ಸಾಹಿತಿ ಅಡವಿಸ್ವಾಮಿ ಕೊಳಮಲಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 3: ನಗರದ ದ ಚೇತನಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಸಾಹಿತಿ, ಜಾನಪದ ವಿದ್ವಾಂಸ ನಾಡಿನ ಉದಯೋನ್ಮುಖ ಕವಿ ಪ್ರೊ. ಅಡವಿಸ್ವಾಮಿ ಕೊಳಮಲಿಯವರಿಗೆ ಬೆಂಗಳೂರಿನ ಅನ್ವೇಷಣೆ ಸಂಸ್ಕೃತಿಕ ಅಕಾಡೆಮಿಯು ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಮೂಲತ: ನಿಡಗುಂದಿ ತಾಲೂಕಿನ ಕೃಷ್ಣ ನದಿಯ ದಂಡೆ ಮೇಲಿರುವ ಚಿಕ್ಕ ಗ್ರಾಮ ಮಜರೇಕೊಪ್ಪ ಎಂಬ ಚಿಕ್ಕ ಗ್ರಾಮದವರಾದ ಪ್ರೊ. ಅಡವಿಸ್ವಾಮಿ ಕೊಳಮಲಿಯವರು ಇಂದು ನಾಡಿನ ಉದಯೋನ್ಮುಖ ಬರಹಗಾರರಲ್ಲಿ ಪ್ರಮುಖರಾಗಿದ್ದಾರೆ. ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಸಮಿತಿಯ ಸದಸ್ಯರಾಗಿಯೂ ಕೂಡ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರೊ. ಅಡವಿಸ್ವಾಮಿ ಕೊಳಮಲಿಯವರ ಸಮಗ್ರ ಸಾಹಿತ್ಯದ ಸೇವೆಯನ್ನು ಗುರುತಿಸಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಕೊಳಮಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಖ್ಯಾತ ಕಾದಂಬರಿಕಾರ ಶ್ರೀ ಕೌಂಡಿನ್ಯ, ಪ್ರಸಿದ್ಧ ಲೇಖಕ ರಾಗಂ, ರಾಜಶೇಖರ ಮಠಪತಿ, ನಟಿ ಅಕ್ಷತಾ ಪಾಂಡವಪುರ, ಕಿರುತೆರೆ ನಟ ಸಂದೀಪ್ ನೀನಾಸಂ, ಕೃಷಿ ತಜ್ಞ ಅಶ್ವಥನಾರಾಯಣ, ಚಿತ್ರನಟ ರಾಜಕಿರಣ್, ಅನ್ವೇಷಣೆ ಸಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಭದ್ರಾವತಿ ರಾಮಾಚಾರಿ ಮುಂತಾದವರು ಉಪಸ್ಥಿತರಿದ್ದರು.

Share this