ಸಪ್ತಸಾಗರ ವಾರ್ತೆ,ವಿಜಯಪುರ, ಸೆ.26:
ವಿಜಯಪುರ ಜಿಲ್ಲಾ ಜನತಾದಳ (ಜಾತ್ಯತೀತ) ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ವಕ್ತಾರರಾಗಿ ಹಿರಿಯ ಜೆಡಿಎಸ್ ಮುಖಂಡ ಎಸ್.ಎಸ್. ಖಾದ್ರಿ ಇನಾಮದಾರ ಅವರನ್ನು ನೇಮಕ ಮಾಡಲಾಗಿದೆ.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಅವರು ನೇಮಕಾತಿ ಆದೇಶ ಹೊರಡಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಖಾದ್ರಿ ಇನಾಮದಾರ ಅವರಿಗೆ ಉಭಯ ಜವಾಬ್ದಾರಿ ವಹಿಸಲಾಗಿದೆ.
ಪಕ್ಷದ ಸಂಘಟನೆ, ತತ್ವ ಹಾಗೂ ಸಿದ್ಧಾಂತಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸುವುದರೊಂದಿಗೆ ಜಿಲ್ಲೆಯ ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು ಪಕ್ಷವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಸಂಘಟಿಸಿ ಬಲಪಡಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
37 ವರ್ಷಗಳ ರಾಜಕೀಯ ಅನುಭವ
ಎಸ್.ಎಸ್. ಖಾದ್ರಿ ಇನಾಮದಾರ ಅವರು 37 ವರ್ಷಗಳ ರಾಜಕೀಯ ಅನುಭವ ಹೊಂದಿದ್ದು, ಸಿವಿಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ (DCE) ಪದವಿ ಪಡೆದಿದ್ದಾರೆ. 1992ರಲ್ಲಿ ಜಿಲ್ಲಾ ವಿದ್ಯಾರ್ಥಿ ಜನತಾದಳದ ಉಪಾಧ್ಯಕ್ಷರಾಗಿ ರಾಜಕೀಯ ಜವಾಬ್ದಾರಿ ಆರಂಭಿಸಿದ ಅವರು, 1994ರಲ್ಲಿ ಜಿಲ್ಲಾ ಯುವ ಜನತಾದಳದ ಸಂಘಟನಾ ಕಾರ್ಯದರ್ಶಿ, 1997ರಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ, 1998ರಲ್ಲಿ ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಹಾಗೂ 2000ರಲ್ಲಿ ರಾಜ್ಯ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
ಇದಲ್ಲದೆ, 2008ರಿಂದ 2022ರವರೆಗೆ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ವಕ್ತಾರರಾಗಿ ನೇಮಕಗೊಂಡಿರುವ ಎಸ್.ಎಸ್. ಖಾದ್ರಿ ಇನಾಮದಾರ ಅವರ ಅನುಭವದಿಂದ ಜಿಲ್ಲೆಯಾದ್ಯಂತ ಪಕ್ಷದ ಸಂಘಟನೆಗೆ ಮತ್ತಷ್ಟು ಚುರುಕು ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.


