ಶೀಘ್ರವೇ ವಿಜಯಪುರದಲ್ಲಿ ಉಕ್ಕಿನಹಕ್ಕಿ ಹಾರಾಟ ಆರಂಭ: ಸಚಿವ ಎಂ. ಬಿ. ಪಾಟೀಲ

ಸಪ್ತಸಾಗರ ವಾರ್ತೆ, ವಿಜಯಪುರ,ಆ. 15:
ನಮಗೆ ಸಿಕ್ಕಿರುವ ಸ್ವಾತಂತ್ರ್ಯವು ನಮ್ಮ ಹಿರಿಯರ ನಿಸ್ವಾರ್ಥ, ತ್ಯಾಗ, ಸಂಕಲ್ಪ ಮತ್ತು ಹೋರಾಟಗಳ ಫಲವಾಗಿದೆ. ಅವರು ಮಾಡಿದ ಹೋರಾಟದಿಂದ ಇಂದು ನಾವೆಲ್ಲರೂ ಸುಖವಾಗಿದ್ದೇವೆ. ಇದನ್ನು ನಾವು ಎಂದಿಗೂ ಮರೆಯದೆ, ಆ ಹಿರಿಯರಿಗೆ ಕೃತಜ್ಞರಾಗಿರಬೇಕು ಮತ್ತು ಈ ಸಂದೇಶವನ್ನು ನಮ್ಮ ಕಿರಿಯ ತಲೆಮಾರಿಗೂ ಮುಟ್ಟಿಸಬೇಕು. ಇದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಅರಿವೇ ಗುರು ಮತ್ತು ಕಾಯಕವೇ ಕೈಲಾಸ ಎಂಬ ತತ್ವಗಳೊಂದಿಗೆ ಸಮಷ್ಠಿ ಭಾವದಲ್ಲಿ ನಂಬಿಕೆಯಿಟ್ಟು ಸಕಲ ಜೀವಿಗಳಿಗೆ ಲೇಸನ್ನೇ ಬಯಸಿದ ಪ್ರಾತಃಸ್ಮರಣೀಯ ಬಸವಾದಿ ಪ್ರಮಥರು, ಶರಣರು, ಸಂತರು, ಸೂಫಿಗಳು, ದಾರ್ಶನಿಕರು, ಸಮಾಜ ಸುಧಾರಕರು, ಸಾಂಸ್ಕೃತಿಕ ಹರಿಕಾರರು ಮತ್ತು ಶೂರ ಸೇನಾನಿಗಳು ಹಾಗೂ ಅಪ್ರತಿಮ ರಾಷ್ಟ್ರಭಕ್ತರು ಭಾರತಾಂಬೆಗೆ ನೀಡಿದ ಕೊಡುಗೆಗಳು ಅಜರಾಮರ. ನಾವು ಸದಾ ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದರು.
ಭೌತಿಕವಾಗಿ, ಭೋಗೋಳಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಆರ್ಥಿಕವಾಗಿ ಸಂಪದ್ಭರಿತವಾಗಿದ್ದ ಸಂವೇದನಾ ಶೀಲ ಭಾರತೀಯರ ಹೂ ಮನಸ್ಸಿನ ಸ್ವಾಭಿಮಾನ ಮತ್ತು ಸಾಮರಸ್ಯತೆಗಳನ್ನು ನಿರ್ದಯವಾಗಿ ಕದಡಿ, ಶೋಷಿಸಿ, ನಿರಂತರವಾಗಿ ದರ್ಪ-ದೌರ್ಜನ್ಯ ಮೆರೆದ ಕಪಟಿ ಬ್ರಿಟಿಷರ ಮೋಸದ ಬಲೆಯನ್ನು, ಕುತಂತ್ರದ ನೀತಿಯನ್ನು ವಿರೋಧಿಸಿ ಭಾರತ ಮಾತೆಯ ಸ್ವಾತಂತ್ರ್ಯಕ್ಕೆ ಹಗಲಿರುಳು ಶ್ರಮಿಸಿದ ಹಾಗೂ ಆಂಗ್ಲರು ಅಮಾನವೀಯವಾಗಿ ವಿಧಿಸಿದ ಕಠಿಣಾತಿ-ಕಠಿಣ ಶಿಕ್ಷೆ, ಹಿಂಸೆ, ಅಪಮಾನ, ದೌರ್ಜನ್ಯ ಮತ್ತು ನೋವುಗಳನ್ನು ಸಹಿಸಿ ದೇಶದ ಸ್ವಾತಂತ್ರ್ಯಕ್ಕಾಗಿ ಹಗಲಿರುಳು ಹೋರಾಡಿದ ನೂರಾರು, ಸಾವಿರಾರು