ಸಪ್ತಸಾಗರ ವಾರ್ತೆ,ಇಂಡಿ, ಆ. 29: ಕ್ರೀಡೆ ಮತ್ತು ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಪರಿಪೂರ್ಣ ಶಿಕ್ಷಣಕ್ಕೆ ಕ್ರೀಡೆ ಅತ್ಯಗತ್ಯ. ಕ್ರೀಡೆಯಿಂದ ವಿದ್ಯಾರ್ಥಿಗಳಲ್ಲಿ ದೈಹಿಕ ಸದೃಢತೆ, ಮಾನಸಿಕ ಸ್ಥೈರ್ಯ ಹಾಗೂ ಶಿಸ್ತು ಬೆಳೆಯುತ್ತದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಮೇಜರ್ ಧ್ಯಾನಚಂದ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಿಲ್ಲದ ಶಿಕ್ಷಣ ಅಪೂರ್ಣ. ಪ್ರತಿಯೊಂದು ಆಟದ ಉದ್ದೇಶ ಹಾಗೂ ಅದರಲ್ಲಿರುವ ಜೀವನ ಮೌಲ್ಯಗಳನ್ನು ವಿದ್ಯಾರ್ಥಿಗಳು ಅರಿತುಕೊಂಡು ಮುನ್ನಡೆಯಬೇಕು. ಕ್ರೀಡೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸಮಯಪ್ರಜ್ಞೆ, ತಂಡ ಮನೋಭಾವ ಮತ್ತು ಸಾಧಿಸುವ ಛಲವನ್ನು ಬೆಳೆಸುತ್ತದೆ ಎಂದರು.
ಮುಖ್ಯ ಶಿಕ್ಷಕ ಕೆ.ಐ. ಮಕಾನದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಠ್ಯ ಶಿಕ್ಷಣವು ಉಜ್ವಲ ಭವಿಷ್ಯಕ್ಕೆ ದಾರಿ ತೋರಿಸಿದರೆ, ಪಠ್ಯೇತರ ಚಟುವಟಿಕೆಗಳು ಬದುಕಿನ ಮೌಲ್ಯ ಹಾಗೂ ಸದೃಢ ವ್ಯಕ್ತಿತ್ವವನ್ನು ರೂಪಿಸುತ್ತವೆ. ಕ್ರೀಡೆಯು ಶಿಸ್ತು, ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ಕಲಿಸುವ ಮೂಲಕ ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳ ಕುರಿತು ಮಾಹಿತಿ ಹಂಚಿಕೊಂಡರು. ಶಿಕ್ಷಕರಾದ ಎಸ್.ಎಸ್. ಅರಬ, ಎನ್.ಬಿ. ಚೌಧರಿ, ಅತಿಥಿ ಶಿಕ್ಷಕ ಅಫ್ತಾಬ್ ಮುಲ್ಲಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕ್ರೀಡೆಯಿಂದಲೇ ಪರಿಪೂರ್ಣ ಶಿಕ್ಷಣ: ಸಂತೋಷ ಬಂಡೆ


