ಸಪ್ತಸಾಗರ ವಾರ್ತೆ ವಿಜಯಪುರ: ಜು. 14
ಜಿಲ್ಲೆಯಾದ್ಯಂತ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ.ಮತಗಟ್ಟೆ ಮಟ್ಟದ ಅಧಿಕಾರಿಗಳು ಜೂನ್ 30 ರಿಂದ ಮನೆ ಮನೆಗೆ ಭೇಟಿ ನೀಡಿ ಮತದಾರರಿಗೆ ಗಣತಿ ನಮೂನೆಯ ವಿತರಿಸುವ ಕಾರ್ಯ ಭರದಿಂದ ನಡೆಯುತ್ತಿದ್ದು, ಜುಲೈ 13 ರವರೆಗೆ ಜಿಲ್ಲೆಯ ಪ್ರಗತಿ ವರದಿಯ ಅನುಸಾರ 19,07,583 ಗಣತಿ ನಮೂನೆ ವಿತರಿಸಲಾಗಿದೆ. ಅವುಗಳಲ್ಲಿ 7,27,933 ಗಣಕೀಕರಣಗೊಂಡ ಗಣತಿ ನಮೂನೆಗಳಿವೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಗಳಾದ ಜಿಲ್ಲಾಧಿಕಾರಿ ಡಾ. ಆನಂದ್ ಕೆ. ಅವರು ತಿಳಿಸಿದ್ದಾರೆ.
ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ ಒಟ್ಟು 19,82,114 ಮತದಾರರು ಇದ್ದು, ಇವರಿಗೆ ಮನೆ-ಮನೆಗೆ ತೆರಳಿ ಗಣತಿ ನಮೊನೆಗಳನ್ನು ವಿತರಿಸಿ ಅಗತ್ಯ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಗಣತಿ ನಮೂನೆಗಳ ವಿತರಣೆ ಹಾಗೂ ಡಿಜಟಲೀಕರಣ ಕಾರ್ಯ ಜೂನ್ 30 ರಿಂದ ಜುಲೈ 29 ವರೆಗೆ ನಡೆಯಲ್ಲಿದ್ದು, ಈ ಅವಧಿಯಲ್ಲಿ ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಿ ಅಗತ್ಯ ದಾಖಲೆಗಳೊಂದಿಗೆ ನಮೂನೆಗಳನ್ನು ಸಲ್ಲಿಸಬಹುದಾಗಿದೆ. 1,707 ಮತದಾರರು ಆನ್ ಲೈನ್ ಮೂಲಕ ಗಣತಿ ನಮೂನೆಗಳನ್ನು ಸಲ್ಲಿಸಿದ್ದಾರೆ. 4,317 ಮತದಾರರು ಶಾಶ್ವತವಾಗಿ ಸ್ಥಳಾಂತರ ಗೊಂಡಿದ್ದಾರೆ. 5,677 ಮತದಾರರು ಮೃತರಾಗಿದ್ದಾರೆ. 1,654 ಮತದಾರರು ಈಗಾಗಲೇ ನೋಂದಾಯಿಸಿಕೊಂಡಿರುವುದು ಪರಿಶೀಲನೆಯಲ್ಲಿ ಕಂಡುಬಂದಿದೆ.
ಸಂಗ್ರಹಿಸಲಾಗದ ಅಥವಾ ಗೈರು ಹಾಜರಾಗಿರುವ ಮತದಾರರು 93 ಹಾಗೂ 106 ಇತರೆ ಮತದಾರರು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


