ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 28:
“ಜಗತ್ತಿಗೆ ವೇದೋಪನಿಷತ್ತುಗಳು ಹಾಗೂ ವಚನ ಸಾಹಿತ್ಯವನ್ನು ನೀಡಿದವರು ಭಾರತೀಯರು. ಆಧ್ಯಾತ್ಮ ನಮ್ಮ ಉಸಿರು, ಸಂಸ್ಕಾರಯುತ ಜೀವನ ನಮ್ಮ ಬದುಕಿನ ಬೆಳಕು. ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತೀಕಗಳಾಗಿದ್ದು, ಸಮಾಜಕ್ಕೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡುವ ಶ್ರದ್ಧಾ ಕೇಂದ್ರಗಳಾಗಿವೆ” ಎಂದು ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ನಗರದ ಅಭಿವೃದ್ಧಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಅಭಯಾಂಜನೇಯ ದೇವಾಲಯದ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಬಡಾವಣೆಯ ದೇವಾಲಯಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಮಕ್ಕಳ ವ್ಯಕ್ತಿತ್ವ ವಿಕಸನ, ಸಂಸ್ಕಾರ ನಿರ್ಮಾಣ ಹಾಗೂ ಅವರ ಪ್ರತಿಭೆ ಅನಾವರಣಗೊಳಿಸುವ ಚಟುವಟಿಕೆಗಳನ್ನು ಪ್ರತಿವರ್ಷ ಹಮ್ಮಿಕೊಳ್ಳುವಂತೆ ಅವರು ಕರೆ ನೀಡಿದರು. “ಮಕ್ಕಳೇ ಭಗವಂತನ ನಿಜಸ್ವರೂಪ. ಅವರ ಸರ್ವಾಂಗೀಣ ಬೆಳವಣಿಗೆಗೆ ದೇವಾಲಯಗಳು ಕೇಂದ್ರಗಳಾಗಬೇಕು” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಹುಬ್ಬಳ್ಳಿಯ ಎರಡೇತ್ತಿನ ಮಠ ಹಾಗೂ ನಿಡೋಣಿ ಶ್ರೀಮಠದ ಪರಮಪೂಜ್ಯ ಶ್ರೀ ಸಿದ್ದಲಿಂಗೇಶ್ವರ ಮಹಾಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು.
ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಸ್.ಎನ್. ಅರಿಕೇರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಜಯಪುರ ಮಹಾನಗರ ಪಾಲಿಕೆಯ ಮಹಾಪೌರ ಎಂ.ಎಸ್. ಕರಡಿ, ವಿಡಿಎ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ್, ಗಿರೀಶ್ ಬಿರಾದಾರ್ ಸೇರಿದಂತೆ ಸೋಮನಾಥ ಕಳ್ಳಿಮನಿ, ಗುರುಲಿಂಗಪ್ಪ ಅಂಗಡಿ, ಡಿ.ಜಿ. ಬಿರಾದಾರ್, ಉಮೇಶ್ ವಂದಾಲ, ಸಂತೋಷ ತಳಕೇರಿ, ರತ್ನಾಕರ ಕುಲಕರ್ಣಿ, ವೈ.ಕೆ. ಕುಲಕರ್ಣಿ, ಜಗದೀಶ್ ಇಂಡಿ, ಡಾ. ಸೋಮು ನಿಡೋಣಿ, ಬಸವರಾಜ ಬಂಗಾರಿ, ಕೊಟ್ರೇಶ್ ಹರನಾಳ ಹಾಗೂ ವಿರೇಶ್ ಬಂಗಾರಿ ಉಪಸ್ಥಿತರಿದ್ದರು.
ಆಶಾ ನಿಡೋಣಿ ಮತ್ತು ಭಾರತಿ ಮುಚ್ಚಂಡಿ ಕಾರ್ಯಕ್ರಮ ನಿರೂಪಿಸಿದರು. ಬಾಲಾಜಿ ಸಿಂಗ್ ರಾಥೋಡ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.
ಆಧ್ಯಾತ್ಮ ಭಾರತೀಯರ ಉಸಿರು: ಸಂಗಮೇಶ ಬಬಲೇಶ್ವರ