ದೇಶಭಕ್ತರ-ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಮಂಗಲ ಪಾಂಡೆ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಚಾಪೇಕರ ಸಹೋದರರು, ಭಗತ್‍ಸಿಂಗ್, ಚಂದ್ರಶೇಖರ ಆಜಾದ್, ಶಿವರಾಮ್ ರಾಜ್‍ಗುರು, ಸುಖ್‍ದೇವ್ ಥಾಪರ್, ಗೋಪಾಲಕೃಷ್ಣ ಗೋಖಲೆ, ಲೋಕಮಾನ್ಯ ಬಾಲಗಂಗಾಧರ ತಿಲಕ, ಲಾಲಾ ಲಜಪತರಾಯ್, ಬಿಪಿನ್‍ಚಂದ್ರ ಪಾಲ್, ಚಿತ್ತರಂಜನ್ ದಾಸ್, ದಾದಾಬಾಯಿ ನವರೋಜಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಬಾಯಿ ಪಟೇಲ್, ಪಂಡಿತ ಜವಾಹರಲಾಲ್ ನೆಹರು, ಮೌಲಾನ ಅಬ್ದುಲ್ ಕಲಾಂ ಆಝಾದ, ಲಾಲ್ ಬಹಾದ್ದೂರ ಶಾಸ್ತ್ರಿ, ಡಾ.ಬಿ ಆರ್ ಅಂಬೇಡ್ಕರ, ಡಾ. ಬಾಬು ಜಗಜೀವನರಾಮ್ ಮತ್ತು ಸುಭಾಸ್ ಚಂದ್ರ ಭೋಸ್ ಮುಂತಾದ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ಶೌರ್ಯ, ಸಾಹಸ, ತ್ಯಾಗ ಮತ್ತು ಬಲಿದಾನಗಳನ್ನು ನಿರ್ಮಲ ಹೃದಯದಿಂದ ಸ್ಮರಿಸುತ್ತ ಅವರೆಲ್ಲರಿಗೂ ಕೂಡ ಭಕ್ತಿಪೂರ್ವಕ, ಕೃತಜ್ಞತಾಪೂರ್ವಕ ಮತ್ತು ಭಾವಪೂರ್ಣ ಗೌರವ ನಮನ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ದೇಶ್ಯಾದ್ಯಂತ ಸಂಚಲನ ಸೃಷ್ಠಿಸಿರುವ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ “ಅನ್ನಭಾಗ್ಯ ಯೋಜನೆ”ಯಡಿ ಬಿ.ಪಿ.ಎಲ್ ಕುಟುಂಬಗಳ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿಯ ಬದಲಾಗಿ ರೂ.170 ರಂತೆ ಜುಲೈ-2023 ರಿಂದ ಡಿಸೆಂಬರ್-2024 ರವರೆಗೆ ಒಟ್ಟು ರೂ.547.03 ಕೋಟಿಗಳನ್ನು ಈಗಾಗಲೇ ಡಿ.ಬಿ.ಟಿ ಮೂಲಕ ಖಾತೆಗೆ ವರ್ಗಾಯಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿಯಲ್ಲಿ ಫೆಬ್ರುವರಿ-2025 ರಿಂದ ಡಿ.ಬಿ.ಟಿ ಬದಲಾಗಿ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 5 ಕೆ.ಜಿ ಯಂತೆ ಒಟು 15,81,751 ಫಲಾನುಭವಿಗಳಿಗೆ ಪ್ರತಿ ತಿಂಗಳು ಆಹಾರಧಾನ್ಯ ವಿತರಣೆ ಮಾಡಲಾಗುತ್ತಿದೆ ಎಂದರು.
