ಸಪ್ತಸಾಗರ ವಾರ್ತೆ ವಿಜಯಪುರ, ಆ. 29: ಸಮಾಜದಲ್ಲಿ ಸಾಕ್ಷರತೆಯ ಪ್ರಮಾಣ ಹೆಚ್ಚಾದರೆ ದೇಶ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತದೆ ಎಂಬ ಮಾತಿನಂತೆ
ಸುತ್ತೂರು ಕ್ಷೇತ್ರದ ಲಿಂ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಶಿಕ್ಷಣವೇ ಧರ್ಮ, ಶಿಕ್ಷಣವೇ ಆಚಾರ, ಶಿಕ್ಷಣವೇ ಸಮಾಜ ಸುಧಾರಣೆಯ ಬಹುಮುಖ್ಯ ಮಾರ್ಗ ಎಂಬುದನ್ನು ಅಕ್ಷರಶಃ ಅರಿತು ಆಚರಿಸಿದವರು ಎಂದು ಬರಹಗಾರ ರಂಗನಾಥ ಥೋರ್ಪೆ ಹೇಳಿದರು.
ವಿಜಯಪುರ ನಗರದ ಬಿ ಎಲ್ ಡಿ ಈ ಸಂಸ್ಥೆಯ ಎಸ್. ಎಸ್.ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಯುವ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ ದತ್ತಿ ಉಪನ್ಯಾಸ ಹಾಗೂ ವಚನ ಸಂರಕ್ಷಣಾ ದಿನ ಸಮಾರಂಭದಲ್ಲಿ ಅವರು ಪರಮ ಪೂಜ್ಯ ರಾಜೇಂದ್ರ ಮಹಾ ಸ್ವಾಮೀಜಿಗಳ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಶ್ರೀಗಳು ಜೆಎಸ್ಎಸ್ ಎಂಬ ಸಂಸ್ಥೆಯನ್ನು
ಕಟ್ಟಿ ಶಿಕ್ಷಣ ಕ್ರಾಂತಿ ಮಾಡಿದರು.
ಶ್ರೀಗಳು ತಮ್ಮ 12ನೇ ವಯಸ್ಸಿನಲ್ಲೇ ಸುತ್ತೂರು ವೀರಸಿಂಹಾಸನ ಮಠದ 23ನೇ ಪೀಠಾಧ್ಯಕ್ಷರಾಗಿ ದೀಕ್ಷೆ ಸ್ವೀಕರಿಸಿದರು. ಅವರು ಕೇವಲ ಶಿಕ್ಷಣ ಕ್ಷೇತ್ರಕ್ಕೆ ಮಾತ್ರವಲ್ಲದೆ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದ ಮಹಾ ಪೋಷಕರಾಗಿಯೂ ಕೆಲಸ ಮಾಡಿದರೂ. ಶಿಕ್ಷಣ ಕ್ಷೇತ್ರಕ್ಕೆ ಸ್ವಾಮೀಜಿಯವರ ಕೊಡುಗೆ ಅಪಾರವಾಗಿದೆ ಎಂದರು.
ಸಮಾಜದಲ್ಲಿ ನೊಂದು ಬೆಂದವರಿಗೆ ಸಾಮಾಜಿಕ ಭದ್ರತೆ ನೀಡಲು ಅವರು ಸ್ಥಾಪಿಸಿದ ಅನಾಥಾಲಯ, ವೃದ್ಧಾಶ್ರಮಗಳು ಸುತ್ತೂರಿನಲ್ಲಿ ಇಂದಿಗೂ ಕೂಡಾ ಉತ್ತಮ ಸೇವೆ ನೀಡುತ್ತಿವೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಎಸ್. ಎಸ್. ಪದವಿಪೂರ್ವ ವಿದ್ಯಾಲಯದ ಆಡಳಿತ ಅಧಿಕಾರಿ ಆಯ್. ಎಸ್. ಕಾಳಪ್ಪನವರ ಉದ್ಘಾಟಿಸಿ ಮಾತನಾಡಿ, ರಾಜೇಂದ್ರ ಶ್ರೀಗಳ ಸಾಹಿತ್ಯಕ ಆಸಕ್ತಿ ಮತ್ತು ದೂರದೃಷ್ಟಿತ್ವದ ಫಲವಾಗಿ ಅಸ್ತಿತ್ವಕ್ಕೆ ಬಂದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಇಂದು ಸಾಹಿತ್ಯ ಕ್ಷೇತ್ರದ ಕ್ರಿಯಾಶೀಲ ಚಟುವಟಿಕೆಯ ಕೇಂದ್ರವಾಗಿ ಮುನ್ನಡೆಯುತ್ತಿದೆ. ಸಾಹಿತ್ಯ ಸಮ್ಮೇಳನ, ವಿಚಾರ ಸಂಕಿರಣ, ಪುಸ್ತಕಗಳ ಪ್ರಕಟಣೆ, ದತ್ತಿ ಪ್ರಶಸ್ತಿ ಪ್ರಧಾನ ಹೀಗೆ ಪರಿಷತ್ತಿನಿಂದ ಇಂದು ನಿರಂತರ ಸಾಹಿತ್ಯ ಕೃಷಿ ನಡೆಯುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಪ್ರಸ್ತುತ ಶರಣ ಸಾಹಿತ್ಯ ಪರಿಷತ್ತು ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದು ವಿದ್ಯಾರ್ಥಿಗಳಿಗೆ ಸಂಸ್ಕಾರ ನೀಡಲು ಶಾಲಾ ಕಾಲೇಜುಗಳಲ್ಲಿ ದತ್ತಿ ಉಪನ್ಯಾಸ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಉಪನ್ಯಾಸಕ ಟಿ.ಎಮ್. ಪವಾರ ವಹಿಸಿ ಮಾತನಾಡಿದರು.
ಯುವ ವೇದಿಕೆ ಅಧ್ಯಕ್ಷ ಅಮರೇಶ ಸಾಲಕ್ಕಿ ಪ್ರಾಸ್ತವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ವಚನ ಸಂರಕ್ಷಣಾ ದಿನ ಅಂಗವಾಗಿ ಗುರುವಾರ ವಚನ ಕಂಠಪಾಠ ಸ್ಪರ್ಧೆ ಏರ್ಪಡಿಸಲಾಗಿತ್ತು. ಇಂದು ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪ್ರಥಮ ಸ್ಥಾನ ಕುಮಾರಿ ಪೃಥ್ವಿ ಹಿರೇಮಠ,
ದ್ವಿತೀಯ ಸ್ಥಾನ ಕುಮಾರಿ ಲಕ್ಷ್ಮಿ ಮುಳವಾಡ, ತೃತೀಯ ಸ್ಥಾನ ಅಂಕಿತ ಚಲವಾದಿ ಪಡೆದಿದ್ದಾರೆ.
ಮಹಾಂತೇಶ ಝಂಡೆ ಸ್ವಾಗತಿಸಿದರು. ಆರ್.ಡಿ. ತಾಂಬೆ ವಂದಿಸಿದರು. ಡಿ.ಕೆ. ರಾಠೋಡ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ದಾಸೋಹಿಗಳಾದ
ಬಸವರಾಜ ಗದಗ, ಎಂ.ಜಿ. ಯಾದವಾಡ, ಈರಣ್ಣ ತೊಂಡಿಕಟ್ಟಿ, ಎಲ್. ಪಿ. ಬಿರಾದಾರ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಶಿಕ್ಷಣ ಕ್ರಾಂತಿಯ ಹರಿಕಾರರು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳು : ರಂಗನಾಥ
