ಪಡಿತರ ಚೀಟಿದಾರರಿಗೆ ಜೂನ್ 25 ರವರೆಗೆ ಐರಿಸ್ ಮೂಲಕ ಇ-ಕೆವೈಸಿ ಮಾಡಿಸಲು ವಿಶೇಷ ಅವಕಾಶ

ಸಪ್ತಸಾಗರ ವಾರ್ತೆ,ವಿಜಯಪುರ, ಜೂ.12:
ನಗರ ಪ್ರದೇಶದಲ್ಲಿ ತಾಂತ್ರಿಕ ಕಾರಣಗಳಿಂದ ಇ-ಕೆವೈಸಿ ಮಾಡಿಸಲು ಬಾಕಿ ಇರುವ ಪಡಿತರ ಚೀಟಿದಾರರಿಗೆ ಐರಿಸ್ ಸಾಧನದ ಮೂಲಕ ಇ-ಕೆವೈಸಿ ಮಾಡಿಸಿಕೊಳ್ಳಲು ಆಹಾರ ಇಲಾಖೆಯು ಜೂನ್ 25 ರವರೆಗೆ ವಿಶೇಷ ಅವಕಾಶ ಕಲ್ಪಿಸಿದೆ.
ವಿಜಯಪುರ ನಗರ ಪ್ರದೇಶದಲ್ಲಿ ಇನ್ನೂ ಸುಮಾರು 697 ಪಡಿತರ ಚೀಟಿದಾರರ ಇ-ಕೆವೈಸಿ ಬಾಕಿ ಇರುವುದು ಕಂಡು ಬಂದಿದೆ. ಬಯೋಮೆಟ್ರಿಕ್ (ಬೆರಳು ಗುರುತು) ಸರಿಯಾಗಿ ಮೂಡದ ಕಾರಣ ಇ-ಕೆವೈಸಿ ಪ್ರಕ್ರಿಯೆ ನೂರಕ್ಕೆ ನೂರರಷ್ಟು ಪೂರ್ಣಗೊಂಡಿಲ್ಲದೇ ಇರುವುದರಿಂದ ಇಲಾಖೆಯ ವತಿಯಿಂದಲೇ ವಿಶೇಷ ಇ-ಕೆವೈಸಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ.
ತಾಂತ್ರಿಕ ಕಾರಣಗಳಿಂದ ಇ-ಕೆವೈಸಿ ಆಗದೇ ಬಾಕಿ ಉಳಿದಿರುವ ಪಡಿತರ ಚೀಟಿ ಫಲಾನುಭವಿಗಳು ವಿಜಯಪುರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಪಡಿತರ ವಿಭಾಗದ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಇ-ಕೆವೈಸಿ ಮಾಡಿಸಿಕೊಳ್ಳಬಹುದು.
ಜೂ. 11 ರಿಂದ 25 ರವರೆಗೆ ಕಚೇರಿ ವೇಳೆಯಲ್ಲಿ ಈ ಸೌಲಭ್ಯ ಲಭ್ಯವಿರಲಿದ್ದು, ನ್ಯಾಯ ಬೆಲೆ ಅಂಗಡಿಕಾರರು ಇ-ಕೆವೈಸಿ ಬಾಕಿ ಇರುವ ಫಲಾನುಭವಿಗಳನ್ನು ಕಚೇರಿಗೆ ಕಳುಹಿಸಿಕೊಟ್ಟು ಸಹಕರಿಸಬೇಕೆಂದು ಎಂದು ಆಹಾರ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this