ಜಾತಿ, ಮತ, ಧರ್ಮಗಳನ್ನು ಮೀರಿ ಮಹಿಳೆಯರು ಸಶಕ್ತರಾಗಬೇಕಿರುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ. ಮಹಿಳೆಯರು ಎಲ್ಲ ರಂಗಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂಪೂರ್ಣವಾಗಿ ಸಬಲೀಕರಣಗೊಂಡಾಗ ಮಾತ್ರ ನಮ್ಮ ಸಮಾಜವು ಸದೃಢವಾಗುತ್ತದೆ ಎಂದು ಹೇಳಿದರು.
ಈ ವರ್ಷದ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ನಮ್ಮ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯ ವತಿಯಿಂದ ʻಜಾಗತಿಕ ಹೂಡಿಕೆದಾರರ ಸಮಾವೇಶʼವನ್ನು ಯಶಸ್ವಿಯಾಗಿ ನಡೆಸಲಾಯಿತು. ಇದರ ಪರಿಣಾಮವಾಗಿ ರಾಜ್ಯಕ್ಕೆ 10.27 ಲಕ್ಷ ಕೋಟಿ ರೂ. ಬಂಡವಾಳ ಹರಿದು ಬರುವುದು ಖಾತ್ರಿಯಾಗಿದ್ದು, ಇದರಿಂದ 6 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ.
ಈ ಸಮಾವೇಶದಲ್ಲಿ 1,200 ಕಂಪನಿಗಳು ರಾಜ್ಯದಲ್ಲಿ ಬಂಡವಾಳ ಹೂಡಲು ಆಸಕ್ತಿ ವ್ಯಕ್ತಪಡಿಸಿವೆ. ಈ ಮೂರು ದಿನಗಳ ಸಮಾವೇಶದ ಸಂದರ್ಭದಲ್ಲಿ ಶೇ. 45ರಷ್ಟು ಹೂಡಿಕೆಯು ಉತ್ತರ ಕರ್ನಾಟಕದ ಭಾಗದಲ್ಲೇ ಆಗಲಿದ್ದು, ನಮ್ಮ ವಿಜಯಪುರ ಜಿಲ್ಲೆಯಲ್ಲಿ 42 ಸಾವಿರ ಕೋಟಿ ರೂ. ಹೂಡಿಕೆ ನಡೆಯಲಿದೆ.
ಐದಾರು ತಿಂಗಳ ಹಿಂದೆ ನಮ್ಮ ಜಿಲ್ಲಾ ಕೇಂದ್ರದಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತದಿಂದ (ಕೆಎಸ್‌ಡಿಲ್‌) ಸಾಬೂನು ಮೇಳವನ್ನು ಏರ್ಪಡಿಸಿದ್ದು ನಿಮಗೆಲ್ಲ ಗೊತ್ತೇ ಇದೆ. ಆ ಸಂದರ್ಭದಲ್ಲಿ, ವಿಜಯಪುರದಲ್ಲೂ ಕೆಎಸ್‌ಡಿಎಲ್‌ ಉತ್ಪಾದನಾ ಘಟಕ ತೆರೆಯಲಾಗುವುದು ಎಂದು ಭರವಸೆ ಕೊಟ್ಟಿದ್ದೇನೆ. ಈ ಉದ್ದೇಶಕ್ಕೆ ಈಗ 50 ಎಕರೆ ಜಮೀನು ಹಂಚಿಕೆ‌‌ ಮಾಡಲಾಗಿದೆ. ಈ ಯೋಜನೆಯ ಶಂಕುಸ್ಥಾಪನೆ ಇನ್ನು ಕೆಲವೇ ದಿನಗಳಲ್ಲಿ ಇಲ್ಲಿ ನೆರವೇರಲಿದೆ. ಇದರೊಂದಿಗೆ ಕೆಎಸ್‌ಡಿಎಲ್‌ ಉತ್ತರ ಕರ್ನಾಟಕದಲ್ಲೂ ನೆಲೆಯೂರಲಿದೆ ಎಂದು ತಿಳಿಸಿದರು.
