನರೇಗಾ ಕೂಲಿಕಾರರ ಆದಷ್ಟು ಶೀಘ್ರ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದರು. ಮನರೇಗಾ ಯೋಜನೆಯ ಪಾರದರ್ಶಕ ಅನುಷ್ಟಾನಕ್ಕೆ ಮತ್ತೊಂದು ಹೆಜ್ಜೆ ಇ-ಕೆವೈಸಿ ಆಗಿದ್ದು, ನರೇಗಾ ಕೂಲಿಕಾರರು, ಕಾಯಕ ಬಂಧುಗಳು ಇ-ಕೆವೈಸಿ ಅಪ್ಡೇಟ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದ್ದು, ಅಭಿಯಾನದಲ್ಲಿ ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ನರೇಗಾ ಸಿಬ್ಬಂದಿಗಳು, ಗ್ರಾ.ಪಂ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ದ್ವಿ.ದ.ಲೆ.ಸ, ಡಿಇಒ, ಕರ ವಸೂಲಿಗಾರರು ಸೇರಿ ಗ್ರಾಮ ಪಂಚಾಯತಿಯ ಎಲ್ಲಾ ಸಿಬ್ಬಂದಿಗಳು ಸಕ್ರಿಯವಾಗಿ ಭಾಗವಹಿಸಿ ಕೆಲಸ ಮಾಡಲಿದ್ದು, ಗ್ರಾಮೀಣ ಭಾಗದ ಜನರು/ಕೂಲಿಕಾರರು ಸಹ ಅಭಿಯಾನದಲ್ಲಿ ಸ್ವಯಂ ಪ್ರೆರೀತರಾಗಿ ಭಾಗವಹಿಸಿ ತಮ್ಮ ಇಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ ಅವರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕ ಬಸವರಾಜ ಸಂಕಗೊಂಡ ಅವರು ಮಾತನಾಡಿ, ನಮ್ಮ ತಾಲೂಕಿನಲ್ಲಿ ಒಟ್ಟು 17194 ಸಕ್ರಿಯ ಕೂಲಿಕಾರರಿದ್ದು ಅದರಲ್ಲಿ 14973 ಇಕೆವೈಸಿ ಮಾಡಿದ್ದು ಶೇ. 87.08ರಷ್ಟು ಪ್ರಗತಿ ಸಾಧಿಸಲಾಗಿದ್ದು ಹಾಗೂ ನೋಂದಾಯಿತ 41356 ಎಲ್ಲಾ ಕೂಲಿಕಾರರಲ್ಲಿ 19971 ಇಕೆವೈಸಿ ಮಾಡಿದ್ದು, ಶೇ 48.29ರಷ್ಟು ಪ್ರಗತಿ ಸಾಧಿಸಲಾಗಿದೆ. ಮುಂದಿನ 10 ದಿನದಲ್ಲಿ ನಮ್ಮ ತಾಲೂಕಿನಲ್ಲಿ ತಂಡೋಪತಂಡವಾಗಿ ಗ್ರಾಮಗಳಲ್ಲಿ ಸಂಚರಿಸಿ ಇಕೆವೈಸಿ ಪೂರ್ಣಗೊಳಿಸಲಾಗುವುದು ಎಂದರು.

Share this