ವಿಜಯಪುರ ಅಂದರೆ ಬರಪೀಡಿತ ಪ್ರದೇಶ ಎನ್ನುವ ಕಾಲ ಆಗಿ ಹೋಯಿತು. ಈಗ ಇದು ತೋಟಗಾರಿಕೆ ಜಿಲ್ಲೆ ಎಂದು ಹೆಸರಾಗಿದೆ. ಇದರ ಜೊತೆಗೆ ವಿಜಯಪುರವನ್ನು ಕೈಗಾರಿಕಾ ಸಂಸ್ಕೃತಿಯ ಜಿಲ್ಲೆಯನ್ನಾಗಿ ಮಾಡಬೇಕೆಂಬುದು ನನ್ನ ಮಹದಾಸೆಯಾಗಿದೆ.
ಇದಕ್ಕೆ ತಕ್ಕಂತೆ, ಜಿಲ್ಲೆಯನ್ನು ಮುಖ್ಯವಾಗಿ ಇಂಧನ ಕ್ಷೇತ್ರದ ಸಾಧನಗಳು, ಮೆಶಿನರೀಶ್‌ ಮತ್ತು ಎಕ್ವಿಪ್‌ಮೆಂಟ್‌, ನಾನ್‌-ಮೆಟಲಿಕ್‌ ಖನಿಜದ ಉತ್ಪನ್ನಗಳು, ಕೃಷಿ ಮತ್ತು ಕೃಷಿ ಆಧರಿತ ಉತ್ಪನ್ನಗಳು, ನ್ಯೂಟ್ರಾಸುಟಿಕಲ್‌ ಮೆಡಿಸಿನಲ್‌ ಮತ್ತು ಬೊಟಾನಿಕಲ್‌ ಉತ್ಪನ್ನಗಳು, ವಿಶೇಷ ಅಲಾಯ್‌ ಹಾಗೂ ಲೋಹೋತ್ಪನ್ನ- ಹೀಗೆ ಮುಖ್ಯವಾಗಿ ಆರು ವಲಯಗಳಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಈ ಸಂಬಂಧವಾಗಿ ಏಕಸ್‌ ಎಸ್‌ಇಝೆಡ್‌ ಮತ್ತು ಸಿಬಿಆರ್‌ಇ ಸಂಸ್ಥೆಗಳ ಉನ್ನತ ಮಟ್ಟದ ಸಮಿತಿ ಸರಕಾರಕ್ಕೆ ವರದಿ ಸಲ್ಲಿಸಿದೆ. ಇವೆಲ್ಲದರ ಫಲವಾಗಿ ಜಿಲ್ಲೆಗೆ ನಾನಾ ಕಂಪನಿಗಳು ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿವೆ. ಇವೆಲ್ಲವೂ ನನಸಾದರೆ, ಒಟ್ಟು 17 ಸಾವಿರ ಕೋಟಿ ರೂಪಾಯಿಗಳಷ್ಟು ಅಗಾಧ ಬಂಡವಾಳವು ಜಿಲ್ಲೆಗೆ ಇನ್ನು 2-3 ವರ್ಷಗಳಲ್ಲಿ ಹರಿದು ಬರಲಿದೆ ಎಂದು ತಿಳಿಸಿದರು.
ಇದಕ್ಕೆ ಪೂರಕವಾಗಿ ಜಿಲ್ಲೆಯಲ್ಲಿ ಮುಳವಾಡ ಗ್ರಾಮದಲ್ಲಿ ಇರುವ 300 ಎಕರೆ ಕೆಐಎಡಿಬಿ ಜಾಗದಲ್ಲಿ ʻಮ್ಯಾನಫ್ಯಾಕ್ಚರಿಂಗ್‌ ಕ್ಲಸ್ಟರ್‌ʼ ಸ್ಥಾಪಿಸಲಾಗುವುದು. ಇದನ್ನು ನಾವು ಬಜೆಟ್ಟಿನಲ್ಲೇ ಘೋಷಿಸಿದ್ದೇವೆ.
ಇದರ ಜೊತೆಗೆ, ಜಿಲ್ಲೆಯ ತಿಡಗುಂದಿಯಲ್ಲಿ 1,200 ಎಕರೆ ವಿಸ್ತೀರ್ಣದಲ್ಲಿ ಕೈಗಾರಿಕೆ ಮತ್ತು ಲಾಜಿಸ್ಟಿಕ್ಸ್‌ ಪಾರ್ಕ್‌ ಸ್ಥಾಪಿಸಲು ಈಗಾಗಲೇ ಚಾಲನೆ ನೀಡಲಾಗಿದೆ. ಈ ಯೋಜನೆಗೆ 25 ಸಾವಿರ ಕೋಟಿ ರೂ. ಹೂಡಿಕೆ ಆಗುತ್ತಿದ್ದು, ಇದರಿಂದ 20 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದರಿಂದಾಗಿ ಸ್ಥಳೀಯ ಯುವಜನರಿಗೆ ಒಳ್ಳೆಯ ಉದ್ಯೋಗಗಳು ಮನೆಬಾಗಿಲಲ್ಲೇ ಸಿಗಲಿವೆ ಎಂದು ಹೇಳಿದರು.
ಈ ಪೈಕಿ ಸುಜ್ಲಾನ್‌ ಕಂಪನಿಯು 5,000 ಮೆಗಾವ್ಯಾಟ್‌ ಸಾಮರ್ಥ್ಯದ ಪವನ ವಿದ್ಯುತ್‌ ಉತ್ಪಾದನಾ ಸ್ಥಾವರವನ್ನು ಜಿಲ್ಲೆಯಲ್ಲಿ ಸ್ಥಾಪಿಸಲಿದೆ. ಇದರ ಭಾಗವಾಗಿ ಕಂಪನಿಯು 360 ಕೋಟಿ ರೂ. ಬಂಡವಾಳ ಹೂಡಲಿದೆ. ರೆನೈಸಾನ್ಸ್‌ ಕಂಪನಿಯು ಸೌರಫಲಕಗಳ ಬಿಡಿಭಾಗಗಳನ್ನು ಮತ್ತು ಎಲೆಕ್ಟ್ರಾನಿಕ್‌ ಮೆಟೀರಿಯಲ್ಸ್‌ ತಯಾರಿಸುವ ಉದ್ಯಮಗಳನ್ನು ನಮ್ಮ ಜಿಲ್ಲೆಯಲ್ಲಿ ಆರಂಭಿಸುತ್ತಿದೆ. ಇದಕ್ಕೆ ಅದು 6,000 ಕೋಟಿ ರೂಪಾಯಿ ಬಂಡವಾಳ ತೊಡಗಿಸಲಿದೆ. 2030ರ ಹೊತ್ತಿಗೆ ಈ ಕಂಪನಿಯು ವರ್ಷಕ್ಕೆ 20 ಸಾವಿರ ಮೆಗಾವ್ಯಾಟ್‌ ಸೌರವಿದ್ಯುತ್‌ ಉತ್ಪಾದಿಸಲಿದೆ. ಜಿಲ್ಲೆಯಲ್ಲಿ ಬಂಡವಾಳ ತೊಡಗಿಸಲು ಸೌರಫಲಕಗಳ ತಯಾರಿಕೆಗೆ ರೆನ್ಯೂ ಪವರ್‌ ಕಂಪನಿ 4,700 ಕೋಟಿ ರೂ, ಸೋಲಾರ್‌ ವೇಫರ್‌ಗಳ ತಯಾರಿಕೆಗೆ ಆರ್ಸೊಲೆಕ್‌ ಕಂಪನಿ 4,000 ಕೋಟಿ ರೂ, ಬಣ್ಣ ಮತ್ತು ರಾಸಾಯನಿಕಗಳ ತಯಾರಿಕೆ ಕ್ಷೇತ್ರದಲ್ಲಿ ಗ್ರಾಸಿಂ ಕಂಪನಿ ಬಂಡವಾಳ ಹೂಡಿಕೆಗೆ ತೀರ್ಮಾನಿಸಿವೆ. ಈ ಪ್ರಸ್ತಾವನೆಗಳು ನಾನಾ ಹಂತಗಳಲ್ಲಿ ಪ್ರಗತಿಯಲ್ಲಿದೆ. ಹಾಗೆಯೇ, ಸಿವಿಸಿ/ಪಿವಿಸಿ ಪೈಪುಗಳನ್ನು ತಯಾರಿಸುವ ಪೊದ್ದಾರ್‌ ಕಂಪನಿ ಕೂಡ ನಮ್ಮ ಜಿಲ್ಲೆಯಲ್ಲಿ ತನ್ನದೊಂದು ಘಟಕ ತೆರೆಯಲಿದೆ ಎಂದರು.
ರಿಲಯನ್ಸ್‌ ಕಂಪನಿಯ ಭಾಗವಾಗಿರುವ ಕ್ಯಾಂಪಾಕೋಲಾ, ಜಿಲ್ಲೆಯ ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ತನ್ನ ತಂಪು ಪಾನೀಯ, ಕುಡಿಯುವ ನೀರು ಮತ್ತು ಬಾಟ್ಲಿಂಗ್‌ ಘಟಕವನ್ನು ಆರಂಭಿಸಲಿದ್ದು, ಇದಕ್ಕಾಗಿ 1,622 ಕೋಟಿ ರೂ. ವಿನಿಯೋಗಿಸುತ್ತಿದೆ. ಈ ಸಲುವಾಗಿ ಕಂಪನಿಗೆ ಸರಕಾರ 100 ಎಕರೆ ಜಾಗ ನೀಡಲಿದೆ. ಜಿಲ್ಲೆಯಲ್ಲಿ ಹೂಡಿಕೆ ಮಾಡಲು ಎಫ್‌ಎಂಸಿಜಿ ವಲಯದಲ್ಲಿ 30, ಸೋಲಾರ್‌ ವಲಯದಲ್ಲಿ 25 ಮತ್ತು ಜವಳಿ ವಲಯದಲ್ಲಿ 15ಕ್ಕೂ ಹೆಚ್ಚು ಕಂಪನಿಗಳು ಆಸಕ್ತಿ ತೋರಿಸಿವೆ. ನಮ್ಮ ಜಿಲ್ಲೆಯಲ್ಲಿ ಎಥೆನಾಲ್‌ ಮತ್ತು ಚಾಕೊಲೇಟ್‌ ತಯಾರಿಕಾ ಕಂಪನಿಗಳೂ ಒಳ್ಳೆಯ ಅವಕಾಶವಿದ್ದು, ಈ ಕಂಪನಿಗಳೊಂದಿಗೆ ಮಾತುಕತೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಜಿಲ್ಲಾ ಕೇಂದ್ರದ ಹೊರವಲಯದಲ್ಲಿ 15 ಕಿ.ಮೀ. ದೂರದಲ್ಲಿ 727 ಎಕರೆ ವಿಸ್ತೀರ್ಣದಲ್ಲಿ 21ನೇ ಶತಮಾನದ ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ವಿಮಾನ ನಿಲ್ದಾಣವನ್ನು ಸುಸಜ್ಜಿತವಾಗಿ ಅಭಿವೃದ್ಧಿ ಪಡಿಸಲಾಗಿದೆ. 347 ಕೋಟಿ ರೂ. ಮೊತ್ತದ ಈ ಯೋಜನೆಗೆ ಕೇಂದ್ರ ಪರಿಸರ ಇಲಾಖೆಯ ಅನುಮತಿ ಮಾತ್ರ ಬಾಕಿ ಇದ್ದು, ಯಾವುದೇ ಕ್ಷಣದಲ್ಲಿ ಬೇಕಾದರೂ ಇದು ಸಿಗಬಹುದು. ಈ ಸಂಬಂಧ ಇತ್ತೀಚೆಗೆ ದೆಹಲಿಗೆ ತೆರಳಿ, ಕೇಂದ್ರ ನಾಗರಿಕ ವಿಮಾನಯಾನ ಸಚಿವರ ಗಮನವನ್ನು ಸೆಳೆದಿದ್ದೇನೆ. ಇದರಿಂದಾಗಿ ವಿಜಯಪುರ, ಬಾಗಲಕೋಟೆ ಮತ್ತು ಅಕ್ಕಪಕ್ಕದ ಜಿಲ್ಲೆಗಳಲ್ಲಿ ಆರ್ಥಿಕ ಚಟುವಟಿಕೆಗಳು, ಕೃಷಿ ಉತ್ಪನ್ನ ಆಧರಿತ ಉದ್ಯಮಗಳು, ಪ್ರವಾಸೋದ್ಯಮ, ಶೈಕ್ಷಣಿಕ ಸಂಸ್ಕೃತಿ, ಕೃಷಿ ಉತ್ಪನ್ನಗಳ ಸಾಗಾಣಿಕೆ, ರಫ್ತು ಇವೆಲ್ಲವೂ ಬೆಳೆಯಲಿವೆ. ದಕ್ಷಿಣ ಮಹಾರಾಷ್ಟ್ರ, ಗೋವಾ, ಉತ್ತರ ಭಾರತದ ಸಂಪರ್ಕ ಕೂಡ ಇದರಿಂದ ಸುಲಭವಾಗಲಿದ್ದು, ಇವೆಲ್ಲವೂ ಅಪಾರ ಸಂಖ್ಯೆಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಲಿವೆ. ಹಾಗೆಯೇ, ನಮ್ಮಿಂದ ಬೆಂಗಳೂರಿಗೆ ರೈಲು ಪ್ರಯಾಣ ಈಗ ದೀರ್ಘವಾಗಿದ್ದು, 15-16 ಗಂಟೆಗಳನ್ನು ತೆಗೆದುಕೊಳ್ಳುತ್ತಿದೆ. ಇವತ್ತಿನ ವೇಗದ ಯುಗದಲ್ಲಿ ಇದು ಆಯಾಸದಾಯಕವಾಗಿರುತ್ತದೆ. ಇದನ್ನು ಪರಿಗಣಿಸಿ, ಈ ಪ್ರಯಾಣದ ಅವಧಿಯನ್ನು 10 ಗಂಟೆಗಳಿಗೆ ಇಳಿಸಲು ಶ್ರಮಿಸುತ್ತಿದ್ದೇನೆ.
ಈ ನಿಟ್ಟಿನಲ್ಲಿ ನೈರುತ್ಯ ರೈಲ್ವೆ ಅಧಿಕಾರಿಗಳು ಮತ್ತು ಕೇಂದ್ರ ಸಚಿವ ವಿ.ಸೋಮಣ್ಣನವರೊಂದಿಗೆ ಈಗಾಗಲೇ ಸಭೆಗಳನ್ನು ನಡೆಸಲಾಗಿದೆ. ಮುಖ್ಯವಾಗಿ, ಬೆಂಗಳೂರಿಗೆ ಹೋಗುವಾಗ, ಬರುವಾಗ ಹುಬ್ಬಳ್ಳಿ ಬೈಪಾಸ್‌ ಮೂಲಕವೇ ರೈಲುಗಳು ಸಂಚರಿಸುವಂತೆ ಮಾಡಬೇಕೆನ್ನುವುದು ನನ್ನ ಪ್ರಾಮಾಣಿಕ ಪ್ರಯತ್ನವಾಗಿದೆ. ಇದರ ಜೊತೆಯಲ್ಲೇ ವಿಜಯಪುರ ಮತ್ತು ಬೆಂಗಳೂರು ನಡುವೆ ವಂದೇ ಭಾರತ್‌ ರೈಲು ಸಂಚಾರ ಆರಂಭಕ್ಕೂ ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ. ವಿಜಯಪುರ- ಬಾಗಲಕೋಟೆ ನಡುವಿನ ವಿದ್ಯುದ್ದೀಕರಣ ಯೋಜನೆ ಸ್ವಲ್ಪ ಬಾಕಿ ಇದ್ದು, ಅದು ಪೂರ್ಣಗೊಂಡ ನಂತರ ವಂದೇ ಭಾರತ್ ರೈಲುಗಳ ಸಂಚಾರ ಆರಂಭಿಸಲಾಗುವುದು. ಇದು ನನಸಾಗುವ ದಿನಗಳು ಹತ್ತಿರವಿದ್ದು, ಬೆಂಗಳೂರು ನಮಗೆ ಇನ್ನಷ್ಟು ಹತ್ತಿರವಾಗಲಿದೆ ಎಂದು ನುಡಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತಕ್ಕೆ 70 ಸಾವಿರ ಎಕರೆ ಜಮೀನು ಅಗತ್ಯವಿದೆ. ಇದನ್ನು ನಾವು ರೈತರ ಸಮ್ಮತಿಯೊಂದಿಗೆ, ಒಮ್ಮತದಿಂದ ಸ್ವಾಧೀನ ಪಡಿಸಿಕೊಳ್ಳುತ್ತಿದ್ದೇವೆ. ಇದು ನಿಜಕ್ಕೂ ಇಡೀ ದೇಶಕ್ಕೇ ಮೇಲ್ಪಂಕ್ತಿಯಾಗಲಿದೆ ಎಂದರು.

Share